
ಕರಾಚಿ(ಮೇ.17): ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯಲ್ಲಿ ಹಲವು ಗೊಂದಲಗಳಿಗೆ ಸಿಲುಕಿದ್ದು, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ನೂತನ ಆದಾಯ ಹಂಚಿಕೆ ಮಾದರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಐಸಿಸಿಯ ಆದಾಯ ಹಂಚಿಕೆ ವಿವರವನ್ನು ಇತ್ತೀಚೆಗೆ ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದು ಪ್ರಕಟಿಸಿತ್ತು. ಅದರ ಪ್ರಕಾರ ಐಸಿಸಿಯ ಒಟ್ಟು ಆದಾಯದಲ್ಲಿ ಭಾರತಕ್ಕೆ 38.5%, ಪಾಕಿಸ್ತಾನಕ್ಕೆ 5.75% ಮೊತ್ತ ಹಂಚಿಕೆಯಾಗಲಿದೆ ಎನ್ನಲಾಗಿತ್ತು.
ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಿಸಿಬಿ, ‘ಐಸಿಸಿ ಆದಾಯಕ್ಕೆ ಭಾರತದ ಕೊಡುಗೆ ಬಹಳ ದೊಡ್ಡದು. ಹೀಗಾಗಿ ಭಾರತಕ್ಕೆ ಸಿಂಹಪಾಲು ನೀಡುವುದು ಸರಿ. ಆದರೆ ತನಗೇಕೆ 5.75% ಮೊತ್ತ ಹಂಚಿಕೆ ಎನ್ನುವ ಬಗ್ಗೆ ವಿವರಣೆ ನೀಡದಿದ್ದರೆ ಜೂನ್‌ನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ಮಾದರಿಗೆ ಸಮ್ಮತಿಸುವುದಿಲ್ಲ’ ಎಂದು ಪಿಸಿಬಿ ತಿಳಿಸಿದೆ.
ಬಿಸಿಸಿಐಗೆ ಐಸಿಸಿಯಿಂದ ವರ್ಷಕ್ಕೆ 1886 ಕೋಟಿ ರುಪಾಯಿ ಆದಾಯ?
ನವದೆಹಲಿ: 2024-27ರ ಅವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆದಾಯ ಹಂಚಿಕೆಯಲ್ಲಿ ಬಿಸಿಸಿಐ ಪಾಲು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎನ್ನಲಾಗಿದ್ದು, 4 ವರ್ಷಗಳ ಅವಧಿಯಲ್ಲಿ ಐಸಿಸಿ ಆದಾಯದಿಂದ ಬಿಸಿಸಿಐಗೆ ವಾರ್ಷಿಕ 1886 ಕೋಟಿ ರುಪಾಯಿ ಪಾವತಿಯಾಗಲಿದೆ ಎಂದು ವರದಿಯಾಗಿದೆ.
IPL 2023 ಡೆಲ್ಲಿ ಎದುರು ಪಂಜಾಬ್ ಕಿಂಗ್ಸ್‌ಗೆ ಡು ಆರ್ ಡೈ ಪಂದ್ಯ
2016-23ರ ಅವಧಿಯಲ್ಲಿ ಐಸಿಸಿಯ ಒಟ್ಟು ಆದಾಯದಲ್ಲಿ ಶೇ.22ರಷ್ಟುಅಂದರೆ ಅಂದಾಜು 3,300 ಕೋಟಿ ರು. ಬಿಸಿಸಿಐ ಖಜಾನೆ ಸೇರಿತ್ತು. ಆದರೆ 2024-27ರ ಅವಧಿಯಲ್ಲಿ ಸುಮಾರು ಶೇ.38.5ರಷ್ಟುಅದಾಯವನ್ನು ಬಿಸಿಸಿಐ ತನ್ನ ತೆಕ್ಕೆಗೆ ಪಡೆಯಲಿದೆ ಎಂದು ತಿಳದಿಬಂದಿದೆ. ಇದೇ ವೇಳೆ ಇಂಗ್ಲೆಂಡ್‌ಗೆ 6.89%, ಆಸ್ಪ್ರೇಲಿಯಾಗೆ 6.25% ಹಾಗೂ ಪಾಕಿಸ್ತಾನಕ್ಕೆ 5.75% ಹಣ ಹಂಚಿಕೆಯಾಗಲಿದೆ ಎಂದು ವರದಿಯಾಗಿತ್ತು. ಉಳಿದೆಲ್ಲಾ ಪೂರ್ಣ ಸದಸ್ಯತ್ವ ರಾಷ್ಟ್ರಗಳಿಗೆ ತಲಾ ಶೇ.5ಕ್ಕಿಂತ ಕಡಿಮೆ ಆದಾಯ ಸಿಗಲಿದೆ ಎಂದು ತಿಳಿದುಬಂದಿದೆ.
ಐಸಿಸಿ ಏಕದಿನ ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ನೇರ ಅರ್ಹತೆ
ಎಸೆಕ್ಸ್(ಇಂಗ್ಲೆಂಡ್): ಬಾಂಗ್ಲಾದೇಶ ಹಾಗೂ ಐರ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ 8ನೇ ತಂಡವಾಗಿ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ದ.ಆಫ್ರಿಕಾವನ್ನು ಹಿಂದಿಕ್ಕಿ ವಿಶ್ವಕಪ್ಗೆ ಅರ್ಹತೆ ಪಡೆಯಲು ಐರ್ಲೆಂಡ್‌ಗೆ ಸರಣಿಯ ಮೂರೂ ಪಂದ್ಯಗಳನ್ನು ಗೆಲ್ಲಬೇಕಿತ್ತು. ಅದರೆ ಮಳೆರಾಯ ಐರ್ಲೆಂಡ್ ಕನಸಿಗೆ ತಣ್ಣೀರೆರಚಿತು.
ಹೀಗಾಗಿ ಜೂನ್‌ನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ತಂಡ ಆಡಬೇಕಿದೆ. ಭಾರತ, ಪಾಕಿಸ್ತಾನ, ಆಸ್ಪ್ರೇಲಿಯಾ ಸೇರಿದಂತೆ 8 ತಂಡಗಳು ನೇರ ಅರ್ಹತೆ ಪಡೆದಿದ್ದು, ಇನ್ನೆರಡು ಸ್ಥಾನಕ್ಕಾಗಿ ವೆಸ್ಟ್ಇಂಡೀಸ್, ಶ್ರೀಲಂಕಾ, ನೆದರ್ಲೆಂಡ್್ಸ ಸೇರಿದಂತೆ 10 ತಂಡಗಳು ಪೈಪೋಟಿ ನಡೆಸಲಿವೆ.
ಏಷ್ಯಾಕಪ್: ಲಂಕಾಕ್ಕೆ ಪಾಕಿಸ್ತಾನ ಬೆದರಿಕೆ!
ಕರಾಚಿ: ಶತಾಯಗತಾಯ ಏಷ್ಯಾ ಕಪ್ ಏಕದಿನ ಟೂರ್ನಿಯ ಆತಿಥ್ಯ ಉಳಿಸಿಕೊಳ್ಳಲು ಹೋರಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಜೊತೆ ಕಿತ್ತಾಟಕ್ಕಿಳಿದಿದೆ. ಏಷ್ಯಾಕಪ್ ಹೈಬ್ರೀಡ್ ಮಾದರಿ ಅಂದರೆ ಭಾರತದ ಪಂದ್ಯಗಳು ಯುಎಇನಲ್ಲಿ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಸಲು ಒಪ್ಪದ ಶ್ರೀಲಂಕಾ ಮೇಲೆ ಪಿಸಿಬಿ ಸಿಟ್ಟಾಗಿದ್ದು, ತನ್ನ ಬೆಂಬಲಕ್ಕೆ ನಿಲ್ಲದಿದ್ದರೆ ಲಂಕಾದಲ್ಲಿ ಜುಲೈನಲ್ಲಿ ನಡೆಯಬೇಕಿರುವ ಟೆಸ್ಟ್ ಸರಣಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.