
ಬೆಂಗಳೂರು: ಭಾರತದ ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಗಾಬಾ ಟೆಸ್ಟ್ ಮುಗಿಯುತ್ತಿದ್ದಂತೆಯೇ ಅಚ್ಚರಿಯ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, 26 ವರ್ಷದ ಪ್ರತಿಭಾನ್ವಿತ ಆಲ್ರೌಂಡರ್ ತನುಷ್ ಕೋಟ್ಯಾನ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಪಾಂಗಳದವರಾದ ತನುಷ್ ಕೋಟ್ಯಾನ್, ಮುಂಬೈ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆಫ್‌ಸ್ಪಿನ್ನರ್ ಆಗಿರುವ ತನುಷ್ ಕೋಟ್ಯಾನ್, ಬಲಗೈ ಬ್ಯಾಟರ್ ಕೂಡಾ ಹೌದು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಭಾರತ 'ಎ' ತಂಡದ ಜತೆಗೆ ತನುಷ್ ಕೋಟ್ಯಾನ್ ಆಸ್ಟ್ರೇಲಿಯಾ ಪ್ರವಾಸ ಮಾಡಿ ಗಮನಾರ್ಹ ಪ್ರದರ್ಶನ ತೋರಿದ್ದರು. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿರುವ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ತನುಷ್ ಕೋಟ್ಯಾನ್ ಭಾರತ 'ಎ' ತಂಡದ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಅಮೂಲ್ಯ 44 ರನ್ ಸಿಡಿಸಿ ಮಿಂಚಿದ್ದರು.
ಅಶ್ವಿನ್ ನಿವೃತ್ತಿ ಬೆನ್ನಲ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಕನ್ನಡಿಗ!
ತನುಷ್ ಕೋಟ್ಯಾನ್ 2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಷ್ಟೇ ಅಲ್ಲದೇ ಮುಂಬೈ ತಂಡವು 42ನೇ ಬಾರಿಗೆ ರಣಜಿ ಟ್ರೋಫಿ ಜಯಿಸುವಲ್ಲಿ ತನುಷ್ ಕೋಟ್ಯಾನ್ ಪ್ರಮುಖ ಪಾತ್ರ ವಹಿಸಿದ್ದರು. 2023-24ರ ರಣಜಿ ಟ್ರೋಫಿ ಟೂರ್ನಿಯಲ್ಲಿ ತನುಷ್ ಕೋಟ್ಯಾನ್ 16.96ರ ಸರಾಸರಿಯಲ್ಲಿ 29 ವಿಕೆಟ್ ಕಬಳಿಸಿದ್ದರು. ಇನ್ನು ಇದಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲಿ ಒಂದು ಶತಕ, 5 ಅರ್ಧಶತಕ ಸಹಿತ 41.83ರ ಬ್ಯಾಟಿಂಗ್ ಸರಾಸರಿಯಲ್ಲಿ 502 ರನ್ ಸಿಡಿಸಿದ್ದರು.
ತನುಷ್ ಕೋಟ್ಯಾನ್ ಕಳೆದ ವರ್ಷ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ತಾನಾಡಿದ ಮೊದಲ ಪಂದ್ಯದಲ್ಲೇ ತನುಷ್ 24 ರನ್ ಸಿಡಿಸಿದ್ದರು. ಆದರೆ ತನುಷ್‌ಗೆ ಆ ಪಂದ್ಯದಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ತನುಷ್ ಅನ್‌ಸೋಲ್ಡ್ ಆಗಿದ್ದರು.
ಮೆಲ್ಬರ್ನ್‌ನಲ್ಲೇ ಏಕೆ ಬಾಕ್ಸಿಂಗ್ ಡೇ ಟೆಸ್ಟ್ ಆಯೋಜಿಸುತ್ತಾರೆ? ಏನಿದರ ಸ್ಪೆಷಾಲಿಟಿ?
ಇದುವರೆಗೂ 33 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ತನುಷ್ ಕೋಟ್ಯಾನ್, 41.21ರ ಬ್ಯಾಟಿಂಗ್ ಸರಾಸರಿಯಲ್ಲಿ 2523 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 25.70 ಸರಾಸರಿಯಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ತನುಷ್ ಕೋಟ್ಯಾನ್ ಕೊನೆಗೂ ಟೀಂ ಇಂಡಿಯಾ ಆಯ್ಕೆ ಸಮಿತಿ ಗಮನ ಸೆಳೆಯುವ ಮೂಲಕ ಭಾರತ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.
ಸದ್ಯ ಸ್ಪಿನ್ ಆಲ್ರೌಂಡರ್ ರೂಪದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಅವರು ಭಾರತ ತಂಡದಲ್ಲಿದ್ದು, ಅವರನ್ನು ಹಿಂದಿಕ್ಕಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ತನುಷ್ ಕೋಟ್ಯಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.