IPL 2026: ನಿನ್ನೆ ನಡೆದ ಮುಂಬೈ ಇಂಡಿಯನ್ಸ್‌ - ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 24, 2026, 07:35 AM IST
MI vs CSK match results

ಸಾರಾಂಶ

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ, ಸಂಜು ಸ್ಯಾಮ್ಸನ್ ಅವರ ಅಜೇಯ ಶತಕ (101*) ಮತ್ತು ಅಕೇಲ್‌ ಹೊಸೈನ್‌ ಅವರ ಮಾರಕ ಬೌಲಿಂಗ್ (4/17) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸಿಎಸ್‌ಕೆ 7 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿತು.

ಮುಂಬೈ: ಐಪಿಎಲ್‌ನಲ್ಲಿ ತಲಾ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಹಾಗೂ ಚೆನ್ನೈ ನಡುವಿನ ಯಾವುದೇ ಪಂದ್ಯದಲ್ಲೂ ಪ್ರಬಲ ಪೈಪೋಟಿ ಸಹಜ. ಆದರೆ ಈ ಬಾರಿ ಹಾಗಾಗಲಿಲ್ಲ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ 103 ರನ್‌ ಭರ್ಜರಿ ಗೆಲುವು ಸಾಧಿಸಿತು. ಸಿಎಸ್‌ಕೆ 7 ಪಂದ್ಯಗಳಲ್ಲಿ 3ನೇ ಗೆಲುವು ಸಾಧಿಸಿದರೆ, ಮುಂಬೈ 7ರಲ್ಲಿ 3ನೇ ಸೋಲು ಕಂಡಿತು.

ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ 6 ವಿಕೆಟ್‌ಗೆ 207 ರನ್‌ ಗಳಿಸಿತು. ಕೊನೆವರೆಗೂ ಮುಂಬೈ ಬ್ಯಾಟರ್‌ಗಳನ್ನು ಕಾಡಿದ ಸಂಜು, ಸಿಎಸ್‌ಕೆ ಪರ 2ನೇ ಶತಕ ಪೂರ್ಣಗೊಳಿಸಿದರು. ಅವರು 54 ಎಸೆತಗಳಲ್ಲಿ ಔಟಾಗದೆ 101 ರನ್‌ ಸಿಡಿಸಿದರು.ಋತುರಾಜ್‌ 22, ಬ್ರೆವಿಸ್‌ 21 ರನ್‌ ಬಾರಿಸಿದರು.

ಬೃಹತ್‌ ಗುರಿ ಬೆನ್ನತ್ತಿದ ಮುಂಬೈಗೆ ಸಿಎಸ್‌ಕೆ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಅಕೇಲ್‌ ಹೊಸೈನ್‌ ದಾಳಿಯನ್ನು ಎದುರಿಸಲು ಮುಂಬೈಗೆ ಸಾಧ್ಯವಾಗಲೇ ಇಲ್ಲ. ಪವರ್‌ಪ್ಲೇನಲ್ಲಿ 3 ವಿಕೆಟ್‌ಗೆ ಕೇವಲ 29 ರನ್‌ ಗಳಿಸಿದ್ದ ತಂಡ ಆ ಬಳಿಕವೂ ಚೇತರಿಸಿಕೊಳ್ಳಲಿಲ್ಲ. ತಂಡ 19 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು. ತಿಲಕ್‌ 37, ಸೂರ್ಯ 36 ರನ್‌ ಗಳಿಸಿದರು. ಅಕೇಲ್‌ 4 ಓವರ್‌ನಲ್ಲಿ 17 ರನ್‌ಗೆ 4 ವಿಕೆಟ್‌ ಕಿತ್ತರು.

ಸ್ಕೋರ್‌: ಚೆನ್ನೈ 20 ಓವರ್‌ನಲ್ಲಿ 207/6 (ಸಂಜು ಔಟಾಗದೆ 101, ಘಜಾನ್ಫರ್‌ 2-25), ಮುಂಬೈ 19 ಓವರ್‌ನಲ್ಲಿ 104 (ತಿಲಕ್ 37, ಸೂರ್ಯ 36, ಅಕೇಲ್‌ 4-17, ನೂರ್‌ 2-24)

ತಾಯಿ ನಿಧನದ ದುಃಖದ ನಡುವೆ ಆಡಿದ ಮುಕೇಶ್

ಚೆನ್ನೈ ಬೌಲರ್‌ ಮುಕೇಶ್‌ ಚೌಧರಿ ಅವರ ತಾಯಿ ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ನಿಧನರಾಗಿದ್ದಾರೆ. ಈ ದುಃಖದ ಹೊರತಾಗಿಯೂ ಗುರುವಾರ ಮುಂಬೈ ವಿರುದ್ಧ ಪಂದ್ಯದಲ್ಲಿ ಮುಕೇಶ್‌ ಆಡಿದರು. ಅವರ ತಾಯಿಗೆ ಸಂತಾಪ ಸೂಚಿಸಿ ಸಿಎಸ್‌ಕೆ ಆಟಗಾರರು ತೋಳಿಗೆ ಕಪ್ಪು ಪಟ್ಟು ಧರಿಸಿ ಆಡಿದರು.

ಟಿ20ಯಲ್ಲಿ ಸಂಜು 8 ಶತಕ: ಭಾರತೀಯರಲ್ಲಿ 2ನೇ ಗರಿಷ್ಠ

ಮುಂಬೈ: ತಾರಾ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಟಿ20 ಕ್ರಿಕೆಟ್‌ನಲ್ಲಿ 8ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಟಿ20ಯಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ.

ಗುರುವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ ಬ್ಯಾಟರ್‌ ಸಂಜು 54 ಎಸೆತಗಳಲ್ಲಿ ಔಟಾಗದೆ 101 ರನ್‌ ಸಿಡಿಸಿದರು. ಈ ಮೂಲಕ ತಾರಾ ಕ್ರಿಕೆಟಿಗರ ಎಲೈಟ್‌ ಕ್ಲಬ್‌ ಸೇರ್ಪಡೆಗೊಂಡರು. ವಿರಾಟ್‌ ಕೊಹ್ಲಿ, ಅಭಿಷೇಕ್‌ ಶರ್ಮಾ ತಲಾ 9 ಶತಕಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದರೆ, ರೋಹಿತ್‌ ಶರ್ಮಾ, ಸಂಜು ತಲಾ 8 ಶತಕದೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ.

4ನೇ ಗರಿಷ್ಠ:

ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 115 ರನ್‌ ಸಿಡಿಸಿದ್ದ ಸಂಜು, ಈ ಐಪಿಎಲ್‌ನ 2ನೇ, ಒಟ್ಟಾರೆ ಟೂರ್ನಿಯ 5ನೇ ಶತಕ ಸಿಡಿಸಿದರು. ಐಪಿಎಲ್‌ನಲ್ಲಿ ಗರಿಷ್ಠ ಶತಕದ ದಾಖಲೆ ಕೊಹ್ಲಿ ಹೆಸರಲ್ಲಿದೆ. ಅವರು 8 ಶತಕ ಬಾರಿಸಿದ್ದಾರೆ. ಜೋಸ್‌ ಬಟ್ಲರ್‌ 7, ಕ್ರಿಸ್‌ ಗೇಲ್‌ 6, ಕೆ.ಎಲ್‌.ರಾಹುಲ್‌ 5 ಶತಕ ಸಿಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭರ್ಜರಿ ಶತಕ ಸಿಡಿಸಿ ಸಿಎಸ್‌ಕೆ ಪರ ಹೊಸ ದಾಖಲೆ ಸೃಷ್ಟಿಸಿದ ಸಂಜು ಸ್ಯಾಮ್ಸನ್
ಮುಂಬೈ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್..! ಈ ಕ್ರಿಕೆಟಿಗ ಆಡೋದೇ ಡೌಟ್