
ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ನಿರ್ಣಾಯಕ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯ ಭೀತಿ ಇರುವುದರಿಂದ ಟಾಸ್ ಗೆದ್ದ ನಂತರ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವುದಾಗಿ ಪಾಕ್ ನಾಯಕಿ ಸನಾ ಫಾತಿಮಾ ಹೇಳಿದ್ದಾರೆ. ಏಷ್ಯಾಕಪ್‌ನಲ್ಲಿ ಪುರುಷರ ತಂಡಗಳ ಹಸ್ತಲಾಘವ ವಿವಾದದ ನಂತರ, ಭಾರತ-ಪಾಕಿಸ್ತಾನ ಮಹಿಳಾ ಆಟಗಾರ್ತಿಯರು ಮೊದಲ ಬಾರಿಗೆ ಮುಖಾಮುಖಿಯಾದ ಪಂದ್ಯದಲ್ಲಿ ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕ್ ನಾಯಕಿ ಸನಾ ಫಾತಿಮಾ ಹಸ್ತಲಾಘವ ಮಾಡದೇ ಗಮನ ಸೆಳೆದಿದ್ದಾರೆ. ಹೀಗಾಗಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯವು 'ನೋ ಶೇಕ್‌ಹ್ಯಾಂಡ್'ಗೆ ಸಾಕ್ಷಿಯಾಯಿತು.
ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದೀಗ ಮಹಿಳಾ ಕ್ರಿಕೆಟಿಗರು ಅದೇ ಪ್ರತಿರೋಧ ತೋರಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳೇ ಸುಳಿವು ನೀಡಿದ್ದು, ಭಾರತೀಯ ಆಟಗಾರ್ತಿರು ಪಾಕ್ ಜೊತೆ ಕೈಕುಲುವುದಿಲ್ಲ ಎಂದಿದ್ದರು.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಬ್ಯಾಟಿಂಗ್ ಆಲ್‌ರೌಂಡರ್ ಅಮನ್‌ಜ್ಯೋತ್ ಕೌರ್ ಬದಲಿಗೆ ಬೌಲರ್ ರೇಣುಕಾ ಸಿಂಗ್ ಠಾಕೂರ್ ಭಾರತದ ಪ್ಲೇಯಿಂಗ್ XIಗೆ ಬಂದಿದ್ದಾರೆ. ಅಮನ್‌ಜ್ಯೋತ್ ಕೌರ್ ಅನಾರೋಗ್ಯ ಸಮಸ್ಯೆಯಿಂದಾಗಿ ಒಂದು ಬದಲಾವಣೆ ಮಾಡಿರುವುದಾಗಿ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ತಿಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿದ್ದ ಪಾಕಿಸ್ತಾನ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಒಮೈಮಾ ಸೊಹೈಲ್ ಬದಲಿಗೆ ಸದಫ್ ಶಮಾಸ್ ಪಾಕಿಸ್ತಾನದ ಪ್ಲೇಯಿಂಗ್ XIಗೆ ಬಂದಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 59 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳಿಂದ ಸೋತಿತ್ತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದ 27 ಪಂದ್ಯಗಳಲ್ಲಿ 24ರಲ್ಲಿ ಭಾರತ ಗೆದ್ದಿದೆ. ಪಾಕಿಸ್ತಾನದ ಮೂರು ಗೆಲುವುಗಳು ಟಿ20ಯಲ್ಲಿ ಬಂದಿವೆ.
ಪಾಕಿಸ್ತಾನ ಪ್ಲೇಯಿಂಗ್ XI: ಮುನೀಬಾ ಅಲಿ, ಸದಫ್ ಶಮ್ಸ್, ಸಿದ್ರಾ ಅಮೀನ್, ಆಲಿಯಾ ರಿಯಾಝ್, ನತಾಲಿಯಾ ಪರ್ವೈಝ್, ಫಾತಿಮಾ ಸನಾ (ನಾಯಕಿ), ರಮೀನ್ ಶಮೀಮ್, ಡಯಾನಾ ಬೇಗ್, ಸಿದ್ರಾ ನವಾಝ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಸ್ನೇಹ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.