ಐಪಿಎಲ್‌ ನಡೆಯದಿದ್ದರೆ ಏನಾಗಲಿದೆ ಧೋನಿ ಭವಿಷ್ಯ?

By Suvarna News  |  First Published Mar 18, 2020, 1:06 PM IST

ಕೊರೋನಾ ವೈರಸ್‌ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಒಂದು ವೇಳೆ ಐಪಿಎಲ್ ಟೂರ್ನಿ ಸಂಪೂರ್ಣ ರದ್ದಾದರೆ ಧೋನಿ ಕ್ರಿಕೆಟ್ ಭವಿಷ್ಯ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.


ನವದೆಹಲಿ(ಮಾ.18): 2020ರ ಐಪಿಎಲ್‌ ಟೂರ್ನಿ ಭವಿಷ್ಯ ಇನ್ನೂ ನಿಶ್ಚಯವಾಗಿಲ್ಲ. ಮಾ.29ಕ್ಕೆ ಆರಂಭಗೊಳ್ಳಬೇಕಿದ್ದ 13ನೇ ಆವೃತ್ತಿಯನ್ನು ಏ.15ರ ವರೆಗೂ ಅಮಾನತುಗೊಳಿಸಲಾಗಿದೆ. ಆ ನಂತರವೂ ಟೂರ್ನಿ ಆರಂಭಗೊಳ್ಳುವುದು ಖಚಿತವಿಲ್ಲ. ಈ ಬಾರಿ ಐಪಿಎಲ್‌ನಲ್ಲಿ ಉತ್ತಮ ಆಟವಾಡಿ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಹಲವು ಆಟಗಾರರು ಕಾತರಿಸುತ್ತಿದ್ದಾರೆ, ಆ ಪೈಕಿ ಎಲ್ಲರ ಗಮನವಿರುವುದು ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಮೇಲೆ.

ಈ ಬಾರಿ ಐಪಿಎಲ್ ಟೂರ್ನಿ ನಡೆಯೋದು ಡೌಟ್..!

Latest Videos

undefined

ಐಪಿಎಲ್‌ 13ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದರಷ್ಟೇ ಭಾರತ ತಂಡಕ್ಕೆ ಧೋನಿ ವಾಪಸಾಗಲು ಸಾಧ್ಯ ಎನ್ನುವುದು ಬಿಸಿಸಿಐ ಆಯ್ಕೆ ಸಮಿತಿಯ ನಿಲುವು. ಭಾರತ ತಂಡದ ಪ್ರಧಾನ ಕೋಚ್‌ ರವಿ ಶಾಸ್ತ್ರಿ ಸಹ ಇದೇ ಅಭಿಪ್ರಾಯವನ್ನು ಹಲವು ಬಾರಿ ವ್ಯಕ್ತಪಡಿಸಿದ್ದರು. ‘ಧೋನಿ ಐಪಿಎಲ್‌ನಲ್ಲಿ ಹೇಗೆ ಆಡಲಿದ್ದಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ಧೋನಿಯ ಪ್ರತಿಸ್ಪರ್ಧಿಗಳು ಕೀಪಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಎಷ್ಟರ ಮಟ್ಟಿಗೆ ಲಯ ಉಳಿಸಿಕೊಳ್ಳಲಿದ್ದಾರೆ. ಐಪಿಎಲ್‌ ಅತ್ಯಂತ ಮಹತ್ವದ ಟೂರ್ನಿಯಾಗಲಿದ್ದು, ಆಯ್ಕೆಗೆ ಪರಿಗಣಿಸಲು ಬಹುತೇಕ ಕೊನೆ ಟೂರ್ನಿಯಾಗಲಿದೆ. ಐಪಿಎಲ್‌ ಮುಗಿಯುವ ವೇಳೆಗೆ ಹೆಚ್ಚೂ ಕಡಿಮೆ ಅಂತಿಮ 15ರ ತಂಡ ನಿರ್ಧಾರವಾಗಿರಲಿದೆ’ ಎಂದಿದ್ದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದು, ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ಕುತೂಹಲ ಮುಂದುವರಿದಿದೆ.

IPL 2020: ಚೆನ್ನೈ ತೊರೆದ CSK ನಾಯಕ MS ಧೋನಿ..!

ತಿಂಗಳ ಮುಂಚೆ ಅಭ್ಯಾಸ ಶುರು: ಧೋನಿ ಸಹ ಈ ವರ್ಷದ ಐಪಿಎಲ್‌ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅದಕ್ಕಾಗೇ ಮಾ.1ರಂದೇ ಅವರು ಚೆನ್ನೈ ತಲುಪಿ ಚೆಪಾಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಚೆನ್ನೈಗೆ ತೆರಳುವ ಮುನ್ನ ರಾಂಚಿಯಲ್ಲಿ ಕೆಲ ದಿನಗಳ ಕಾಲ ತಯಾರಿ ನಡೆಸಿದ್ದರು. ಸುರೇಶ್‌ ರೈನಾ, ಮುರಳಿ ವಿಜಯ್‌ ಸೇರಿದಂತೆ ಇನ್ನೂ ಕೆಲ ಆಟಗಾರರೊಂದಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಅಭ್ಯಾಸ ಪಂದ್ಯವೊಂದರಲ್ಲಿ ಧೋನಿ ಭರ್ಜರಿ ಶತಕ ಸಹ ಬಾರಿಸಿದ್ದರು. ಆದರೆ ಕೊರೋನಾ ಸೋಂಕಿನ ಭೀತಿಯಿಂದಾಗಿ ಐಪಿಎಲ್‌ ಶಿಬಿರಗಳನ್ನು ರದ್ದುಗೊಳಿಸಲಾಯಿತು. ಹೀಗಾಗಿ ಕಳೆದ ವಾರ ಧೋನಿ ರಾಂಚಿಗೆ ವಾಪಸಾಗಬೇಕಾಯಿತು.

ರಿಷಭ್‌ ಪಂತ್‌ರನ್ನು ಧೋನಿಯ ಉತ್ತರಾಧಿಕಾರಿ ಎಂದು ಗುರುತಿಸಿದ ಆಯ್ಕೆ ಸಮಿತಿ ಅವರಿಗೆ ನಿರೀಕ್ಷೆಗಿಂತ ಹೆಚ್ಚು ಅವಕಾಶಗಳನ್ನು ನೀಡಿದರೂ ಪ್ರಯೋಗವಾಗಲಿಲ್ಲ. ಆದರೆ ಕೆ.ಎಲ್‌.ರಾಹುಲ್‌ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಟಿ20, ಏಕದಿನ ಎರಡರಲ್ಲೂ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸ್ಥಾನವನ್ನು ಕಾಯಂಗೊಳಿಸಿಕೊಂಡಿದ್ದಾರೆ. ವಿಶ್ವಕಪ್‌ ತಂಡದಲ್ಲಿ ರಾಹುಲ್‌ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ರಿಷಭ್‌ ಪಂತ್‌ರನ್ನು ಮುಂದುವರಿಸುತ್ತಾರಾ ಇಲ್ಲವೇ ಧೋನಿಯನ್ನು ಕರೆತರುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರವನ್ನು ಐಪಿಎಲ್‌ ನೀಡಬೇಕಿದೆ. ಒಂದೊಮ್ಮೆ ಐಪಿಎಲ್‌ ನಡೆಯದಿದ್ದರೆ ಧೋನಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
 

click me!