
ಸೌಂಥಾಪ್ಟನ್: ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟ ನಿರ್ಧಾರವನ್ನು ಟೀಂ ಇಂಡಿಯಾದ ಟಿ20 ನಾಯಕ ಶ್ರೇಯಸ್ ಅಯ್ಯರ್ ಸಮರ್ಥಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ಹೀನಾಯ ಸೋಲಿನ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಾಗಲೇ ಸರಣಿ ಕೈತಪ್ಪಿದ್ದರಿಂದ, ಬೇರೆ ಓಪನಿಂಗ್ ಕಾಂಬಿನೇಷನ್ ಪ್ರಯತ್ನಿಸಲು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಿತ್ತು ಎಂದು ಅಯ್ಯರ್ ಸ್ಪಷ್ಟಪಡಿಸಿದರು. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಹೀನಾಯವಾಗಿ ಸೋತಿದೆ.
ಈ ಸೋಲಿನಿಂದಾಗಿ, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತ 1,601 ದಿನಗಳಿಂದ ಕಾಯ್ದುಕೊಂಡಿದ್ದ ನಂಬರ್ 1 ಸ್ಥಾನವನ್ನು ಕಳೆದುಕೊಂಡಿತು. ಈ ಸೋಲು, ಟೀಮ್ ಮ್ಯಾನೇಜ್‌ಮೆಂಟ್, ಶ್ರೇಯಸ್ ಅಯ್ಯರ್ ಮತ್ತು ಗೌತಮ್ ಗಂಭೀರ್ ಅವರ ಆಯ್ಕೆ ನಿರ್ಧಾರಗಳು ಹಾಗೂ ತಂತ್ರಗಾರಿಕೆಗಳ ಬಗ್ಗೆ ಟೀಕೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸರಣಿ ಸೋತಿದ್ದರೂ, ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್‌ರನ್ನು ವಾಪಸ್ ಕರೆತಂದಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ನಿರ್ಧಾರದ ಬಗ್ಗೆ ಕೇಳಿದಾಗ, ಅಭಿಷೇಕ್ ಶರ್ಮಾ ಜೊತೆ ಓಪನಿಂಗ್ ಮಾಡಲು ತಂಡದ ಮ್ಯಾನೇಜ್‌ಮೆಂಟ್‌ಗೆ ಒಬ್ಬ ಬಲಗೈ ಬ್ಯಾಟ್ಸ್‌ಮನ್ ಬೇಕಾಗಿತ್ತು ಎಂದು ಅಯ್ಯರ್ ಹೇಳಿದರು.
'ನಾನು ಮೊದಲೇ ಹೇಳಿದಂತೆ, ಈ ಪರಿಸ್ಥಿತಿಗಳಿಗೆ ಯಾವುದು ಸರಿ ಹೊಂದುತ್ತದೋ ಆ ಕಾಂಬಿನೇಷನ್ ಪ್ರಯತ್ನಿಸಲು ನಾವು ಬಯಸಿದ್ದೆವು. ಅಭಿಷೇಕ್ ಜೊತೆ ಓಪನ್ ಮಾಡಲು ನಮಗೆ ಒಬ್ಬ ಬಲಗೈ ಬ್ಯಾಟ್ಸ್‌ಮನ್ ಬೇಕಿತ್ತು, ಇದು ಪ್ರಮುಖ ಕಾರಣಗಳಲ್ಲಿ ಒಂದು. ಎಡಗೈ ಬ್ಯಾಟ್ಸ್‌ಮನ್‌ಗಳ ನಡುವೆ ನಾನೊಬ್ಬನೇ ಬಲಗೈ ಬ್ಯಾಟ್ಸ್‌ಮನ್ ಆಗಿದ್ದೆ. ಈ ಪಂದ್ಯಕ್ಕೆ ಸರಿಹೊಂದುವ ಬೇರೆ ಕಾಂಬಿನೇಷನ್ ಪ್ರಯತ್ನಿಸಲು ನಾವು ಬಯಸಿದ್ದೆವು. ಸಂಜು ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್, ಈ ಹಿಂದೆ ಹಲವು ಸರಣಿಗಳಲ್ಲಿ ಅವರು ನಮಗೆ ಗೆಲುವು ತಂದುಕೊಟ್ಟಿದ್ದಾರೆ,'' ಎಂದು ಅಯ್ಯರ್ ಹೇಳಿದರು.
ಸಂಜು ಮೇಲೆ ನಂಬಿಕೆ ವ್ಯಕ್ತಪಡಿಸಿದರೂ, ವೈಭವ್ ಸೂರ್ಯವಂಶಿ ಅವರನ್ನು ನಿಭಾಯಿಸಿದ ರೀತಿ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಈ ಸ್ಪಷ್ಟನೆ ಅಂತ್ಯ ಹಾಡುವಂತೆ ಕಾಣುತ್ತಿಲ್ಲ. ಉತ್ತಮ ಫಾರ್ಮ್‌ನಲ್ಲಿದ್ದ ಯುವ ಆಟಗಾರನನ್ನು ಮೂರು ಪಂದ್ಯಗಳ ನಂತರ ಇದ್ದಕ್ಕಿದ್ದಂತೆ ಕೈಬಿಟ್ಟಿದ್ದು, ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರಗಳಲ್ಲಿನ ಗೊಂದಲವನ್ನು ಎತ್ತಿ ತೋರಿಸುತ್ತಿದೆ. ಟಿ20 ನಾಯಕನಾದ ನಂತರ ತಾನು ಅನುಭವಿಸಿದ ಮೊದಲ ದೊಡ್ಡ ಹಿನ್ನಡೆ ಇದಾಗಿದ್ದರೂ, ಈ ಪ್ರವಾಸವು ತನ್ನನ್ನು ಉತ್ತಮ ನಾಯಕನನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಅಯ್ಯರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
'ನಾಯಕತ್ವ ಒಂದು ಜವಾಬ್ದಾರಿ, ಆದರೆ ನಾನು ಒತ್ತಡವನ್ನು ಇಷ್ಟಪಡುತ್ತೇನೆ, ಅದನ್ನು ಒಂದು ಸೌಭಾಗ್ಯವೆಂದು ಭಾವಿಸುತ್ತೇನೆ. ಇಂತಹ ಕ್ಷಣಗಳು ನಾನು ಬೆಳೆಯಲು ಮತ್ತು ಭವಿಷ್ಯದಲ್ಲಿ ಉತ್ತಮ ನಾಯಕನಾಗಲು ಸಹಾಯ ಮಾಡುತ್ತವೆ. ಈ ಸರಣಿಯ ಬಗ್ಗೆ ಜನರು ಏನು ಹೇಳುತ್ತಾರೆಂದು ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ, ಸೋಲು-ಗೆಲುವು ಆಟದ ಭಾಗ. ಮುಂದಿನ ದಿನಗಳಲ್ಲಿ, ಪಾಸಿಟಿವ್ ಆಗಿ ಯೋಚಿಸಿ ತಂಡದ ಆಟಗಾರರನ್ನು ಬೆಳೆಸುವುದರತ್ತ ನಾನು ಗಮನ ಹರಿಸುತ್ತೇನೆ,'' ಎಂದು ಅಯ್ಯರ್ ಅಭಿಪ್ರಾಯಪಟ್ಟರು.
ಭಾರತ ತಂಡವು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಭಾರತ ಆಡಿದ ಮೊದಲ ಸರಣಿಯಲ್ಲಿ ಐರ್ಲೆಂಡ್ ಎದುರು 2-0 ಅಂತರದಲ್ಲಿ ಟಿ20 ಸರಣಿಯನ್ನು ವೈಟ್‌ವಾಷ್ ಅನುಭವಿಸಿತ್ತು. ಇದಾದ ಬಳಿಕ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದಾದ ಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಪಡೆ ಸೋಲು ಕಂಡಿದೆ. ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ನಾಯಕನಾದ ಮೊದಲ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳನ್ನು ಸೋತಿದ್ದು, ಮೊದಲ ಗೆಲುವಿಗೆ ಇನ್ನಷ್ಟು ಸಮಯ ಕಾಯಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.