
ವೆಲ್ಲಿಂಗ್ಟನ್(ಜ.31): ಭಾರತ-ನ್ಯೂಜಿಲೆಂಡ್ ನಡುವಿನ 4ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೂಪರ್ ಓವರ್‌ನಲ್ಲಿ ಗೆಲುವಿನ ನಗೆ ಬೀರಿದೆ. ನ್ಯೂಜಿಲೆಂಡ್ ನೀಡಿದ್ದ 14 ರನ್‌ಗಳ ಸೂಪರ್ ಓವರ್ ಗುರಿಯನ್ನು ಭಾರತ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.
4ನೇ ಟಿ20 ಪಂದ್ಯವೂ ಟೈನಲ್ಲಿ ಅಂತ್ಯವಾಗಿದ್ದರಿಂದ, ಫಲಿತಾಂಶಕ್ಕೆ ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 13 ರನ್ ಬಾರಿಸುವ ಮೂಲಕ ಭಾರತಕ್ಕೆ ಗೆಲ್ಲಲು 14 ರನ್‌ಗಳ ಗುರಿ ನೀಡಿತು. ಇದಕ್ಕುತ್ತರವಾಗಿ ಭಾರತ ಪರ ಕೆ.ಎಲ್ ರಾಹುಲ್-ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲಿಳಿದರು. ಕಿವೀಸ್ ಪರ ಬೌಲಿಂಗ್ ಜವಾಬ್ದಾರಿಯನ್ನು ಟಿಮ್ ಸೌಥಿ ವಹಿಸಿಕೊಂಡರು. ಮೊದಲ ಎಸೆತದಲ್ಲೇ ರಾಹುಲ್ ಚೆಂಡನ್ನು ಸಿಕ್ಸರ್‌ಗಟ್ಟಿದರು. ಇನ್ನು ಎರಡನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ರಾಹುಲ್ ಮೂರನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಎಸೆತದಲ್ಲಿ 2 ರನ್ ಗಳಿಸಿದ ಕೊಹ್ಲಿ, 5ನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
4ನೇ ಟಿ20 ಪಂದ್ಯ ಟೈ, ಮತ್ತೊಂದು ಸೂಪರ್ ಓವರ್, ಸೂಪರ್ ಸೇ ಊಪರ್
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಕನ್ನಡಿಗ ಮನೀಶ್ ಪಾಂಡೆ ಆಕರ್ಷಕ ಅರ್ಧಶತಕ ಹಾಗೂ ಕೆ.ಎಲ್ ರಾಹುಲ್ 39 ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 165 ರನ್ ಬಾರಿಸಿತ್ತು. ಈ ಮೂಲಕ ಕಿವೀಸ್‌ಗೆ ಗೆಲ್ಲಲು 166 ರನ್‌ಗಳ ಗುರಿ ನೀಡಿತ್ತು.
ಗುರಿ ಬೆನ್ನತ್ತಿದ ಕಿವೀಸ್, ಆರಂಭಿಕ ಬ್ಯಾಟ್ಸ್‌ಮನ್ ಕಾಲಿನ್ ಮನ್ರೋ(64) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್(57) ಆಕರ್ಷಕ ಅರ್ಧಶತಕದ ಹೊರತಾಗಿಯೂ 165 ರನ್ ಗಳಿಸಲಷ್ಟೇ ಶಕ್ತವಾಯಿತು.
ಸ್ಫರ್ಧಾತ್ಮಕ ನ್ಯೂಜಿಲೆಂಡ್ ಮೊದಲ ಬಾರಿಗೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮಾರ್ಟಿನ್ ಗಪ್ಟಿಲ್ ಕೇವಲ 4 ರನ್ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಎರಡನೇ ವಿಕೆಟ್‌ಗೆ ಜತೆಯಾದ ಕಾಲಿನ್ ಮನ್ರೋ-ಟಿಮ್ ಸೈಫರ್ಟ್ ಜೋಡಿ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಈ ಜೋಡಿ 74 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಸಮೀಪ ಕೊಂಡ್ಯೊಯ್ದರು. ಕಾಲಿನ್ ಮನ್ರೋ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿ ಕೊಹ್ಲಿ ಮಾಡಿದ ಅದ್ಭುತ ರನೌಟ್‌ಗೆ ಪೆವಿಲಿಯನ್ ಸೇರಿದರು.
ಮನ್ರೋ ರನೌಟ್ ಬೆನ್ನಲ್ಲೇ ಟಾಮ್ ಬ್ರೂಸ್ ಅವರನ್ನು ಯುಜುವೇಂದ್ರ ಚಹಲ್ ಬಲಿ ಪಡೆದಾಗ, ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯಿತು. ಆದರೆ ಈ ಆಸೆಯನ್ನು ಸೈಫರ್ಟ್-ರಾಸ್ ಟೇಲರ್ ಜೋಡಿ ಕಮರುವಂತೆ ಮಾಡಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 62 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ಸಮೀಪ ಕೊಂಡೊಯ್ದರು.
ಕೊನೆಯ ಓವರ್ ಡ್ರಾಮಾ: ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲಲು ಕೇವಲ 8 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಶಾರ್ದೂಲ್ ಠಾಕೂರ್ ಎಸೆದ ಮೊದಲ ಎಸೆತದಲ್ಲೇ ರಾಸ್ ಟೇಲರ್(24) ಶ್ರೇಯಸ್ ಅಯ್ಯರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಎರಡನೇ ಎಸೆತವನ್ನು ಮಿಚೆಲ್ ಚೆಂಡನ್ನು ಬೌಂಡರಿಗಟ್ಟಿದರು. ಇನ್ನು ಮೂರನೇ ಎಸೆತದಲ್ಲಿ ಸೈಫರ್ಟ್ ರನೌಟ್ ಆದರು. ಕೊನೆಯ ಮೂರು ಎಸೆತಗಳಲ್ಲಿ 3 ರನ್‌ಗಳ ಅವಶ್ಯಕತೆಯಿತ್ತು. ನಾಲ್ಕನೇ ಎಸೆತದಲ್ಲಿ ಸ್ಯಾಂಟ್ನರ್ ಒಂದು ರನ್ ಗಳಿಸಿದರು. 5ನೇ ಎಸೆತದಲ್ಲಿ ಮಿಚೆಲ್ ವಿಕೆಟ್ ಒಪ್ಪಿಸಿದರು. ಕೊನೆಯ ಎಸೆತದಲ್ಲಿ ಕಿವೀಸ್‌ಗೆ ಗೆಲ್ಲಲು 2 ರನ್‌ಗಳ ಅವಶ್ಯಕತೆಯಿತ್ತು. ಆದರೆ ಸ್ಯಾಂಟ್ನರ್ ಒಂದು ರನ್ ಗಳಿಸಲಷ್ಟೇ ಶಕ್ತರಾದರು.
ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯವೂ ಟೈನಲ್ಲಿ ಅಂತ್ಯವಾಗಿತ್ತು. ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಸತತ 2 ಸಿಕ್ಸರ್ ನೆರವಿನಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತ್ತು.
ಇನ್ನು ಭಾರತ-ನ್ಯೂಜಿಲೆಂಡ್ ನಡುವಿನ ಕೊನೆಯ ಹಾಗೂ 5ನೇ ಟಿ20 ಪಂದ್ಯವು ಫೆಬ್ರವರಿ 02ರಂದು ಬೇ ಓವಲ್‌ನಲ್ಲಿ ನಡೆಯಲಿದೆ.
ಜನವರಿ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.