ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಸರ್ಫರಾಜ್‌ ಖಾನ್‌ ಬೇಸರ..! ನನಗೇಕೆ ಸ್ಥಾನ ಸಿಗುತ್ತಿಲ್ಲ?

By Naveen KodaseFirst Published Jan 16, 2023, 11:48 AM IST
Highlights

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸರ್ಫರಾಜ್ ಖಾನ್ ವಿಫಲ
ಆಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಮುಂಬೈ ಕ್ರಿಕೆಟಿಗ ಫೇಲ್
ನಾನು ಅಭ್ಯಾಸ ಮಾಡಿಸುವುದನ್ನು ನಿಲ್ಲಿಸಲ್ಲ ಎಂದ ಸರ್ಫರಾಜ್ ಖಾನ್

ಮುಂಬೈ(ಜ.16): ದೇಸಿ ಕ್ರಿಕೆಟ್‌ನಲ್ಲಿ ರಾಶಿ ರಾಶಿ ರನ್‌ ಹೊಡೆದರೂ ಬಿಸಿಸಿಐ ಆಯ್ಕೆಗಾರರು ಪದೇಪದೇ ನಿರ್ಲಕ್ಷ್ಯಿಸುತ್ತಿರುವುದಕ್ಕೆ ಮುಂಬೈ ಬ್ಯಾಟರ್‌ ಸರ್ಫರಾಜ್‌ ಖಾನ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡ ಪ್ರಕಟಗೊಂಡಾಗ ಸರ್ಫರಾಜ್‌ ಹೆಸರಿರಲಿಲ್ಲ. ಬದಲಾಗಿ ಅವರ ಆಪ್ತ ಸ್ನೇಹಿತ ಸೂರ್ಯಕುಮಾರ್‌ ಯಾದವ್‌ಗೆ ಅವಕಾಶ ನೀಡಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಫರಾಜ್‌, ‘ನಾನು ಎಲ್ಲೇ ಹೋದರೂ ಸದ್ಯದಲ್ಲೇ ನೀವು ಭಾರತ ತಂಡದಲ್ಲಿ ಆಡುತ್ತೀರಿ ಎನ್ನುತ್ತಾರೆ. ತಂಡದಲ್ಲಿ ನನ್ನ ಹೆಸರಿಲ್ಲದ್ದನ್ನು ಕಂಡು ಇಡೀ ರಾತ್ರಿ ನಾನು ನಿದ್ದೆ ಮಾಡಲಿಲ್ಲ. ನನಗೇಕೆ ಸ್ಥಾನ ಸಿಗುತ್ತಿಲ್ಲ ಎನ್ನುವ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಆದರೆ ನಾನು ಪ್ರಯತ್ನ ನಿಲ್ಲಿಸುವುದಿಲ್ಲ’ ಎಂದಿದ್ದಾರೆ. 

2019ರಿಂದ ಸರ್ಫರಾಜ್‌ ಖಾನ್ 22 ಪ್ರ.ದರ್ಜೆ ಇನ್ನಿಂಗ್ಸಲ್ಲಿ 134.64ರ ಸರಾಸರಿಯಲ್ಲಿ 2289 ರನ್‌ ಗಳಿಸಿದ್ದಾರೆ. 14 ಶತಕ ಬಾರಿಸಿದ್ದು, ಇದರಲ್ಲಿ 2 ದ್ವಿಶತಕ, 1 ತ್ರಿಶತಕ ಸಹ ಸೇರಿವೆ. ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಸರ್ಫರಾಜ್ ಖಾನ್ ಅವರನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಟೆಸ್ಟ್‌ ತಂಡದಲ್ಲಿ ಸ್ಥಾನ ದೊರೆಯಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿತ್ತು.

ಏಕದಿನ ವಿಶ್ವಕಪ್‌ ಪಂದ್ಯ ಬೆಳಗ್ಗೆ 11.30ಕ್ಕೆ ಆರಂಭಿಸಿ: ರವಿಚಂದ್ರನ್ ಅಶ್ವಿನ್ ಮಹತ್ವದ ಸಲಹೆ

ನನ್ನ ಹೆಸರು ಭಾರತ ತಂಡದ ಆಟಗಾರರ ಪಟ್ಟಿಯಲ್ಲಿ ಇಲ್ಲದೇ ಇರುವುದನ್ನು ನೋಡಿ ಸಾಕಷ್ಟು ಬೇಸರವಾಯಿತು. ಆದರೆ ಇದು ನನ್ನ ಕೈಯಲ್ಲಿ ಇಲ್ಲ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ನಾನು ಎಲ್ಲಾ ಪ್ರಯತ್ನವನ್ನು ನಡೆಸುತ್ತಿದ್ದೇನೆ. ನಾನು ಹಗಲು-ರಾತ್ರಿ ಎನ್ನದೇ ಅಭ್ಯಾಸ ನಡೆಸಿದ್ದೇನೆ. ನಾನು ಪ್ರತಿನಿತ್ಯ ಅಭ್ಯಾಸ ನಡೆಸುತ್ತಲೇ ಇದ್ದೇನೆ. ನಾನು ಬೆಳೆಯುತ್ತಿದ್ದಂತೆಯೇ ಮನೆಯಲ್ಲಿ, ಮುಂಬೈ ರಣಜಿ ತಂಡದಲ್ಲಿ ಖಂಡಿತ ಸ್ಥಾನ ಪಡೆಯುತ್ತಾನೆ ಎನ್ನುತ್ತಿದ್ದರು. ಈಗ ಭಾರತ ತಂಡದಲ್ಲಿ ಸ್ಥಾನ ಪಡೆಯೋದು ಯಾವಾಗ ಎನ್ನುತ್ತಿದ್ದಾರೆ. ಹೀಗಾಗಿ ಆ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಎರಡು ವಾರ ಮೊದಲು 26 ವರ್ಷದ ಸರ್ಫರಾಜ್ ಖಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಚೇತನ್ ಶರ್ಮಾ, ಎಲ್ಲಾ ಒಳ್ಳೆಯ ಕ್ಷಣಗಳು ತಡವಾಗಿಯಾದರೂ ಬಂದೇ ಬರುತ್ತದೆ. ಕ್ರಿಕೆಟ್‌ನಲ್ಲಿ ಸಮಯಕ್ಕೆ ಸಾಕಷ್ಟು ಮಹತ್ವವಿದೆ. ಯಾವುದೇ ಕಾರಣಕ್ಕೂ ದೃತಿಗೆಡಬೇಡಿ ಎಂದು ಹೇಳಿದ್ದರು. 

ಕೆಲ ದಿನಗಳ ಹಿಂದಷ್ಟೇ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಬೇಕಿದ್ದರೇ, ದೇಶಿ ಕ್ರಿಕೆಟ್‌ನಲ್ಲಿ ತೋರುವ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ನಿಯಮವನ್ನು ಪ್ರಕಟಿಸಿದೆ. ಆದರೆ ಸರ್ಫಾರಾಜ್ ಖಾನ್ ವಿಚಾರದಲ್ಲಿ ಇದು ಅನ್ವಯವಾಗಿಲ್ಲ ಎನ್ನುವ ಮಾತುಗಳು ಜೋರಾಗಿ ಕೇಳಿ ಬರಲಾಂಭಿಸಿವೆ. 

click me!