ಟೆಸ್ಟ್‌ನ ಎಲ್ಲಾ 5 ದಿನ ಬ್ಯಾಟಿಂಗ್‌: ಕ್ರೇಗ್‌, ತೇಜನಾರಾಯಣ ಅಪರೂಪದ ವಿಶ್ವದಾಖಲೆ!

By Kannadaprabha NewsFirst Published Feb 9, 2023, 11:08 AM IST
Highlights

ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ವೆಸ್ಟ್‌ ಇಂಡೀಸ್‌ನ ಕ್ರೆಗ್ ಬ್ರಾಥ್‌ವೇಟ್, ತೇಜನಾರಾಯಣ ಚಂದ್ರಪಾಲ್
ಟೆಸ್ಟ್‌ ಕ್ರಿಕೆಟ್‌ನ ಐದೂ ದಿನವೂ ಬ್ಯಾಟಿಂಗ್ ಮಾಡಲಿಳಿದ ಈ ಆರಂಭಿಕ ಜೋಡಿ
ವೆಸ್ಟ್ ಇಂಡೀಸ್-ಜಿಂಬಾಬ್ವೆ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

ಬುಲವಾಯೋ(ಫೆ.09): ವೆಸ್ಟ್‌ಇಂಡೀಸ್‌ನ ಕ್ರೇಗ್‌ ಬ್ರಾಥ್‌ವೇಟ್‌ ಹಾಗೂ ತೇಜನಾರಾಯಣ ಚಂದ್ರಪಾಲ್‌ ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎಲ್ಲಾ 5 ದಿನ ಬ್ಯಾಟ್‌ ಮಾಡಿ ದಾಖಲೆ ಬರೆದಿದ್ದಾರೆ. 145 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ಜೋಡಿಯೊಂದು ಎಲ್ಲಾ 5 ದಿನ ಬ್ಯಾಟ್‌ ಮಾಡಿದ್ದು ಇದೇ ಮೊದಲು. 

ಟಾಸ್‌ ಗೆದ್ದ ವಿಂಡೀಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಕ್ರೇಗ್‌ ಹಾಗೂ ತೇಜನಾರಾಯಣ ಜೋಡಿ ಮೊದಲ 3 ದಿನಗಳಲ್ಲಿ ಮೊದಲ ವಿಕೆಟ್‌ಗೆ 336 ರನ್‌ ಜೊತೆಯಾಟವಾಡಿತ್ತು. ವಿಂಡೀಸ್‌ ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 447 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡ ಬಳಿಕ ಜಿಂಬಾಬ್ವೆ 3 ಹಾಗೂ 4ನೇ ದಿನದಾಟದಲ್ಲಿ 379ಕ್ಕೆ 9 ವಿಕೆಟ್‌ ಕಳೆದುಕೊಂಡು ಡಿಕ್ಲೇರ್‌ ಮಾಡಿಕೊಂಡಿತು. 

ಅಪ್ಪನ ಹಾದಿಯಲ್ಲಿಯೇ ಮಗ ಚಂದ್ರಪಾಲ್, ದ್ವಿಶತಕ ಸಾಧನೆ ಮಾಡಿದ ಜಗತ್ತಿನ ಏಕೈಕ ತಂದೆ-ಮಗನ ಜೋಡಿ

ಪರಿಣಾಮ, 4ನೇ ದಿನದಾಟದ ಕೊನೆಯಲ್ಲಿ ಕ್ರೇಗ್‌ ಹಾಗೂ ತೇಜನಾರಾಯಣಗೆ ಬ್ಯಾಟಿಂಗ್‌ ಅವಕಾಶ ದೊರೆಯಿತು. ಈ ಜೋಡಿ ವಿಕೆಟ್‌ ಕಾಯ್ದುಕೊಂಡು 5ನೇ ದಿನವೂ ಬ್ಯಾಟ್‌ ಮಾಡಿತು. ವಿಂಡೀಸ್‌ 203ಕ್ಕೆ 5 ವಿಕೆಟ್‌ ಕಳೆದುಕೊಂಡು ಡಿಕ್ಲೇರ್‌ ಮಾಡಿಕೊಂಡು ಜಿಂಬಾಬ್ವೆಗೆ 272 ರನ್‌ ಗುರಿ ನೀಡಿತು. ಜಿಂಬಾಬ್ವೆ 6 ವಿಕೆಟ್‌ಗೆ 134 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.

ಜೂನ್ 7ರಿಂದ ಟೆಸ್ಟ್‌ ವಿಶ್ವಕಪ್‌ ಫೈನಲ್‌

ದುಬೈ: 2021-23ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ಜೂನ್‌ 7ರಿಂದ 11ರ ವರೆಗೂ ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬುಧವಾರ ಘೋಷಿಸಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆಎ ಜೂ.12 ಮೀಸಲು ದಿನವಾಗಿರಲಿದೆ.

‘ದಕ್ಷಿಣ ಲಂಡನ್‌ನ ಈ ಕ್ರೀಡಾಂಗಣ 100ಕ್ಕೂ ಹೆಚ್ಚು ಟೆಸ್ಟ್‌ಗಳಿಗೆ ಆತಿಥ್ಯ ವಹಿಸಿದ್ದು, ದೊಡ್ಡ ಇತಿಹಾಸ ಹೊಂದಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರೆಗೂ ಒಟ್ಟು 24 ಸರಣಿಗಳ 61 ಪಂದ್ಯಗಳು ಪೂರ್ಣಗೊಂಡಿದ್ದು, ಫೈನಲ್‌ನಲ್ಲಿ ಸೆಣಸಲಿರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಿಲ್ಲ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಆಸ್ಪ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ಭಾರತ 2ನೇ ಸ್ಥಾನದಲ್ಲಿದೆ. ಈ ಎರಡು ತಂಡಗಳೇ ಫೈನಲ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚು.

2019-2021ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್‌ ಸೆಣಸಿದ್ದವು. ನ್ಯೂಜಿಲೆಂಡ್‌ 8 ವಿಕೆಟ್‌ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿತ್ತು. ಪಂದ್ಯಕ್ಕೆ ಇಂಗ್ಲೆಂಡ್‌ನ ಸೌಥಾಂಪ್ಟನ್‌ ಆತಿಥ್ಯ ವಹಿಸಿತ್ತು.

ಟಿ20 ರ‍್ಯಾಂಕಿಂಗ್‌‌: ಸೂರ್ಯಕುಮಾರ್ ಯಾದವ್ ನಂ.1 ಸ್ಥಾನ ಭದ್ರ

ದುಬೈ: ಭಾರತದ ಸೂರ್ಯಕುಮಾರ್‌ ಯಾದವ್‌ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಸೂರ್ಯ 906 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ 836 ಅಂಕ ಗಳಿಸಿದ್ದಾರೆ. ಇನ್ನು ಶುಭ್‌ಮನ್‌ ಗಿಲ್‌ ವೃತ್ತಿಬದುಕಿನ ಶ್ರೇಷ್ಠ 30ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡಿರುವ ಹಾರ್ದಿಕ್‌ ಪಾಂಡ್ಯ 2ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಅಗ್ರ 10ರ ಪಟ್ಟಿಯಲ್ಲಿ ಭಾರತೀಯರಿಲ್ಲ.
 

click me!