
ಬೆಂಗಳೂರು: 2025ರ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಪರ ವಿರಾಟ್ ಕೊಹ್ಲಿ ಜತೆ ಹೊಸ ಆಟಗಾರರೊಬ್ಬರು ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಯಾಕೆಂದರೆ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿಯು ನಾಯಕ ಹಾಗೂ ಆರಂಭಿಕ ಬ್ಯಾಟರ್ ಆಗಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ರಿಲೀಸ್ ಮಾಡಿದೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಜತೆ ಇನ್ನಿಂಗ್ಸ್ ಆರಂಭಿಸೋದು ಯಾರು ಎನ್ನುವ ಕುತೂಹಲ ಜೋರಾಗಿದೆ.
ಕಳೆದ ಎರಡು-ಮೂರು ಸೀಸನ್‌ಗಳಿಂದಲೂ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಈ ಜೋಡಿ ಬೆಂಗಳೂರು ತಂಡಕ್ಕೆ ಸ್ಪೋಟಕ ಆರಂಭ ತಂದುಕೊಡುತ್ತಿದ್ದರು. ಆದರೆ ಈ ಬಾರಿ ವಿರಾಟ್ ಕೊಹ್ಲಿ ಜತೆ ಈ ಇಬ್ಬರು ಆಟಗಾರರ ಪೈಕಿ ಒಬ್ಬರು ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲು ಪೈಪೋಟಿ ನಡೆಸುತ್ತಿರುವ ಆ ಇಬ್ಬರು ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಡೆವೊನ್ ಕಾನ್‌ವೇ:
ನ್ಯೂಜಿಲೆಂಡ್ ಎಡಗೈ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡಿದೆ. ಹೀಗಾಗಿ ಕಾನ್‌ವೇ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು, ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಡೆವೊನ್ ಕಾನ್‌ವೇ ಅವರನ್ನು ಹರಾಜಿನಲ್ಲಿ ಖರೀದಿಸಲು ರಣತಂತ್ರ ಹೆಣೆಯುತ್ತಿದೆ. ಕಾನ್‌ವೇ ಮೂಲ ಬೆಲೆ 2 ಕೋಟಿ ರುಪಾಯಿಗಳಾಗಿದೆ. ಆರ್‌ಸಿಬಿ ತಂಡವು ಎಡಗೈ ಹಾಗೂ ಬಲಗೈ ಕಾಂಬಿನೇಷನ್ ಆರಂಭಿರನ್ನು ಹೊಂದುವ ಉದ್ದೇಶದಿಂದ ಕಾನ್‌ವೇಗೆ ಗಾಳ ಹಾಕುವ ಸಾಧ್ಯತೆ ದಟ್ಟವಾಗಿದೆ.
2. ಕೆ ಎಲ್ ರಾಹುಲ್:
ಲಖನೌ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಹಾಗೂ ಕನ್ನಡಿಗ ಕೆ ಎಲ್ ರಾಹುಲ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೆ ಎಲ್ ರಾಹುಲ್ ಈ ಹಿಂದೆಯೂ, ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಹೇಳಿರುವುದರಿಂದಾಗಿ ಆರ್‌ಸಿಬಿ ತಂಡಕ್ಕೆ ಓರ್ವ ವಿಕೆಟ್ ಕೀಪರ್ ಬ್ಯಾಟರ್ ಅಗತ್ಯವಿದೆ. ಕೆ ಎಲ್ ರಾಹುಲ್ ಆರಂಭಿಕ ಬ್ಯಾಟರ್ ಮಾತ್ರವಲ್ಲದೇ ವಿಕೆಟ್ ಕೀಪರ್ ಆಗಿಯೂ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿಭಾಯಿಸಬಲ್ಲರು. ಈ ಮೊದಲು ಕೆ ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಪರವಿದ್ದಾಗಲೂ ಸ್ಪೋಟಕ ಆರಂಭಿಕ ಬ್ಯಾಟರ್ ಆಗಿ ಗಮನ ಸೆಳೆದಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಜತೆಗೆ ರಾಹುಲ್ ಆರಂಭಿಕನಾಗಿ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.
ಐಪಿಎಲ್ ಮೆಗಾ ಹರಾಜು: ಅನ್‌ಸೋಲ್ಡ್ ಭೀತಿಯಲ್ಲಿದ್ದಾರೆ ಈ 5 ವಿದೇಶಿ ಸ್ಟಾರ್ ಪ್ಲೇಯರ್ಸ್!
2025ರ ಐಪಿಎಲ್ ಮೆಗಾ ಹರಾಜು ಮುಂಬರುವ ನವೆಂಬರ್ 24 ಹಾಗೂ 25ರಂದು ಸೌದಿ ಅರೆಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಆರ್‌ಸಿಬಿ ತಂಡವು ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.