ಪಾಕ್ ಗಳಿಸಿದ್ದು 252, ಲಂಕಾ ಬಾರಿಸಿದ್ದು 252, ಹಾಗಿದ್ರೂ ಲಂಕಾ ಗೆದ್ದಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

By Kannadaprabha News  |  First Published Sep 16, 2023, 8:30 AM IST

ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೇರಲು ವಿಫಲವಾದ ಪಾಕಿಸ್ತಾನ
ಪಾಕ್‌ ಬಾರಿಸಿದ್ದಷ್ಟೇ ರನ್ ಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟ ಶ್ರೀಲಂಕಾ
ಪಾಕ್‌ ಮಣಿಸಿ ಲಂಕಾ ಫೈನಲ್ ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ


ಕೊಲಂಬೊ(ಸೆ.16): ಗುರುವಾರದ ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸರಿ ಸಮನಾದ ರನ್‌ ಗಳಿಸಿದರೂ, ಜಯದ ಅದೃಷ್ಟ ಮಾತ್ರ ಲಂಕಾಕ್ಕೆ ಒಲಿಯಿತು. ಮೊದಲು ಬ್ಯಾಟ್‌ ಮಾಡಿದ ಪಾಕ್‌ 42 ಓವರ್‌ಗಳಲ್ಲಿ 7 ವಿಕೆಟ್‌ಗೆ ಗಳಿಸಿದ್ದು 252 ರನ್‌. ಲಂಕಾಕ್ಕೂ 42 ಓವರಲ್ಲಿ 252 ರನ್‌ ಗುರಿ ನೀಡಲಾಯಿತು. ಇದು ಹೇಗೆ ಸಾಧ್ಯ ಎನ್ನುವ ಗೊಂದಲ ಕ್ರಿಕೆಟ್‌ ಅಭಿಮಾನಿಗಳನ್ನು ಕಾಡಿತು. 

ಇದಕ್ಕೆ ಕಾರಣ ಡಕ್ವರ್ತ್‌ ಲೂಯಿಸ್‌ ನಿಯಮ. ಪಾಕಿಸ್ತಾನದ ಇನ್ನಿಂಗ್ಸ್‌ನ 28ನೇ ಓವರ್‌ ವೇಳೆ ಮಳೆ ಸುರಿದ ಕಾರಣ, ಮೊದಲು ತಲಾ 45 ಓವರ್‌ಗೆ ಕಡಿತಗೊಂಡಿದ್ದ ಪಂದ್ಯವನ್ನು 42 ಓವರ್‌ಗೆ ಇಳಿಸಲಾಯಿತು. ಈ ಸಂದರ್ಭದಲ್ಲಿ ಡಕ್ವರ್ತ್‌ ನಿಯಮ ಅಳವಡಿಸಲಾಯಿತು. ಮಳೆ ವಿರಾಮಕ್ಕೂ ಮುನ್ನ ಪಾಕ್‌ ವಿಕೆಟ್‌ ಕಳೆದುಕೊಂಡಿದ್ದರಿಂದ ಹಿನ್ನಡೆಯಾಯಿತು. ಒಂದು ವೇಳೆ ವಿಕೆಟ್‌ ಕಳೆದುಕೊಳ್ಳದೆ ಇದ್ದಿದ್ದರೆ ಲಂಕಾಕ್ಕೆ 42 ಓವರಲ್ಲಿ 255 ರನ್‌ ಗುರಿ ಸಿಗುತ್ತಿತ್ತು.

Latest Videos

undefined

RCB ತಂಡದಲ್ಲಿ ಈ 5 ನಾಯಕರ ಕೆಳಗೆ IPL ಆಡಿದ್ದಾರೆ ವಿರಾಟ್ ಕೊಹ್ಲಿ..!

ಹೇಗಿತ್ತು ಕೊನೆಯ ಓವರ್‌?

ಕೊನೆಯ ಓವರಲ್ಲಿ ಲಂಕಾಕ್ಕೆ ಗೆಲ್ಲಲು 8 ರನ್‌ ಬೇಕಿತ್ತು. ಮೊದಲ ಎಸೆತದಲ್ಲಿ ಲೆಗ್‌ಬೈ ಮೂಲಕ ಒಂಟಿ ರನ್‌ ಕದ್ದ ಮಧುಶಾನ್‌ ಅಸಲಂಕಗೆ ಸ್ಟ್ರೈಕ್‌ ನೀಡಿದರು. 2ನೇ ಎಸೆತದಲ್ಲಿ ರನ್‌ ಗಳಿಸದ ಅಸಲಂಕ, 3ನೇ ಎಸೆತದಲ್ಲಿ 1 ರನ್‌ ಪಡೆದರು. 4ನೇ ಎಸೆತದಲ್ಲಿ ಮಧುಶಾನ್‌ ರನೌಟ್‌ ಆದರೂ ಅಸಲಂಕಗೆ ಸ್ಟ್ರೈಕ್‌ ಒದಗಿಸುವಲ್ಲಿ ಯಶಸ್ವಿಯಾದರು. ಕೊನೆ 2 ಎಸೆತದಲ್ಲಿ 6 ರನ್‌ ಬೇಕಿತ್ತು. 5ನೇ ಎಸೆತವನ್ನು ಬೌಂಡರಿಗಟ್ಟಿದ ಅಸಲಂಕ, ಕೊನೆಯ ಎಸೆತದಲ್ಲಿ ಬೇಕಿದ್ದ 2 ರನ್‌ ಕದಿಯುವಲ್ಲಿ ಯಶಸ್ವಿಯಾದರು.

ಲಂಕಾ ಸ್ಪಿನ್ನರ್‌ ತೀಕ್ಷಣಗೆ ಗಾಯ: ಫೈನಲ್‌ಗೆ ಅಲಭ್ಯ?

ಕೊಲಂಬೊ: ಗಾಯಾಳುಗಳ ಸಮಸ್ಯೆ ನಡುವೆಯೇ ಏಷ್ಯಾಕಪ್‌ ಫೈನಲ್‌ಗೇರಿರುವ ಶ್ರೀಲಂಕಾಕ್ಕೆ ಸದ್ಯ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ತಾರಾ ಸ್ಪಿನ್ನರ್‌ ಮಹೀಶ ತೀಕ್ಷಣ ಗಾಯಗೊಂಡಿದ್ದಾರೆ. ಗುರುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ತೀಕ್ಷಣ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ತೀಕ್ಷಣ, ಭಾನುವಾರ ಭಾರತ ವಿರುದ್ಧದ ಫೈನಲ್‌ಗೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶ್ವಕಪ್‌ನ ಕೆಲ ಪಂದ್ಯಕ್ಕೆ ಪಾಕ್‌ ವೇಗಿ ನಸೀಂ ಡೌಟ್

ಕೊಲಂಬೊ: ಭಾರತ ವಿರುದ್ಧದ ಸೂಪರ್‌-4 ಪಂದ್ಯದ ವೇಳೆ ಗಾಯಗೊಂಡಿದ್ದ ಪಾಕಿಸ್ತಾನದ ಯುವ ವೇಗಿ ನಸೀಂ ಶಾ ಏಕದಿನ ವಿಶ್ವಕಪ್‌ನ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತಂಡದ ನಾಯಕ ಬಾಬರ್‌ ಆಜಂ ಸುಳಿವು ನೀಡಿದ್ದಾರೆ. ಇನ್ನು ಮತ್ತೊಬ್ಬ ಗಾಯಾಳು ಹ್ಯಾರಿಸ್‌ ರೌಫ್‌ ವಿಶ್ವಕಪ್‌ ವೇಳೆಗೆ ಸಂಪೂರ್ಣ ಫಿಟ್‌ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಮಗುವಾದ್ಮೇಲೆ ಚಾರ್ಮ್ ಕಳೆದುಕೊಂಡ್ರಾ ಮಯಾಂತಿ ಲ್ಯಾಂಗರ್? ನೆಟ್‌ವರ್ಥ್ ಮಾತ್ರ ಹೆಚ್ಚಾಗಿದೆ, ಏಷ್ಟಿದೆ ಆಸ್ತಿ?

ಅರ್ಧ ದಿನಕ್ಕೇ ದಹಾನಿ ಲಂಕಾ ಪ್ರವಾಸ ಅಂತ್ಯ!

ಕೊಲಂಬೊ: ಶ್ರೀಲಂಕಾ ವಿರುದ್ಧ ಸೋಲುಂಡ ಪಾಕಿಸ್ತಾನ ಏಷ್ಯಾಕಪ್‌ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿದೆ. ಈ ನಡುವೆ ಗಾಯಾಳು ಹ್ಯಾರಿಸ್‌ ರೌಫ್‌ರ ಬದಲಿಗರಾಗಿ ತಂಡ ಕೂಡಿಕೊಳ್ಳಲು ಪಾಕ್‌ನಿಂದ ಗುರುವಾರ ರಾತ್ರಿ ಲಂಕಾಕ್ಕೆ ಬಂದ ವೇಗಿ ಶಾನವಾಜ್‌ ದಹಾನಿ ಶುಕ್ರವಾರ ತಂಡದ ಜೊತೆ ಮತ್ತೆ ಪಾಕ್‌ಗೆ ಹಿಂದಿರುಗಬೇಕಾಯಿತು. ಅವರು ಲಂಕಾ ವಿರುದ್ಧದ ಸೂಪರ್‌-4 ಪಂದ್ಯದ ವೇಳೆ ಕೊಲಂಬೊಗೆ ಬಂದಿಳಿದರು. ಆದರೆ ಪಾಕ್‌ ಸೋತು ಹೊರಬಿತ್ತು. ಅರ್ಧ ದಿನಕ್ಕೇ ಮುಕ್ತಾಯಗೊಂಡ ಶಾನವಾಜ್‌ ಪ್ರವಾಸವು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದೆ.

click me!