* ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಸುಳಿವು ಕೊಟ್ಟ ದಿನೇಶ್ ಕಾರ್ತಿಕ್
* ಟಿ20 ಕ್ರಿಕೆಟ್‌ನಲ್ಲಿ ಮತ್ತೆ ದೇಶ ಪ್ರತಿನಿಧಿಸುವ ಆಸೆ ವ್ಯಕ್ತಪಡಿಸಿದ ವಿಕೆಟ್ ಕೀಪರ್
* ಇನ್ನೂ ನನ್ನಲ್ಲಿ ಕ್ರಿಕೆಟ್ ಕಿಚ್ಚಿದೆ ಎಂದ ಅನುಭವಿ ವಿಕೆಟ್ ಕೀಪರ್
ನವದೆಹಲಿ(ಜ.30): ದಿನೇಶ್ ಕಾರ್ತಿಕ್ 2004ರಲ್ಲಿ ಟೀಂ ಇಂಡಿಯಾಗೆ (Team India) ಪಾದಾರ್ಪಣೆ ಮಾಡಿದಾಗ, ಅವರೊಬ್ಬ ಭಾರತದ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್ ಆಗಬಲ್ಲರು ಎಂದು ಬಹುತೇಕ ಕ್ರಿಕೆಟ್ ಪಂಡಿತರು ಷರಾ ಬರೆದಿದ್ದರು. ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ನಾಯಕರಾಗಿದ್ದ ಮೈಕಲ್ ವಾನ್ ಅವರನ್ನು ಸ್ಟಂಪೌಟ್ ಮಾಡಿದ ರೀತಿ ಬಹುತೇಕ ಕ್ರಿಕೆಟ್ ಪರಿಣಿತರ ಹುಬ್ಬೇರಿಸುವಂತೆ ಮಾಡಿತ್ತು. ಆಗ ಕೇವಲ 19 ವರ್ಷದವರಾಗಿದ್ದ ದಿನೇಶ್ ಕಾರ್ತಿಕ್ (Dinesh Karthik) ಭಾರತದ ಭವಿಷ್ಯದ ತಾರೆ ಆಗಬಹುದು ಎಂದೇ ಭಾವಿಸಲಾಗಿತ್ತು.
ಆದರೆ ಮಹೇಂದ್ರ ಸಿಂಗ್ ಧೋನಿ (MS Dhoni) ಟೀಂ ಇಂಡಿಯಾಗೆ ಎಂಟ್ರಿಕೊಡುತ್ತಿದ್ದಂತೆಯೇ, ವಿಕೆಟ್ ಕೀಪಿಂಗ್ ಸ್ಥಾನ ಧೋನಿ ಇರುವವರೆಗೂ ಶಾಶ್ವತವಾಗಿ ಕೀಪಿಂಗ್ ಸ್ಥಾನ ಧೋನಿ ಪಾಲಾಯಿತು. ಪರಿಣಾಮ ಕಳೆದ 15 ವರ್ಷಗಳಿಂದ ದಿನೇಶ್ ಕಾರ್ತಿಕ್ ಆಗಾಗ ತಂಡದೊಳಗೆ ಹಾಗೂ ಹೊರಗೆ ಹೋಗಿಬರುತ್ತಲೇ ಇದ್ದಾರೆ. ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಜೆರ್ಸಿ ತೊಟ್ಟು ಭಾರತ ಪರ ಕಣಕ್ಕಿಳಿದು ಸರಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಇದೀಗ ದಿನೇಶ್ ಕಾರ್ತಿಕ್ ಮತ್ತೊಮ್ಮೆ ತಾವು ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಮಾತುಗಳನ್ನಾಡಿದ್ದಾರೆ.
undefined
ನಾನು ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ. ಈ ಗುರಿ ತಲುಪಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲವನ್ನು ಮಾಡುತ್ತೇನೆ. ನಾನು ಪ್ರತಿದಿನ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಬೇಕೆಂದುಕೊಂಡಿದ್ದೇನೆ. ನಾನು ಕ್ರಿಕೆಟ್ ಅನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಇಂಡಿಯಾ ಟುಡೇ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನನ್ನ ಮುಖ್ಯ ಗುರಿ ಏನಿದ್ದರೂ ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸುವುದಾಗಿದೆ. ಅದರಲ್ಲೂ ಮುಖ್ಯವಾಗಿ ಟಿ20 ಕ್ರಿಕೆಟ್ ಮಾಧರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂದುಕೊಂಡಿದ್ದೇನೆ. ಟಿ20 ಆಡಲು ನನ್ನೊಳಗೆ ಕಿಚ್ಚು ಇನ್ನೂ ಜೋರಾಗಿ ಉರಿಯುತ್ತಿದೆ. ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಫಿನಿಶರ್ ಕೊರತೆ ಎದುರಿಸಿದೆ. ಸೀಮಿತ ಅವಧಿಯಲ್ಲಿ ಭಾರತ ಹಾಗೂ ಫ್ರಾಂಚೈಸಿ ತಂಡಗಳ ಪರ ಉತ್ತಮವಾಗಿ ಆಡುತ್ತಲೇ ಬಂದಿದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
MS Dhoni Advices : ಫಲಿತಾಂಶದ ಮೇಲಲ್ಲ, ಪ್ರಕ್ರಿಯೆ ಮೇಲೆ ಹೆಚ್ಚಿನ ಗಮನ ನೀಡಿ!
ದಿನೇಶ್ ಕಾರ್ತಿಕ್ 2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ದಿನೇಶ್ ಕಾರ್ತಿಕ್ 24 ಎಸೆತಗಳನ್ನು ಎದುರಿಸಿ ಕೇವಲ 6 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದ ದಿನೇಶ್ ಕಾರ್ತಿಕ್ ಆ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಆವೃತ್ತಿಯವರೆಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ದಿನೇಶ್ ಕಾರ್ತಿಕ್ ಅವರನ್ನು ಈ ಬಾರಿ ಕೆಕೆಆರ್ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡಿದೆ. ಹೀಗಾಗಿ ದಿನೇಶ್ ಕಾರ್ತಿಕ್ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಡಿಕೆ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.