ದಿನೇಶ್ ಕಾರ್ತಿಕ್‌ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಪತ್ನಿ ದೀಪಿಕಾ..!

By Naveen KodaseFirst Published Jun 2, 2022, 11:00 AM IST
Highlights

* 37ನೇ ವಸಂತಕ್ಕೆ ಕಾಲಿರಿಸಿದ ಕ್ರಿಕೆಟಿಗ ದಿನೇಶ್ ಕಾರ್ತಿಕ್

* ವಿನೂತನವಾಗಿ ಶುಭಕೋರಿದ ಕಾರ್ತಿಕ್ ಪತ್ನಿ ದೀಪಿಕಾ

* 2 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ಡಿಕೆ

ಚೆನ್ನೈ(ಜೂ.02): ಭಾರತ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್‌ ದಿನೇಶ್ ಕಾರ್ತಿಕ್, ಜೂನ್ 01ರಂದು 37ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಬರೋಬ್ಬರಿ 2 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್‌ ಅವರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದೆಲ್ಲದರ ನಡುವೆ ದಿನೇಶ್ ಕಾರ್ತಿಕ್ ಪತ್ನಿ ಹಾಗೂ ಭಾರತ ತಂಡದ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್‌, ಡಿಕೆ ಬಾಸ್‌ಗೆ ವಿನೂತನವಾಗಿ ಶುಭಕೋರಿ ಗಮನ ಸೆಳೆದಿದ್ದಾರೆ.

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಸರಳ ಹಾಗೂ ಸುಂದರವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೀಪಿಕಾ ಪಲ್ಲಿಕಲ್‌ ಎರಡು ಫೋಟವನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಈ ಜೋಡಿ ಜತೆಯಾತೆ ಕುಳಿತುಕೊಂಡಿದ್ದರೆ, ಇನ್ನೊಂದು ಫೋಟೋದಲ್ಲಿ ತಮ್ಮ ಅವಳಿ ಮಕ್ಕಳನ್ನು ಕಂಕುಳಲ್ಲಿ ಹಿಡಿದುಕೊಂಡು ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನನ್ನ ಸರ್ವಸ್ವವೂ ಆದ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ದೀಪಿಕಾ ಪತಿ ದಿನೇಶ್ ಕಾರ್ತಿಕ್‌ಗೆ ಶುಭಕೋರಿದ್ದಾರೆ.

Latest Videos

2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ದಿನೇಶ್ ಕಾರ್ತಿಕ್ ಅವರಿಗೂ ಟೀಂ ಇಂಡಿಯಾದಿಂದ ಗೇಟ್ ಪಾಸ್ ನೀಡಲಾಗಿತ್ತು. ಇದೆಲ್ಲದರ ನಡುವೆ ಕಳೆದೆರಡು ವರ್ಷಗಳಿಂದ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಸಾಕಷ್ಟು ಪರಿಶ್ರಮ ಹಾಕಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಮೋಘ ಪ್ರದರ್ಶನದ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಇದೇ ಜೂನ್ 09ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ದಿನೇಶ್ ಕಾರ್ತಿಕ್ ಯಶಸ್ವಿಯಾಗಿದ್ದಾರೆ.

ದಿನೇಶ್ ಕಾರ್ತಿಕ್‌, ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ತಮಿಳುನಾಡು ಮೂಲದ ಬ್ಯಾಟರ್, ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ, ಎಲ್ಲವೂ ಅಂದುಕೊಂಡಂತೆಯೇ ಆಗುತ್ತದೆ. ನನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಕಠಿಣ ಪರಿಶ್ರಮ ಮುಂದುವರೆಯಲಿದೆ ಎಂದು ದಿನೇಶ್ ಕಾರ್ತಿಕ್ ಟ್ವೀಟ್‌ ಮಾಡಿದ್ದಾರೆ. 
 

click me!