Ind vs WI: ಭಾರತದ ಟಿ20 ಸರಣಿಗೆ ವಿಂಡೀಸ್‌ ತಂಡ ಪ್ರಕಟ..!

Suvarna News   | Asianet News
Published : Feb 01, 2022, 01:21 PM IST
Ind vs WI: ಭಾರತದ ಟಿ20 ಸರಣಿಗೆ ವಿಂಡೀಸ್‌ ತಂಡ ಪ್ರಕಟ..!

ಸಾರಾಂಶ

* ಭಾರತ ವಿರುದ್ದದ 3 ಪಂದ್ಯಗಳ ಟಿ20 ಸರಣಿಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ * 3 ಪಂದ್ಯಗಳು ಕೋಲ್ಕತಾದಲ್ಲಿ ಫೆ.16, 18 ಮತ್ತು 20ಕ್ಕೆ ನಡೆಯಲಿದೆ * ನಿಕೋಲಸ್‌ ಪೂರನ್‌ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ

ಆ್ಯಂಟಿಗಾ(ಫೆ.01): ಭಾರತದ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ 16 ಮಂದಿಯ ವೆಸ್ಟ್‌ ಇಂಡೀಸ್‌ ತಂಡ (West Indies Cricket Team) ಪ್ರಕಟಿಸಲಾಗಿದ್ದು, ಇಂಗ್ಲೆಂಡ್‌ ವಿರುದ್ಧ ಆಡಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. 3 ಪಂದ್ಯಗಳು ಕೋಲ್ಕತಾದಲ್ಲಿ ಫೆ.16, 18 ಮತ್ತು 20ಕ್ಕೆ ನಡೆಯಲಿದ್ದು, ತಂಡವನ್ನು ಕೀರನ್‌ ಪೊಲ್ಲಾರ್ಡ್‌ (Kieron Pollard) ಮುನ್ನಡೆಸಲಿದ್ದಾರೆ. ನಿಕೋಲಸ್‌ ಪೂರನ್‌ (Nicholas Pooran) ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಗಾಯಾಳು ಶಿಮ್ರೋನ್‌ ಹೆಟ್ಮೇಯರ್‌ ತಂಡದಿಂದ ಹೊರಬಿದ್ದಿದ್ದಾರೆ.

ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್‌ ವಿರುದ್ದ 3-2 ಅಂತರದಲ್ಲಿ ಟಿ20 ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ವೆಸ್ಟ್ ಇಂಡೀಸ್‌ ತಂಡವು, ಇದೀಗ ಭಾರತ ಪ್ರವಾಸವನ್ನು ಫಲಪ್ರದವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಗೆ ಈಗಾಗಲೇ ವೆಸ್ಟ್ ಇಂಡೀಸ್ ತಂಡ ಪ್ರಕಟವಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 06ರಿಂದ ಆರಂಭವಾಗಲಿದೆ.

ಟಿ20 ಸರಣಿಗೆ ವೆಸ್ಟ್‌ ಇಂಡೀಸ್‌ ತಂಡ:

ಕೀರನ್ ಪೊಲ್ಲಾರ್ಡ್‌, ನಿಕೋಲಸ್ ಪೂರನ್‌, ಫ್ಯಾಬಿಯನ್ ಅಲೆನ್‌, ಡರ್ರೆನ್‌ ಬ್ರಾವೋ, ರೋಸ್ಟನ್‌ ಚೇಸ್‌, ಶೆಲ್ಡಾನ್‌ ಕಾಟ್ರೆಲ್, ಡ್ರೇಕ್ಸ್‌, ಜೇಸನ್ ಹೋಲ್ಡರ್‌, ಶಾಯ್ ಹೋಪ್‌, ಹೊಸೈನ್‌, ಬ್ರೆಂಡನ್ ಕಿಂಗ್‌, ಪೊವೆಲ್‌, ಶೆಫರ್ಡ್‌, ಸ್ಮಿತ್‌, ಮೇಯ​ರ್ಸ್‌, ವಾಲ್ಸ್‌

ಟಿ20 ಸರಣಿಗೆ 75 ಶೇಕಡ ಪ್ರೇಕ್ಷಕರಿಗೆ ಅನುಮತಿ

ಕೋಲ್ಕತಾ: ಮುಂಬರುವ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಟಿ20 ಸರಣಿಗೆ ಪ್ರೇಕ್ಷಕರಿಗೆ ಅನುಮತಿ ಸಿಕ್ಕಿದ್ದು, ಶೇ.75 ಆಸನ ಭರ್ತಿ ಮಾಡಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಿದೆ. 3 ಪಂದ್ಯಗಳ ಸರಣಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಫೆ.16ರಂದು ಮೊದಲ ಪಂದ್ಯ ನಡೆಯಲಿದೆ. 

IPL Auction 2022: ಈ ಮೂವರು ವಿಂಡೀಸ್ ಸ್ಟಾರ್ ಆಟಗಾರರು ಅನ್‌ಸೋಲ್ಡ್‌ ಆಗಬಹುದು..!

ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಮಾರ್ಗಸೂಚಿ ಅನ್ವಯ ಕ್ರೀಡಾಂಗಣದ ಆಸನದಲ್ಲಿ ಶೇ.75ರಷ್ಟು ಪ್ರೇಕ್ಷಕರಿಗೆ ಅನುಮತಿ ಇದೆ. 68,000 ಆಸನಗಳ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರ ಪ್ರೇಕ್ಷಕರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಒನ್‌ಡೇ: ಅಹಮದಾಬಾದ್‌ ತಲುಪಿದ ಭಾರತ ತಂಡ

ಅಹಮದಾಬಾದ್‌: ವೆಸ್ಟ್‌ಇಂಡೀಸ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಭಾರತ ತಂಡ ಸೋಮವಾರ ಅಹಮದಾಬಾದ್‌ ತಲುಪಿತು. 3 ದಿನಗಳ ಕ್ವಾರಂಟೈನ್‌ ಬಳಿಕ ಆಟಗಾರರು ಅಭ್ಯಾಸ ಆರಂಭಿಸಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿ ಬಳಿಕ ಭಾರತ ಹಾಗೂ ವಿಂಡೀಸ್‌ ತಂಡಗಳು ಕೋಲ್ಕತಾಗೆ ತೆರಳಲಿದ್ದು, 3 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಟಿ20: ಇಂಗ್ಲೆಂಡ್‌ ವಿರುದ್ಧ 3-2ರಲ್ಲಿ ಗೆದ್ದ ವಿಂಡೀಸ್‌

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 5ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ 17 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯನ್ನು 3-2ರಲ್ಲಿ ವಶಪಡಿಸಿಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 4 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆ ಹಾಕಿತು. 

ನಾಯಕ ಕೀರನ್‌ ಪೊಲ್ಲಾರ್ಡ್‌ (41), ರೋವ್‌ಮನ್‌ ಪೊವೆಲ್‌ (17 ಎಸೆತದಲ್ಲಿ 35) ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 19.5 ಓವರಲ್ಲಿ 162 ರನ್‌ಗೆ ಆಲೌಟಾಯಿತು. ಜೇಮ್ಸ್‌ ವಿನ್ಸ್‌(55), ಸ್ಯಾಮ್‌ ಬಿಲ್ಲಿಂಗ್ಸ್‌ 41 ರನ್‌ ಗಳಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಜೇಸನ್‌ ಹೋಲ್ಡರ್‌ 5, ಅಕೇಲ್‌ ಹೊಸೈನ್‌ 4 ವಿಕೆಟ್‌ ಪಡೆದರು.

4 ಬಾಲ್‌ನಲ್ಲಿ 4 ವಿಕೆಟ್‌ ಕಬಳಿಸಿದ ಹೋಲ್ಡರ್‌

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಕಿತ್ತ ವಿಂಡೀಸ್‌ನ ಜೇಸನ್‌ ಹೋಲ್ಡರ್‌(Jason Holder), ಅಂ.ರಾ.ಟಿ20ಯಲ್ಲಿ ಈ ಸಾಧನೆ ಮಾಡಿದ 4ನೇ ಬೌಲರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 

ಅಂತಿಮ ಓವರಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 20 ರನ್‌ ಬೇಕಿದ್ದಾಗ ಹೋಲ್ಡರ್‌ ಸತತ 4 ಎಸೆತಗಳಲ್ಲಿ ಜೋರ್ಡನ್‌, ಬಿಲ್ಲಿಂಗ್ಸ್‌, ರಶೀದ್‌ ಹಾಗೂ ಮಹ್ಮೂದ್‌ ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮೊದಲು ಲಂಕಾದ ಲಸಿತ್‌ ಮಾಲಿಂಗಾ, ಆಫ್ಘನ್‌ನ ರಶೀದ್‌ ಖಾನ್‌ ಹಾಗೂ ಐರ್ಲೆಂಡ್‌ನ ಕರ್ಟಿಸ್‌ ಕ್ಯಾಂಫರ್‌ 4 ಎಸೆತಗಳಲ್ಲಿ 4 ವಿಕೆಟ್‌ ಪಡೆದಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!