RCB ಇವತ್ತು ರೆಡ್ ಜೆರ್ಸಿ ಬಿಟ್ಟು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದೇಕೆ? ಗ್ರೀನ್ ಜೆರ್ಸಿ ಸ್ಪೆಷಾಲಿಟಿ ಏನು ಗೊತ್ತಾ?

Published : Apr 18, 2026, 06:06 PM IST
RCB Green Jersey

ಸಾರಾಂಶ

ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 'ಗೋ ಗ್ರೀನ್' ಉಪಕ್ರಮದ ಭಾಗವಾಗಿ ಹಸಿರು ಜರ್ಸಿ ಧರಿಸಿ ಕಣಕ್ಕಿಳಿದಿದೆ. ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಾದ ಈ ವಿಶೇಷ ಜರ್ಸಿಯಲ್ಲಿ ತಂಡದ ಪ್ರದರ್ಶನದ ಇತಿಹಾಸ ಮತ್ತು ಪಂದ್ಯದ ಸಂಕ್ಷಿಪ್ತ ವರದಿಯನ್ನು ಈ ಲೇಖನ ಒಳಗೊಂಡಿದೆ.

ಬೆಂಗಳೂರು: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತಮ್ಮ ಎಂದಿನ ರೆಡ್ & ಗೋಲ್ಡ್‌ ಬಣ್ಣದ ಜರ್ಸಿಗೆ ಬ್ರೇಕ್ ನೀಡಿ, ಹಸಿರು ಜರ್ಸಿ ಧರಿಸಿ ಕಣಕ್ಕಿಳಿದಿದೆ. ಪರಿಸರ ಸಂರಕ್ಷಣೆ ಮತ್ತು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಲು ಆರ್‌ಸಿಬಿ ಪ್ರತಿ ವರ್ಷ 'ಗೋ ಗ್ರೀನ್' ದಿನವನ್ನು ಆಚರಿಸುತ್ತದೆ. ಇದರ ಭಾಗವಾಗಿಯೇ ಈ ಬಾರಿಯೂ ತಂಡ ಹಸಿರು ಜರ್ಸಿಯಲ್ಲಿ ಆಡಿದೆ. 2011ರಿಂದಲೂ ಆರ್‌ಸಿಬಿ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ.

ಗ್ರೀನ್ ಜೆರ್ಸಿಯ ವಿಶೇಷತೆ ಏನು?

ಈ ಹಸಿರು ಜರ್ಸಿಗಳ ವಿಶೇಷತೆ ಏನೆಂದರೆ, ಇವುಗಳನ್ನು ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ರೀಸೈಕಲ್ ಮಾಡಿ ಈ ಜರ್ಸಿಗಳನ್ನು ಸಿದ್ಧಪಡಿಸಲಾಗಿದೆ.

ವಿಶೇಷ ಅಂದರೆ, ಆರ್‌ಸಿಬಿ ವಿಶ್ವದ ಮೊದಲ ಕಾರ್ಬನ್ ನ್ಯೂಟ್ರಲ್ ಟಿ20 ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಂದ್ಯಕ್ಕೂ ಮುನ್ನ ಟಾಸ್ ಸಮಯದಲ್ಲಿ, ಆರ್‌ಸಿಬಿ ನಾಯಕ ಎದುರಾಳಿ ತಂಡದ ಕ್ಯಾಪ್ಟನ್‌ಗೆ ತಂಡದ ಧ್ವಜದ ಬದಲು ಒಂದು ಸಸಿಯನ್ನು ಉಡುಗೊರೆಯಾಗಿ ನೀಡುವುದು ಈ ದಿನದ ಮತ್ತೊಂದು ವಿಶೇಷ. ಅದರಂತೆ, ಟಾಸ್ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್‌ಗೆ ಸಸಿಯೊಂದನ್ನು ನೀಡಿದರು.

 

"ಪರಿಸರದ ಬಗ್ಗೆ ನಮಗಿರುವ ಬದ್ಧತೆಯನ್ನು ತೋರಿಸಲು ನಾವು ಈ ಜರ್ಸಿ ಧರಿಸುತ್ತೇವೆ. ಭೂಮಿಗೆ ಒಳಿತಾಗುವ ಹಸಿರು ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಎಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಟಾಸ್ ನಂತರ ರಜತ್ ಪಾಟಿದಾರ್ ಹೇಳಿದರು. 

ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ಈ ಹಸಿರು ಜರ್ಸಿ ಆರ್‌ಸಿಬಿಗೆ ಅಷ್ಟಾಗಿ ಅದೃಷ್ಟ ತಂದಿಲ್ಲ. ಈ ಹಿಂದೆ ಹಸಿರು ಜರ್ಸಿ ಧರಿಸಿ ಆಡಿದ 10 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಿದ್ದು ಕೇವಲ 3ರಲ್ಲಿ ಮಾತ್ರ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ರದ್ದಾಗಿತ್ತು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ವಿರುದ್ಧ ಆರ್‌ಸಿಬಿ ಮೊದಲ ಬಾರಿಗೆ ಹಸಿರು ಜರ್ಸಿ ಧರಿಸಿ ಆಡಿತ್ತು. 2023ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಈ ಜರ್ಸಿಯಲ್ಲಿ ಕೊನೆಯದಾಗಿ ಗೆಲುವು ಸಾಧಿಸಿತ್ತು.

ಇನ್ನು ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಬ್ಯಾಟ್ ಮಾಡಲಿಳಿದ ಆರ್‌ಸಿಬಿ ತಂಡವು ಮೊದಲ 5.1 ಓವರ್‌ಗಳಲ್ಲಿ 52 ರನ್‌ಗಳ ಜತೆಯಾಟವಾಡುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಉತ್ತಮ ಆರಂಭ ಒದಗಿಸಿಕೊಟ್ಟರು. ಕೊಹ್ಲಿ 19 ಹಾಗೂ ದೇವದತ್ ಪಡಿಕ್ಕಲ್ 18 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿಲ್ ಸಾಲ್ಟ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಚಚ್ಚಿದರು.

ಇನ್ನು ನಾಯಕ ರಜತ್ ಪಾಟೀದಾರ್ ಕೇವಲ 8 ರನ್‌ಗೆ ವಿಕೆಟ್ ಒಪ್ಪಿಸಿದರೆ, ಟಿಮ್ ಡೇವಿಡ್ 26 ರನ್ ಚಚ್ಚಿದರು. ಒಂದು ಹಂತದಲ್ಲಿ ಆರ್‌ಸಿಬಿ ಅನಾಯಾಸವಾಗಿ ಇನ್ನೂರು ರನ್ ಕಲೆಹಾಕಬಹುದು ಎಂದು ಭಾವಿಸಲಾಗಿತ್ತು. ಆದರೆ ಲುಂಗಿ ಎಂಗಿಡಿ ಹಾಗು ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಆರ್‌ಸಿಬಿ ತಂಡವನ್ನು 175 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಘಾತ:

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಓವರ್‌ನಲ್ಲಿ ಕೇವಲ ಎರಡು ರನ್ ನೀಡಿ ಪಥುಮ್ ನಿಸ್ಸಾಂಕ ಅವರನ್ನು ಬಲಿ ಪಡೆದ ಭುವಿ, ಮೂರನೇ ಓವರ್‌ನಲ್ಲಿ ಇಂಪ್ಯಾಕ್ಟ್ ಆಟಗಾರ ಕರುಣ್ ನಾಯರ್ ಹಾಗೂ ಸಮೀರ್ ರಿಜ್ವಿ ಬಲಿ ಪಡೆಯುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಸದ್ಯ 3 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತಿವೇಗದ ಐಪಿಎಲ್ 1000 ರನ್! ಸಾಲ್ಟ್, ಹೆಡ್ ದಾಖಲೆ ಮುರಿದ ಟಿಮ್ ಡೇವಿಡ್‌ಗೆ ಎರಡನೇ ಸ್ಥಾನ!
ಆ ಇಬ್ಬರು ಬೌಲರ್‌ಗಳಿಗೆ ಸಂಬಳ ಕೊಟ್ಟು ಮನೆಗೆ ಕಳಿಸಿ! ಮುಂಬೈ ಇಂಡಿಯನ್ಸ್‌ ವೇಗಿಗಳ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ