
ಮುಂಬೈ: ಸದ್ಯ ಐಪಿಎಲ್ ಜ್ವರ ಜೋರಾಗಿದ್ದರೂ, ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮಾತ್ರ ಮುಂಬರುವ ಪ್ರಮುಖ ಟೆಸ್ಟ್ ಪಂದ್ಯಗಳತ್ತ ಗಮನ ಹರಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಗುರಿಗಾಗಿ, ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾರನ್ನು ಏಕದಿನ ಮತ್ತು ಟಿ20 ಪಂದ್ಯಗಳಿಂದ ದೂರವಿಟ್ಟು, ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಪ್ರಸ್ತುತ WTC ಸೈಕಲ್‌ನಲ್ಲಿ ಭಾರತಕ್ಕೆ ಇನ್ನೂ ಒಂಬತ್ತು ಟೆಸ್ಟ್ ಪಂದ್ಯಗಳು ಬಾಕಿ ಇವೆ. ಈ ಎಲ್ಲಾ ಪಂದ್ಯಗಳಲ್ಲೂ ಬುಮ್ರಾ ಆಡಲೇಬೇಕು ಎಂಬುದು ಬೋರ್ಡ್‌ನ ಕಟ್ಟುನಿಟ್ಟಿನ ಸೂಚನೆಯಾಗಿದೆ.
ಭಾರತ ತಂಡ ಮೊದಲು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ತಲಾ ಎರಡು ಪಂದ್ಯಗಳ ಟೆಸ್ಟ್‌ಗಳ ಸರಣಿ ಆಡಲಿದೆ. ಇದಾದ ನಂತರ, ಮುಂದಿನ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್‌ಗಳ ಸರಣಿ ನಡೆಯಲಿದೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸಗಳಲ್ಲಿ ಬುಮ್ರಾ ತಂಡಕ್ಕೆ ಅತ್ಯಗತ್ಯ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ತವರು ಸರಣಿಗೆ ಬುಮ್ರಾರನ್ನು ಸಂಪೂರ್ಣ ಫಿಟ್ ಆಗಿಡುವುದು ಬಿಸಿಸಿಐ ಮುಂದಿರುವ ಅತಿದೊಡ್ಡ ಸವಾಲಾಗಿದೆ.
ಐಪಿಎಲ್ ಮುಗಿದ ತಕ್ಷಣ, ಜೂನ್ 6 ರಿಂದ ಶುರುವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಯಾಕೆಂದರೆ ಈ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಲ್ಲ. ಆದರೆ, ಇದರ ನಂತರ ಮುಲ್ಲನ್‌ಪುರ್‌ನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಹಿರಿಯ ಆಟಗಾರರು ತಂಡಕ್ಕೆ ವಾಪಸ್ ಆಗಬಹುದು. ಸದ್ಯ WTC ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದ್ದು, ಮುಂದಿನ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗಿದೆ.
‘ನಾವು ಬುಮ್ರಾರನ್ನು ಎಲ್ಲಾ ಟೆಸ್ಟ್‌ಗಳಲ್ಲಿ ಆಡಿಸಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯವಿದ್ದರೆ, ಅವರು ಕೆಲವು ಏಕದಿನ ಪಂದ್ಯಗಳಿಂದ ಹೊರಗುಳಿಯಬಹುದು. ಈಗ ಟೆಸ್ಟ್ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಮಯ ಬಂದಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟೆಸ್ಟ್ ಸರಣಿಗಳಿಗೂ ಮುನ್ನ ತಂಡಕ್ಕೆ ಹೆಚ್ಚಿನ ಅಭ್ಯಾಸದ ಅವಧಿ ಬೇಕು ಎಂದು ನಾಯಕ ಶುಭಮನ್ ಗಿಲ್ ಈ ಹಿಂದೆ ಹೇಳಿದ್ದರು. ಸತತ ಕ್ರಿಕೆಟ್ ಪಂದ್ಯಗಳ ನಡುವೆ ಆಟಗಾರರ ಒತ್ತಡವನ್ನು ನಿಭಾಯಿಸುವುದು ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಕೂಡ ಆಯ್ಕೆ ಸಮಿತಿ ಬುಮ್ರಾ ವಿಷಯದಲ್ಲಿ ಈ ಎಚ್ಚರಿಕೆ ವಹಿಸುತ್ತಿದೆ.
ಜಸ್ಪ್ರೀತ್ ಬುಮ್ರಾ ಐಸಿಸಿ ಟೂರ್ನಿಗಳಲ್ಲಿ ಎಷ್ಟೊಂದು ಅಪಾಯಕಾರಿ ಬೌಲರ್ ಎನ್ನುವುದು ಈ ಹಿಂದೆಯೇ ಸಾಬೀತಾಗಿದೆ. ಅದರಲ್ಲೂ ಕಳೆದ ಆವೃತ್ತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ವಿಫಲವಾಗಿರುವ ಭಾರತ ಈ ಬಾರಿ ಶತಾಯಗತಾಯ ಗಿಲ್ ನಾಯಕತ್ವದಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ರಣತಂತ್ರ ಹೆಣೆಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.