ಮಹಿಳಾ ಐಪಿಎಲ್ ಟೂರ್ನಿಯ ಮಾಧ್ಯಮ ಪ್ರಸಾರದ ಹಕ್ಕು ವೈಕಾಮ್18 ಪಾಲು
ಬರೋಬ್ಬರಿ 951 ಕೋಟಿ ರುಪಾಯಿ ನೀಡಿ ಮಾಧ್ಯಮ ಹಕ್ಕು ಖರೀದಿಸಿದ ವೈಕಾಮ್18 ಸಂಸ್ಥೆ
ಮುಂದಿನ 5 ವರ್ಷಕ್ಕೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರುಪಾಯಿ ಮೌಲ್ಯ
ಮುಂಬೈ(ಜ.16): ಚೊಚ್ಚಲ ಆವೃತ್ತಿಯ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ಆರಂಭವಾಗಿವೆ. ಇದೀಗ 2023-27ರ ವರೆಗಿನ 5 ವರ್ಷಗಳ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು ಬರೋಬ್ಬರಿ 951 ಕೋಟಿ ರುಪಾಯಿಗೆ ವೈಕಾಮ್18 ಸಂಸ್ಥೆಯ ಪಾಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
ಇದರನ್ವಯ ವೈಕಾಮ್18 ಸಂಸ್ಥೆಯು ಮುಂದಿನ ಐದು ವರ್ಷಗಳ ಅವಧಿಗೆ ಬಿಸಿಸಿಐಗೆ ಪ್ರತಿಪಂದ್ಯಕ್ಕೆ 7.09 ಕೋಟಿ ರುಪಾಯಿಗಳನ್ನು ನೀಡಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, "ಮಹಿಳಾ ಐಪಿಎಲ್ ಮಾಧ್ಯಮ ಹಕ್ಕನ್ನು ಜಯಿಸಿದ ವೈಕಾಮ್18ಗೆ ಅಭಿನಂದನೆಗಳು. ಬಿಸಿಸಿಐ ಹಾಗೂ ಬಿಸಿಸಿಐ ಮಹಿಳಾ ಕ್ರಿಕೆಟ್ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಧನ್ಯವಾದಗಳು. ವೈಕಾಮ್ ಸಂಸ್ಥೆಯು 2023-27ರ ವರೆಗೆ 951 ಕೋಟಿ ರುಪಾಯಿ ಅಂದರೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರುಪಾಯಿ ಮೌಲ್ಯವನ್ನು ನೀಡುತ್ತದೆ. ಇದು ಮಹಿಳಾ ಕ್ರಿಕೆಟ್‌ನಲ್ಲಿ ಸಣ್ಣ ಮೊತ್ತವೇನಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
Congratulations for winning the Women’s media rights. Thank you for your faith in and . Viacom has committed INR 951 crores which means per match value of INR 7.09 crores for next 5 years (2023-27). This is massive for Women’s Cricket 🙏🇮🇳
— Jay Shah (@JayShah)ಮುಂದುವರೆದು, ವೇತನ ಸಮಾನತೆ ಬಳಿಕ, ಇದೀಗ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು, ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಒಂದು ಮಹತ್ತರ ಮೈಲಿಗಲ್ಲು. ಭಾರತೀಯ ಮಹಿಳಾ ಕ್ರಿಕೆಟ್ ಬೆಳವಣಿಗೆಯ ವಿಚಾರದಲ್ಲಿ ನಾವಿಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದ್ದೇವೆ. ಇದರಿಂದ ಎಲ್ಲಾ ವಯೋಮಾನದ ಮಹಿಳೆಯರು ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
BCCI ಬಳಿ 130 ಕೋಟಿ ರುಪಾಯಿ ಡಿಸ್ಕೌಂಟ್ ಕೇಳಿದ ಸ್ಟಾರ್ ಸಂಸ್ಥೆ! ಬೈಜುಸ್‌ನಿಂದ್ಲೂ ಹೊಸ ಪ್ರಸ್ತಾಪ..!
ಮಹಿಳಾ ಐಪಿಎಲ್ ಟೂರ್ನಿಗೆ ಮಾಧ್ಯಮ ಹಕ್ಕನ್ನು ಖರೀದಿಸಲು ಬಿಸಿಸಿಐ ಕಳೆದ ಜನವರಿ 03ರಂದು ಟೆಂಡರ್ ಆಹ್ವಾನಿಸಿತ್ತು. ಅದರಂತೆ ಇದೀಗ ಮಾಧ್ಯಮ ಹಕ್ಕು ವೈಕಾಮ್18 ಸಂಸ್ಥೆಯ ಪಾಲಾಗಿದೆ. ಕಳೆದ ವರ್ಷ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ, 2023ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸುವ ಕುರಿತಂತೆ ಮಹತ್ತರವಾದ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ 5 ತಂಡಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ.
ಮಹಿಳಾ ಐಪಿಎಲ್ ಟೂರ್ನಿಯು ಯಾವ ದಿನಾಂಕದಿಂದ ಆರಂಭವಾಗಲಿದೆ ಎನ್ನುವ ಕುರಿತಂತೆ ಇದುವರೆಗೂ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನು ಈ ಬಾರಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಯಾವೆಲ್ಲಾ 5 ತಂಡಗಳು ಪಾಲ್ಗೊಳ್ಳಲಿವೆ ಎನ್ನುವ ಮಾಹಿತಿಯನ್ನು ಜನವರಿ 25ರಿಂದ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ. ಬಿಸಿಸಿಐ ಈಗಾಗಲೇ ದೇಶದ 10 ನಗರಗಳ ಹೆಸರನ್ನು ಪಟ್ಟಿಮಾಡಿದ್ದು, 10 ಫ್ರಾಂಚೈಸಿಗಳ ಪೈಕಿ 8 ಫ್ರಾಂಚೈಸಿಗಳು ಮಹಿಳಾ ಐಪಿಎಲ್ ತಂಡಗಳನ್ನು ಖರೀದಿಸಲು ಒಲವು ತೋರಿವೆ ಎಂದು ವರದಿಯಾಗಿದೆ.