ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌!

Published : Apr 18, 2026, 09:59 AM IST
KKR Camroon Green

ಸಾರಾಂಶ

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಕ್ಯಾಮರೂನ್ ಗ್ರೀನ್ ಬಾರಿಸಿದ ಸಿಕ್ಸರ್, ಮೈದಾನದಲ್ಲಿದ್ದ 'ಟಾಟಾ ಸಿಯೆರಾ' ಕಾರಿಗೆ ಬಡಿಯಿತು. ಈ ಕಾರಣದಿಂದಾಗಿ, ಟಾಟಾ ಸಂಸ್ಥೆಯು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಲಿದೆ.

ಅಹಮದಾಬಾದ್‌ (ಏ.18): ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಸೋಲು ಕಂಡಿರಬಹುದು. ಆದರೆ, ಕೆಕೆಆರ್ ತಂಡದ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಸಮಾಧಾನ ತಂದಿದೆ. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಗ್ರೀನ್, ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾದರು. ಆದರೆ, ಈ ಪಂದ್ಯದ ನಡುವೆ ಅವರು ಬಾರಿಸಿದ ಒಂದು ಸಿಕ್ಸರ್ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಆ ಒಂದು ಸಿಕ್ಸರ್‌ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ!

ಪಂದ್ಯದ 13ನೇ ಓವರ್‌ನ ಮೂರನೇ ಎಸೆತದಲ್ಲಿ ಈ ಕುತೂಹಲಕಾರಿ ಘಟನೆ ನಡೆಯಿತು. ಅಶೋಕ್ ಶರ್ಮಾ ಎಸೆದ ಚೆಂಡನ್ನು ಕ್ಯಾಮರೂನ್ ಗ್ರೀನ್ ಲೆಗ್ ಸೈಡ್‌ ಕಡೆಗೆ ಬಲವಾಗಿ ಸಿಕ್ಸರ್‌ಗೆ ಅಟ್ಟಿದರು. ಆ ಚೆಂಡು ನೇರವಾಗಿ ಹೋಗಿ ಮೈದಾನದಲ್ಲಿ ಪ್ರದರ್ಶನಕ್ಕಿಟ್ಟಿದ್ದ 'ಟಾಟಾ ಸಿಯೆರಾ' (Tata Sierra) ಕಾರಿನ ಮೇಲೆ ಬಿದ್ದಿತು.

ಟಾಟಾ ಮೋಟಾರ್ಸ್ ಸಂಸ್ಥೆಯು ಈ ಬಾರಿ ಐಪಿಎಲ್‌ನಲ್ಲಿ ವಿಶೇಷ ಘೋಷಣೆಯೊಂದನ್ನು ಮಾಡಿದೆ. ಪಂದ್ಯದ ವೇಳೆ ಯಾವುದಾದರೂ ಆಟಗಾರ ಬಾರಿಸಿದ ಚೆಂಡು ಮೈದಾನದಲ್ಲಿರುವ ಕಾರಿಗೆ ನೇರವಾಗಿ ಬಡಿದರೆ, ಗ್ರಾಮೀಣ ಮಟ್ಟದ ಕ್ರಿಕೆಟ್‌ನ ಅಭಿವೃದ್ಧಿಗಾಗಿ (Grassroots Cricket) ಟಾಟಾ ಸಂಸ್ಥೆಯು 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದೆ. ಹೀಗಾಗಿ, ಗ್ರೀನ್ ಬಾರಿಸಿದ ಆ ಒಂದು ಸಿಕ್ಸರ್‌ನಿಂದಾಗಿ ಈಗ 5 ಲಕ್ಷ ರೂಪಾಯಿ ಕ್ರಿಕೆಟ್ ಅಭಿವೃದ್ಧಿ ನಿಧಿಗೆ ಸೇರಲಿದೆ.

ತಂಡದ ರಕ್ಷಕನಾದ ಗ್ರೀನ್

ಟಾಪ್ ಆರ್ಡರ್ ಬ್ಯಾಟರ್‌ಗಳು ಪೆವಿಲಿಯನ್ ಸೇರಿ ಕೆಕೆಆರ್ ಸಂಕಷ್ಟದಲ್ಲಿದ್ದಾಗ ಕ್ಯಾಮರೂನ್ ಗ್ರೀನ್ ಆಸರೆಯಾದರು. ತಂಡದ ಮೊತ್ತ ಕೇವಲ 32 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಗ್ರೀನ್, 55 ಎಸೆತಗಳಲ್ಲಿ ಭರ್ಜರಿ 79 ರನ್ ಸಿಡಿಸಿದರು. ಈ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ 'ಗೋಲ್ಡನ್ ಡಕ್' (ಸೊನ್ನೆ) ಔಟ್ ಆಗಿ ನಿರಾಸೆ ಮೂಡಿಸಿದರೆ, ಟಿಮ್ ಸೀಫರ್ಟ್ 19 ರನ್ ಹಾಗೂ ಅಂಕೀಶ್ ರಘುವಂಶಿ 8 ರನ್ ಗಳಿಸಿದರು.

ನಾಲ್ಕನೇ ವಿಕೆಟ್‌ಗೆ ರೋವ್‌ಮನ್ ಪವೆಲ್ ಅವರೊಂದಿಗೆ 55 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಗ್ರೀನ್, ತಂಡದ ಮೊತ್ತವನ್ನು 180ಕ್ಕೆ ತಲುಪಿಸಿದರು. ಆದರೆ, ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್, ನಾಯಕ ಶುಭಮನ್ ಗಿಲ್ ಅವರ ಅಜೇಯ 86 ರನ್‌ಗಳ ನೆರವಿನಿಂದ 19.4 ಓವರ್‌ಗಳಲ್ಲಿ ಜಯ ಸಾಧಿಸಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೇಡು ತೀರಿಸಿಕೊಳ್ಳಲು ರೆಡಿಯಾದ ಆರ್‌ಸಿಬಿ!
IPL 2026: ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?