
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾಕೆ ಚಾನ್ಸ್ ಸಿಗಲಿಲ್ಲ ಅನ್ನೋದಕ್ಕೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕಾರಣ ಕೊಟ್ಟಿದ್ದಾರೆ. ಈ ಯುವ ಪ್ರತಿಭೆ ಟೀಂ ಇಂಡಿಯಾದಲ್ಲಿ ಮುಂದಿನ ಅವಕಾಶಕ್ಕಾಗಿ ಸ್ವಲ್ಪ ದಿನ ಕಾಯಲೇಬೇಕು ಎಂದು ಗಂಭೀರ್ ಹೇಳಿದ್ದಾರೆ.
ಜಿಂಬಾಬ್ವೆ ಪ್ರವಾಸದಲ್ಲಿ 196.10ರ ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಚಚ್ಚಿದ್ದ ವೈಭವ್, 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ಗೆದ್ದು ಭರ್ಜರಿ ಫಾರ್ಮ್‌ನಲ್ಲೇ ಅಫ್ಘಾನ್ ಸರಣಿಗೆ ಬಂದಿದ್ದರು. ಆದರೆ, ಸಂಜು ಸ್ಯಾಮ್ಸನ್ ತಂಡಕ್ಕೆ ವಾಪಸಾಗಿದ್ದರಿಂದ ವೈಭವ್ ಬೆಂಚ್ ಕಾಯಬೇಕಾಯಿತು. ಇದು ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿತ್ತು. ಸೆಪ್ಟೆಂಬರ್ 17ರ ಗುರುವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲೂ ವೈಭವ್‌ಗೆ ಅವಕಾಶ ಸಿಕ್ಕಿರಲಿಲ್ಲ.
ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಕಳೆದ ಕೆಲವು ಸಮಯದಿಂದ ಭಾರತಕ್ಕಾಗಿ ಸಂಜು ನೀಡಿದ ಅತ್ಯುತ್ತಮ ಪ್ರದರ್ಶನಗಳನ್ನು ನೆನಪಿಸಿದರು. ಈ ಹಿಂದೆ ಇಂಗ್ಲೆಂಡ್ ಸರಣಿಯಲ್ಲಿ ಸಂಜು ಅವರನ್ನು ಕೈಬಿಟ್ಟು ವೈಭವ್‌ಗೆ ಅವಕಾಶ ನೀಡಿದ್ದು ನನ್ನ ಕೋಚಿಂಗ್ ಕರಿಯರ್‌ನಲ್ಲೇ ಅತ್ಯಂತ ಕಠಿಣ ನಿರ್ಧಾರವಾಗಿತ್ತು ಎಂದು ಗಂಭೀರ್ ಬಾಯ್ಬಿಟ್ಟರು. "ಸಂಜು ತಮ್ಮ ತಾಕತ್ತು ಏನು ಅಂತ ಈಗಾಗಲೇ ಸಾಬೀತುಪಡಿಸಿದ್ದಾರೆ. ವಿಶ್ವಕಪ್‌ನಲ್ಲಿ ಅವರ ಪ್ರದರ್ಶನ ಸುಮ್ಮನೆ ಬಂದಿದ್ದಲ್ಲ. ಇಂಗ್ಲೆಂಡ್ ಸರಣಿಯಲ್ಲಿ ಸಂಜು ಅವರನ್ನು ಕೈಬಿಟ್ಟಿದ್ದು ಬಹುಶಃ ನನ್ನ ಪಾಲಿನ ಟಫ್ ನಿರ್ಧಾರ. ಆದರೆ, ಕೆಲವೊಮ್ಮೆ ಆಟಗಾರರ ಫಾರ್ಮ್‌ಗೆ ನಾವು ಮೊದಲ ಆದ್ಯತೆ ಕೊಡಬೇಕಾಗುತ್ತದೆ. ಟಿ20 ವಿಶ್ವಕಪ್ ಗೆದ್ದ ಅದೇ ಟೀಮ್ ಕಾಂಬಿನೇಷನ್ ಮುಂದುವರಿಸಲು ನಾನು ಇಷ್ಟಪಟ್ಟೆ. ಸತತ ಮೂರ್ನಾಲ್ಕು ಪಂದ್ಯಗಳಲ್ಲಿ ಫ್ಲಾಪ್ ಆದ ತಕ್ಷಣ ಯಾರೂ ಕೆಟ್ಟ ಆಟಗಾರರಾಗುವುದಿಲ್ಲ. ವಿಶ್ವಕಪ್ ಗೆದ್ದ ತಂಡದ ಆಟಗಾರರು ಒಂದೇ ಸರಣಿ ಮುಗಿಯುವಷ್ಟರಲ್ಲಿ ಕಳಪೆ ಆಟಗಾರರಾಗುವುದಿಲ್ಲ," ಎಂದು ಗಂಭೀರ್ ಸ್ಪಷ್ಟಪಡಿಸಿದರು. ಗಂಭೀರ್ ಇಟ್ಟ ನಂಬಿಕೆಯನ್ನು ಉಳಿಸಿಕೊಂಡ ಸಂಜು ಸ್ಯಾಮ್ಸನ್, ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 117 ರನ್ ಸಿಡಿಸಿ ಮಿಂಚಿದರು.
ವೈಭವ್ ಸೂರ್ಯವಂಶಿ ಟ್ಯಾಲೆಂಟ್ ಬಗ್ಗೆ ಯಾವುದೇ ಅನುಮಾನವಿಲ್ಲ, ಆದರೆ ಸಂಜುಗೆ ಯಾವಾಗಲೂ ಮೊದಲ ಆದ್ಯತೆ ಇರುತ್ತದೆ ಎಂದು ಗಂಭೀರ್ ಸ್ಪಷ್ಟಪಡಿಸಿದರು. "ವೈಭವ್‌ಗೆ ಅವಕಾಶ ಸಿಕ್ಕಾಗ, ದೀರ್ಘಕಾಲ ತಂಡದಲ್ಲಿ ಮುಂದುವರಿಯುವ ಚಾನ್ಸ್ ಖಂಡಿತಾ ಕೊಡುತ್ತೇವೆ. ವೈಭವ್ ಜೊತೆ ನಾವು ಈ ಬಗ್ಗೆ ಕ್ಲಿಯರ್ ಆಗಿ ಮಾತನಾಡಿದ್ದೇವೆ; ಆತ ತನ್ನ ಸರದಿಗಾಗಿ ಕಾಯಬೇಕು. ಆತನ ಸಾಮರ್ಥ್ಯ ನಮಗೆ ಚೆನ್ನಾಗಿ ಗೊತ್ತಿದೆ. ಆದರೆ, ವರ್ಷಗಟ್ಟಲೆ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರನಿಗೆ, ಹೊಸಬರಿಗಿಂತ ಯಾವಾಗಲೂ ಮೊದಲ ಆದ್ಯತೆ ಸಿಗುತ್ತದೆ. ಅವಕಾಶ ಸಿಕ್ಕಾಗ ಆತನಿಗೆ ಲಾಂಗ್ ರನ್ ಕೊಡುತ್ತೇವೆ. ಭಾರತೀಯ ಕ್ರಿಕೆಟ್ ನಡೆಯುವುದೇ ಹೀಗೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಇಂಥಾ ಪೈಪೋಟಿ ಮತ್ತು ಪ್ರತಿಭೆಗಳು ಇರಬೇಕು ಅನ್ನೋದೇ ನಮ್ಮ ಆಸೆ. 15 ವರ್ಷದವರಾಗಲಿ ಅಥವಾ 30 ವರ್ಷದವರಾಗಲಿ, ಕೆಲವೊಮ್ಮೆ ಅವಕಾಶಗಳಿಗಾಗಿ ಕಾಯಲೇಬೇಕಾಗುತ್ತದೆ," ಎಂದು ಗಂಭೀರ್ ವಿವರಿಸಿದರು. ಮುಂಬರುವ ಜಪಾನ್ ಟಿ20 ಸರಣಿ ಅಥವಾ ಏಷ್ಯನ್ ಗೇಮ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಮತ್ತೆ ಮೈದಾನಕ್ಕಿಳಿಯುವುದನ್ನು ನೋಡಬಹುದು ಎಂಬ ನಿರೀಕ್ಷೆಯಲ್ಲಿ ಕ್ರಿಕೆಟ್ ಫ್ಯಾನ್ಸ್ ಇದ್ದಾರೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಅವಧಿ ಈ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಅವರ ಒಪ್ಪಂದ ಮುಂದುವರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಮಾಜಿ ಕ್ರಿಕೆಟಿಗರಾದ ಪಾರ್ಥಿವ್ ಪಟೇಲ್ ಮತ್ತು ಪ್ರಗ್ಯಾನ್ ಓಜಾ ಪೈಕಿ ಒಬ್ಬರ ಹೆಸರನ್ನು ಬಿಸಿಸಿಐ ಪರಿಗಣಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಪೈಕಿ ಓಜಾ ಸದ್ಯ ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್‌ವರೆಗೆ ಅಗರ್ಕರ್ ಒಪ್ಪಂದವನ್ನು ವಿಸ್ತರಿಸುವ ಬಗ್ಗೆ ಊಹಾಪೋಹಗಳಿದ್ದವು. ಆದರೆ ಅದರ ಸಾಧ್ಯತೆ ಇಲ್ಲ ಎಂದು ಸದ್ಯದ ವರದಿಗಳು ತಿಳಿಸಿವೆ. ಅಗರ್ಕರ್ ಕೊನೆಯದಾಗಿ ವೆಸ್ಟ್‌ಇಂಡೀಸ್ ಸರಣಿಗೆ ತಂಡವನ್ನು ಆಯ್ಕೆ ಮಾಡಿದ್ದು, ಈಗಾಗಲೇ ವಿದಾಯ ಪತ್ರ ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ನೂತನ ಆಯ್ಕೆ ಸಮಿತಿ ಮುಖ್ಯಸ್ಥರ ಆಯ್ಕೆ ನಡೆಯಬಹುದು ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.