
ಮುಂಬೈ(ಮೇ.03): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ 15 ಆಟಗಾರರ ತಂಡ ಪ್ರಕಟಿಸಲಾಗಿದ್ದು, ಕನ್ನಡಿಗ ಕೆ ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದೇಕೆ ಎನ್ನುವ ಪ್ರಶ್ನೆಗೆ ಕೊನೆಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಕರ್ ತೆರೆ ಎಳೆದಿದ್ದಾರೆ.
ಹೌದು, ಐಪಿಎಲ್‌ನಲ್ಲಿ ಕೆ.ಎಲ್.ರಾಹುಲ್ ಆರಂಭಿಕನಾಗಿ ಆಡುತ್ತಿದ್ದಾರೆ. ನಮಗೆ ಬೇಕಿದ್ದದ್ದು ಮಧ್ಯಮ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟರ್. ಹೀಗಾಗಿ ರಾಹುಲ್‌ರನ್ನು ಬಿಟ್ಟು ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದೇವೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ನ ತಂಡದ ಬಗ್ಗೆ ಗುರುವಾರ ಅಗರ್ಕರ್ ಹಾಗೂ ರೋಹಿತ್ ಶರ್ಮಾ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ರಿಂಕು ಸಿಂಗ್‌ರನ್ನು ಕೈಬಿಟ್ಟಿದ್ದು ಕಠಿಣ ನಿರ್ಧಾರ. ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶುಭ್‌ಮನ್ ಗಿಲ್ ಕೂಡಾ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ತಂಡಕ್ಕೆ ನಾಲ್ವರು ಸ್ಪಿನ್ನರ್‌ಗಳು ಬೇಕೆಂದು ರೋಹಿತ್ ಹೇಳಿದಾಗ ಅವರಿಬ್ಬರನ್ನು ಕೈಬಿಡಲಾಯಿತು’ ಎಂದು ಅಗರ್ಕರ್ ತಿಳಿಸಿದ್ದಾರೆ.
IPL 2024 ರಾಜಸ್ಥಾನ ರಾಯಲ್ಸ್ ವಿರುದ್ಧ ಕೊನೆ ಬಾಲ್ ಥ್ರಿಲ್ಲರ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್!
ಹಾರ್ದಿಕ್ ಪಾಂಡ್ಯ ಲಯದಲ್ಲಿದ್ದಾರೆ. ಹೀಗಾಗಿ ಉಪನಾಯಕತ್ವ ಸ್ಥಾನಕ್ಕೆ ಬೇರೆಯವರನ್ನು ಪರಿಗಣಿಸುವ ಅಗತ್ಯ ಬಂದಿಲ್ಲ ಎಂದು ಅಗರ್ಕರ್ ಸ್ಪಷ್ಟಪಡಿಸಿದರು. ಅಲ್ಲದೆ, ವಿರಾಟ್ ಕೊಹ್ಲಿ ಸ್ಟ್ರೈಕ್‌ರೇಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅಗರ್ಕರ್ ತಿಳಿಸಿದರು.
4 ಸ್ಪಿನ್ನರ್ಸ್ ಬೇಕಿತ್ತು: ರೋಹಿತ್ ಶರ್ಮಾ
ವೆಸ್ಟ್‌ಇಂಡೀಸ್‌ನಲ್ಲಿ ನಾವು ತುಂಬಾ ಪಂದ್ಯಗಳನ್ನಾಡಿದ್ದೇವೆ. ಅಲ್ಲಿನ ಪಿಚ್ ಬಗ್ಗೆ ನಮಗೆ ತಿಳಿದಿದೆ. ಹೀಗಾಗಿ ನಾಲ್ವರು ಸ್ಪಿನ್ನರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದರು.
ವಿಶ್ವಕಪ್ ತಂಡದ ಆಯ್ಕೆ ಬಗ್ಗೆ ಐಪಿಎಲ್‌ಗೂ ಮೊದಲೇ ಚರ್ಚೆ ನಡೆಸುತ್ತಿದ್ದೇವೆ. ಶೇ.70-80ರಷ್ಟು ತಂಡ ಮೊದಲೇ ನಿರ್ಧಾರವಾಗಿತ್ತು. ಹೀಗಾಗಿ ಐಪಿಎಲ್ ಪ್ರದರ್ಶನದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಶಿವಂ ದುಬೆ ಐಪಿಎಲ್ ಮತ್ತು ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಾರ್ದಿಕ್ ಜೊತೆ ದುಬೆ ಕೂಡಾ ಬೌಲಿಂಗ್ ಮಾಡುತ್ತಾರೆ ಎಂದು ರೋಹಿತ್ ಹೇಳಿದರು.
ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನತದೃಷ್ಟ ಕ್ರಿಕೆಟಿಗರಿವರು..!
ಭಾರತ ತನ್ನ ಮೊದಲ ಪಂದ್ಯವನ್ನು ಜೂ.5ರಂದು ಐರ್ಲೆಂಡ್ ವಿರುದ್ಧ ಆಡಲಿದ್ದು, ಜೂ.9ರಂದು ನ್ಯೂಯಾರ್ಕ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಜೂ.12ರಂದು ಅಮೆರಿಕ, ಜೂ.15ರಂದು ಕೆನಡಾ ವಿರುದ್ಧ ಸೆಣಸಲಿದೆ.
2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್.
ಮೀಸಲು ಆಟಗಾರರು: ಶುಭ್‌ಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್, ಖಲೀಲ್ ಅಹ್ಮದ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.