
ಚೆನ್ನೈ(ಜೂ.02): ಬಹುನಿರೀಕ್ಷಿತ ಮಹಿಳಾ ಐಪಿಎಲ್ (Women's IPL) ನಡೆಸಲು ಯೋಜನೆ ಹಾಕಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಉದ್ಘಾಟನಾ ಆವೃತ್ತಿಯನ್ನು 2023ರ ಮಾರ್ಚ್‌ನಲ್ಲಿ ಆಯೋಜಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವಾರ ಐಪಿಎಲ್ ಪ್ಲೇ-ಆಫ್ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹಾಗೂ ಕಾರ‍್ಯದರ್ಶಿ ಜಯ್ ಶಾ (Jay Shah) ಈ ಬಗ್ಗೆ ಚರ್ಚೆ ನಡೆಸಿದ್ದು, ಮಾರ್ಚ್‌ನಲ್ಲಿ ಸಾಧ್ಯವಾಗದಿದ್ದರೆ 2023ರ ಸೆಪ್ಟಂಬರ್‌ನಲ್ಲಿ ಟೂರ್ನಿ ಆಯೋಜಿಸಲು ಎದುರು ನೋಡುತ್ತಿದ್ದಾರೆ. ಕ್ರಿಕೆಟ್ ಆಸ್ಪ್ರೇಲಿಯಾ (Cricket Australia) ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜೊತೆ ಈಗಾಗಲೇ ಮಾತುಕತೆ ನಡೆಸಿರುವ ಬಿಸಿಸಿಐ, ಶೀಘ್ರದಲ್ಲೇ ಐಸಿಸಿ ಜೊತೆ ಚರ್ಚೆ ನಡೆಸಲಿದೆ ಎಂದು ಗೊತ್ತಾಗಿದೆ.
2023ರ ಜುಲೈ-ನವೆಂಬರ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ದ ಹಂಡ್ರೆಡ್, ಮಹಿಳಾ ಬಿಗ್‌ಬ್ಯಾಶ್ ಟೂರ್ನಿಗಳು ನಡೆಯಲಿದ್ದು, ಬಳಿಕ ಡಿಸೆಂಬರ್-ಫೆಬ್ರವರಿಯಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಆಟಗಾರ್ತಿಯರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹೀಗಾಗಿ ಮಾರ್ಚ್‌ನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಐಪಿಎಲ್‌ನ ಕೋಲ್ಕತಾ ಹಾಗೂ ರಾಜಸ್ಥಾನ ಫ್ರಾಂಚೈಸಿಗಳು ತಂಡ ಖರೀದಿಸುವ ಆಸಕ್ತಿ ತೋರಿವೆ.
ಶೀಘ್ರ ವರ್ಷಕ್ಕೆ 2 ಐಪಿಎಲ್ ನಡೆಯಬಹುದು: ರವಿಶಾಸ್ತ್ರಿ
ನವದೆಹಲಿ: ದ್ವಿಪಕ್ಷೀಯ ಟಿ20 ಸರಣಿಗಳಿಗೆ ಮಹತ್ವವಿಲ್ಲ. ಟಿ20 ಮಾದರಿಯನ್ನು ಕೇವಲ ವಿಶ್ವಕಪ್‌ಗೆ ಸೀಮಿತಗೊಳಿಸಬೇಕು ಎಂದಿರುವ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ‘ಅತಿಶೀಘ್ರದಲ್ಲಿ ವರ್ಷಕ್ಕೆ 2 ಬಾರಿ ಐಪಿಎಲ್ ನಡೆಯಬಹುದು. ಭವಿಷ್ಯದಲ್ಲಿ ಅದೇ ಸೂಕ್ತ’ ಎಂದು ಹೇಳಿದ್ದಾರೆ.
2022ರ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳಿವರು..!
ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದಕ್ಕೆ ಮಾತನಾಡಿರುವ ಅವರು, ‘ಈಗ ತುಂಬಾ ದ್ವಿಪಕ್ಷೀಯ ಟಿ20 ಸರಣಿಗಳು ನಡೆಯುತ್ತಿವೆ. ಆದರೆ ಈ ಪಂದ್ಯಗಳನ್ನು ಯಾರೂ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾನು 6-7 ವರ್ಷ ಕೋಚ್ ಆಗಿದ್ದಾಗ ನಡೆದ ಟಿ20 ಪಂದ್ಯಗಳೂ ನನಗೆ ನೆನಪಿಲ್ಲ. ಕೇವಲ ವಿಶ್ವಕಪ್ ಮಾತ್ರ ನೆನೆಪಿದೆ. ಜಾಗತಿಕ ಮಟ್ಟದಲ್ಲಿ ಫ್ರಾಂಚೈಸಿ ಲೀಗ್‌ಗಳು ನಡೆಯುತ್ತಿವೆ. ಬಳಿಕ 2 ವರ್ಷಕ್ಕೊಮ್ಮೆ ವಿಶ್ವಕಪ್ ಮಾತ್ರ ನಡೆಯಲಿ’ ಎಂದು ಸಲಹೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಟಿ20ಯತ್ತ ಟೀಂ ಇಂಡಿಯಾ ಗಮನ
ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತೀಯ ಕ್ರಿಕೆಟಿಗರು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಯತ್ತ ಗಮನ ಹರಿಸಿದ್ದಾರೆ. ಜೂ.9ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಗುರುವಾರ(ಜೂ.2) ಭಾರತಕ್ಕೆ ಆಗಮಿಸಲಿದೆ.
ಕೆ.ಎಲ್.ರಾಹುಲ್ ನೇತೃತ್ವದ ಭಾರತ ತಂಡ ಜೂ.5ರಂದು ದೆಹಲಿ ತಲುಪಲಿದ್ದು, ಮೊದಲ ಪಂದ್ಯಕ್ಕೂ ಮುನ್ನ 3 ದಿನಗಳ ಅಭ್ಯಾಸ ನಡೆಸಲಿದೆ. ಸರಣಿಯ ಮೊದಲ ಪಂದ್ಯ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಳಿದ ನಾಲ್ಕು ಪಂದ್ಯಗಳಿಗೆ ಕಟಕ್(ಜೂ.12), ವಿಶಾಖಪಟ್ಟಣಂ(ಜೂ.14), ರಾಜ್‌ಕೋಟ್ (ಜೂ.17) ಮತ್ತು ಬೆಂಗಳೂರು(ಜೂ.19) ಆತಿಥ್ಯ ವಹಿಸಲಿದೆ. ಪಂದ್ಯಗಳಿಗೆ ಕ್ರೀಡಾಂಗಣದ ಶೇ.100ರಷ್ಟುಆಸನಗಳನ್ನು ಭರ್ತಿ ಮಾಡಲು ಬಿಸಿಸಿಐ ನಿರ್ಧರಿಸಿದೆ. ಜೊತೆಗೆ ಸರಣಿಯೂ ಬಯೋಬಬಲ್ ವ್ಯವಸ್ಥೆ ಇಲ್ಲದೆ ನಡೆಯಲಿದೆ. ಆದರೆ ಆಟಗಾರರು, ಸಿಬ್ಬಂದಿಯನ್ನು ನಿರಂತರವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುವುದಾಗಿ ಬಿಸಿಸಿಐ ತಿಳಿಸಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಅನೇಕ ಹೊಸ ಮುಖಗಳಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.