ಬಟ್ಲರ್ ಸಿಡಿಲಬ್ಬರದ ಶತಕ, ಬ್ರೂಕ್ ಅಬ್ಬರ: ಐಪಿಎಲ್‌ನಲ್ಲಷ್ಟೇ ಅಬ್ಬರಿಸುವ ಭಾರತದ ಬೌಲರ್‌ಗಳ ಚರ್ಮ ಸುಲಿದ ಇಂಗ್ಲೆಂಡ್‌

Published : Jul 11, 2026, 10:46 PM IST
axer patel and team india

ಸಾರಾಂಶ

ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 257 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಜೋಸ್ ಬಟ್ಲರ್ (131) ಶತಕ ಹಾಗೂ ನಾಯಕ ಹ್ಯಾರಿ ಬ್ರೂಕ್ (95*) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್, ಭಾರತಕ್ಕೆ 258 ರನ್‌ಗಳ ಬೃಹತ್ ಗುರಿ ನೀಡಿದೆ. 

ಸೌತಾಂಪ್ಟನ್‌ (ಜು.11): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಸ್ಥಿತಿ ಚಿಂತಾಜನಕವಾಗಿದೆ. ಸರಣಿಯಲ್ಲಿ ಸತತ ಐದನೇ ಬಾರಿಗೆ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ನಾಯಕನ ಈ ನಿರ್ಧಾರ ಸಂಪೂರ್ಣ ಉಲ್ಟಾ ಹೊಡೆದಿದ್ದು, ಇಂಗ್ಲೆಂಡ್ ಬ್ಯಾಟರ್‌ಗಳ ಅಬ್ಬರಕ್ಕೆ ಭಾರತೀಯ ಬೌಲರ್‌ಗಳು ತತ್ತರಿಸಿ ಹೋಗಿದ್ದಾರೆ. ಜೋಸ್ ಬಟ್ಲರ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 257 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದು, ಭಾರತಕ್ಕೆ 258 ರನ್‌ಗಳ ಹಿಮಾಲಯದಂತಹ ಗುರಿ ನೀಡಿದೆ.

ಇಂಗ್ಲೆಂಡ್ ತಂಡದ ಮೊದಲ ವಿಕೆಟ್ ಕೇವಲ 8 ರನ್ ಗಳಿಸುವಷ್ಟರಲ್ಲೇ ಪತನಗೊಂಡಿತ್ತು. ಆದರೆ, ಆ ಬಳಿಕ ಎರಡನೇ ವಿಕೆಟ್ ಪಡೆಯಲು ಭಾರತೀಯ ಬೌಲರ್‌ಗಳು ಸಾಕಷ್ಟು ಪರಿಶ್ರಮಪಡಬೇಕಾಯಿತು. ಪವರ್ ಪ್ಲೇನಲ್ಲಿ 1 ವಿಕೆಟ್ ಉರುಳಿದ ಹೊರತಾಗಿಯೂ ಇಂಗ್ಲೆಂಡ್ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಆರಂಭಿಕ 6 ಓವರ್‌ಗಳಲ್ಲಿ ಆಂಗ್ಲರು ಸರಾಸರಿ 10ರ ರನ್ ರೇಟ್ ಕಾಯ್ದುಕೊಂಡು 61 ರನ್ ಬಾರಿಸಿದರು. ಆ ಬಳಿಕ ಕ್ರೀಸ್ ಆಕ್ರಮಿಸಿಕೊಂಡ ಬಟ್ಲರ್ ಮತ್ತು ಬ್ರೂಕ್ ಜೋಡಿ ಭಾರತದ ಬೌಲಿಂಗ್ ಕೋಟಾವನ್ನು ಅಕ್ಷರಶಃ ಧೂಳೀಪಟ ಮಾಡಿತು. ಬಂದ ಬೌಲರ್‌ಗಳ ಚರ್ಮ ಸುಲಿಯುವಂತೆ ಇವರಿಬ್ಬರು ಬ್ಯಾಟಿಂಗ್‌ ಮಾಡಿದ್ದರಿಂದ, ಭಾರತದ ಬೌಲರ್‌ಗಳಿ ಈ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಆಡಿಸಬೇಕೆಂದು ತಿಳಿಯದೇ ಹತಾಶರಾಗಿದ್ದರು.

ಬಟ್ಲರ್ ಶತಕದ ಗರ್ಜನೆ, ಬ್ರೂಕ್ ದಾಖಲೆಯ ಜೊತೆಯಾಟ

ನಾಯಕ ಹ್ಯಾರಿ ಬ್ರೂಕ್ ಹಾಗೂ ಜೋಸ್ ಬಟ್ಲರ್ ಎರಡನೇ ವಿಕೆಟ್‌ಗೆ ಕೇವಲ 102 ಎಸೆತಗಳಲ್ಲಿ ಬರೊಬ್ಬರಿ 233 ರನ್‌ಗಳ ಮಹಾ ಜೊತೆಯಾಟ ಆಡಿದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ವಿರುದ್ಧ ದಾಖಲಾದ ಅತ್ಯುನ್ನತ ಮತ್ತು ಐತಿಹಾಸಿಕ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್ (ಅಜೇಯ 174 ರನ್) ಹೆಸರಿನಲ್ಲಿತ್ತು. ಜೊತೆಗೆ ಇಂಗ್ಲೆಂಡ್ ಪರ ಟಿ20ಯಲ್ಲಿ ಮೂಡಿಬಂದ ಅತಿ ದೊಡ್ಡ ಜೊತೆಯಾಟ ಇದಾಗಿದೆ. ಈ ಹಿಂದೆ 2019 ರಲ್ಲಿ ಮಲಾನ್ ಮತ್ತು ಮಾರ್ಗನ್ ಜೋಡಿ 182 ರನ್ ಬಾರಿಸಿದ್ದು ಇಂಗ್ಲೆಂಡ್‌ನ ಗರಿಷ್ಠ ದಾಖಲೆಯಾಗಿತ್ತು.

ಈ ದಾಖಲೆಯ ಜೊತೆಯಾಟದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಕೇವಲ 64 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 131 ರನ್ ಚಚ್ಚಿದರು. ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 204.69 ರಷ್ಟಿತ್ತು.

ಕೇವಲ 19 ಎಸೆತಗಳಲ್ಲಿ ಬ್ರೂಕ್ ಅರ್ಧಶತಕದ ದಾಖಲೆ

ಇನ್ನೊಂದೆಡೆ ನಾಯಕನ ಆಟವಾಡಿದ ಹ್ಯಾರಿ ಬ್ರೂಕ್ ಭಾರತದ ವಿರುದ್ಧ ಕೇವಲ 19 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಪೂರೈಸಿದರು. ಈ ಮೂಲಕ ಭಾರತದ ವಿರುದ್ಧ ಅತ್ಯಂತ ವೇಗದ ಫಿಫ್ಟಿ ಬಾರಿಸಿದ ವಿಶ್ವದ ಜಂಟಿ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ 2024 ರಲ್ಲಿ ಸೆಂಚುರಿಯನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕ್ಯಾಮರೂನ್ ಗ್ರೀನ್, ಜೇಕಬ್ ಬೆಥೆಲ್ ಹಾಗೂ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ಬ್ರೂಕ್ ಅವರ ಶತಕ ಕೇವಲ 5 ರನ್‌ಗಳಿಂದ ಕೈತಪ್ಪಿತು. ಅವರು 45 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 95 ರನ್ ಗಳಿಸಿ ಅಜೇಯರಾಗುಳಿದರು.

ಭಾರತದ ಬೌಲರ್‌ಗಳ ದುಬಾರಿ ಸ್ಪೆಲ್

ಭಾರತದ ಪರ ಪ್ರಿನ್ಸ್ ಯಾದವ್ ಮತ್ತು ಅಕ್ಷರ್ ಪೇಟೇಲ್ ಅತ್ಯಂತ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದರು. ಪ್ರಿನ್ಸ್ ಯಾದವ್ ತಮ್ಮ 4 ಓವರ್‌ಗಳಲ್ಲಿ 60 ರನ್ ಬಿಟ್ಟುಕೊಟ್ಟರೆ, ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ 63 ರನ್ ನೀಡಿ ತೀವ್ರ ದುಬಾರಿಯಾದರು. ಇವರಿಬ್ಬರಿಗೂ ಯಾವುದೇ ವಿಕೆಟ್ ದಕ್ಕಲಿಲ್ಲ. ಸೂರ್ಯಾಂಶ್ ಶೆಡ್ಗೆ 3 ಓವರ್‌ಗಳಲ್ಲಿ 39 ರನ್ ನೀಡಿದರು. ಆಲ್‌ರೌಂಡರ್ ಶಿವಂ ದುಬೆ ಕೇವಲ 1 ಓವರ್ ಬೌಲಿಂಗ್ ಮಾಡಿ 22 ರನ್ ನೀಡಿದರೂ 2 ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 33 ರನ್ ನೀಡಿ ನಿಯಂತ್ರಣ ಕಾಯ್ದುಕೊಂಡರೆ, ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 38 ರನ್ ನೀಡಿ 1 ವಿಕೆಟ್ ಪಡೆದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಗ್ಲೆಂಡ್-ಐರ್ಲೆಂಡ್ ವಿರುದ್ಧದ ಸೋಲಿನ ಬಳಿಕ ಬಿಸಿಸಿಐ ಕಟ್ಟುನಿಟ್ಟಿನ ನಿರ್ಧಾರ! ಗಂಭೀರ್, ಶ್ರೇಯಸ್‌ಗೆ ಕ್ಲಾಸ್?
ENG vs IND ಅಂತಿಮ ಟಿ20 ಪಂದ್ಯಕ್ಕೆ ಸಮಯ ಕಳೆದರೂ ಮೈದಾನಕ್ಕೆ ಬರದ ಟೀಂ ಇಂಡಿಯಾ, ಟಾಸ್ ವಿಳಂಬ