
ದೆಹಲಿಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಮರೆಯಲಾಗದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಟೀಮ್ ಇಂಡಿಯಾ, ಈ ಪಂದ್ಯವನ್ನು ಒಂದು ರೀತಿಯ ಅಭ್ಯಾಸ ಪಂದ್ಯದಂತೆ ಆಡಲು ಮೈದಾನಕ್ಕಿಳಿಯಿತು. ಈ ಪಂದ್ಯಕ್ಕಾಗಿ ಆಡುವ ಹನ್ನೊಂದರ ಬಳಗದಲ್ಲಿ ಭಾರತ ಒಂದೇ ಒಂದು ಬದಲಾವಣೆ ಮಾಡಿಕೊಂಡು, ಅರ್ಶ್ದೀಪ್ ಸಿಂಗ್ ಬದಲಿಗೆ ಯಶ್ ಠಾಕೂರ್ ಅವರಿಗೆ ಅವಕಾಶ ನೀಡಿತು. ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ, ಮುಂದಿನ 40 ನಿಮಿಷಗಳಲ್ಲಿ ತಮ್ಮ ಬೌಲರ್‌ಗಳಿಗೆ ಎದುರಾಗಲಿರುವ ಬಿರುಗಾಳಿಯ ಅಂದಾಜು ಅವರಿಗೆ ಖಂಡಿತ ಇರಲಿಲ್ಲ.
ಬ್ಯಾಟಿಂಗ್‌ಗೆ ಇಳಿದ ಭಾರತದ ಓಪನರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಮೊದಲ ಓವರ್‌ನಿಂದಲೇ ಅಫ್ಘಾನಿಸ್ತಾನದ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧೂಳಿಪಟ ಮಾಡಲು ಶುರು ಮಾಡಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಮಳೆ ಹರಿಸಿದ ಈ ಜೋಡಿ ಪವರ್ ಪ್ಲೇನ ಕೇವಲ 6 ಓವರ್‌ಗಳಲ್ಲಿ ಬರೋಬ್ಬರಿ 100 ರನ್ ಚಚ್ಚಿಹಾಕಿತು. ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಗಳಿಸಿದ ಅತ್ಯಧಿಕ ಪವರ್ ಪ್ಲೇ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2025 ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಪವರ್ ಪ್ಲೇನಲ್ಲಿ ಗಳಿಸಿದ್ದ 95/1 ರನ್ ಭಾರತದ ಅತ್ಯುತ್ತಮ ಸ್ಕೋರ್ ಆಗಿತ್ತು.
ಈ ಪವರ್ ಪ್ಲೇನ ರನ್ ಹೊಳೆಯಲ್ಲಿ ಅಭಿಷೇಕ್ ಶರ್ಮಾ ಅವರ ಪಾತ್ರವೇ ಪ್ರಮುಖವಾಗಿತ್ತು. ಪವರ್ ಪ್ಲೇನ 6 ಓವರ್‌ಗಳಲ್ಲಿ ಅಭಿಷೇಕ್ ಕೇವಲ 22 ಎಸೆತಗಳನ್ನು ಎದುರಿಸಿ 76 ರನ್ ಗಳಿಸಿದರು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಪವರ್ ಪ್ಲೇನಲ್ಲಿ ಗಳಿಸಿದ ಸಾರ್ವಕಾಲಿಕ ಅತ್ಯಧಿಕ ಸ್ಕೋರ್ ಇದಾಗಿದೆ. ಈ ಮೂಲಕ ಅವರು 25 ಎಸೆತಗಳಲ್ಲಿ 74 ರನ್ ಗಳಿಸಿ ಈ ದಾಖಲೆ ಹೊಂದಿದ್ದ ಪೋರ್ಚುಗಲ್‌ನ ಕುಲ್ದೀಪ್ ಘೋಲಿಯಾ ಅವರನ್ನು ಹಿಂದಿಕ್ಕಿದರು.
ಅಫ್ಘಾನಿಸ್ತಾನಿ ಬೌಲರ್‌ಗಳನ್ನು ಕಂಪ್ಲೀಟ್ಲಿ ಮೈದಾನದಲ್ಲಿ ಓಡಾಡಿಸಿದ ಅವರು, ಕೇವಲ 30 ಎಸೆತಗಳಲ್ಲಿ ತಮ್ಮ ಸ್ಫೋಟಕ ಶತಕವನ್ನು ಪೂರೈಸಿದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ ಅವರು 10 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದರು. ಟೆಸ್ಟ್ ಆಡುವ ದೇಶಗಳ ಪೈಕಿ ಅತ್ಯಂತ ವೇಗದ ಟಿ20 ಅಂತರರಾಷ್ಟ್ರೀಯ ಶತಕ ಸಿಡಿಸಿದ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾದರು. ಅಂತಿಮವಾಗಿ ಅವರು 34 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು.
ಅಷ್ಟೇ ಅಲ್ಲದೆ, ಭಾರತದ ಪರ ಅಂತರರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ಅಭಿಷೇಕ್ ತಮ್ಮ ಹೆಸರಿಗೆ ಬರೆದುಕೊಂಡರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಬಾರಿಸಿದ್ದ ಶತಕದ ಸುದೀರ್ಘ ದಾಖಲೆಯನ್ನು ಅಭಿಷೇಕ್ ಮುರಿದರು. ಅಫ್ಘಾನಿಸ್ತಾನ ವಿರುದ್ಧದ ಈ ಧಮಾಕಾ ಇನ್ನಿಂಗ್ಸ್‌ನಲ್ಲಿ ಅಭಿಷೇಕ್ ಒಟ್ಟು 11 ಸಿಕ್ಸರ್‌ಗಳನ್ನು ಸಿಡಿಸಿದರು. ಟಿ20 ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನ ಪಡೆದರು. ವಿಶೇಷವೆಂದರೆ, ಈ ಪಟ್ಟಿಯ ಅಗ್ರಸ್ಥಾನವೂ ಅಭಿಷೇಕ್ ಅವರ ಹೆಸರಲ್ಲೇ ಇದೆ. 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 13 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇದೇ ಪಂದ್ಯದಲ್ಲಿ ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಯುವರಾಜ್ ಸಿಂಗ್ (12 ಎಸೆತ) ಅವರ ಅತಿ ವೇಗದ ಅರ್ಧಶತಕದ ದಾಖಲೆಯ ಹತ್ತಿರ ಬಂದರು. ದಾಖಲೆ ಮುರಿಯಲು ಸಾಧ್ಯವಾಗದಿದ್ದರೂ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕ (6 ಬಾರಿ) ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್, ಕಾಲಿನ್ ಮುನ್ರೋ, ಆದಿಲ್ ಬಟ್, ಫಿನ್ ಅಲೆನ್ ಮತ್ತು ದಾಸುನ್ ಶನಕ (ತಲಾ 3 ಬಾರಿ) ಅವರಂತಹ ದಿಗ್ಗಜರನ್ನು ಅಭಿಷೇಕ್ ಬಹಳ ಹಿಂದೆ ತಳ್ಳಿದ್ದಾರೆ. ಒಟ್ಟಿನಲ್ಲಿ ದೆಹಲಿ ಮೈದಾನದಲ್ಲಿ ನಡೆದ ಈ 40 ನಿಮಿಷಗಳ ಆಟ, ಟಿ20 ಕ್ರಿಕೆಟ್‌ನ ಹಳೆಯ ಪುಟಗಳನ್ನು ತಿರಸ್ಕರಿಸಿ ಹೊಸ ಇತಿಹಾಸವನ್ನೇ ಬರೆದುಹಾಕಿದೆ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.