ವೈಭವ್‌ ಸೂರ್ಯವಂಶಿನಂತಹ ಒಬ್ಬ ಬ್ಯಾಟರ್‌ನನ್ನಾದರೂ PSL ಸೃಷ್ಟಿಸಿದೆಯೇ? ಪಾಕ್ ದಿಗ್ಗಜ ಕಿಡಿ

Published : Sep 12, 2026, 05:42 PM IST
Vaibhav Sooryavanshi

ಸಾರಾಂಶ

ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ್ದಾರೆ. ಐಪಿಎಲ್‌ನಂತೆ ಯುವ ಬ್ಯಾಟಿಂಗ್ ಪ್ರತಿಭೆಗಳನ್ನು ರೂಪಿಸುವಲ್ಲಿ ಪಿಎಸ್‌ಎಲ್ ವಿಫಲವಾಗಿದೆ ಎಂದು ಅವರು ಪಾಕ್ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ. ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸುವುದರಿಂದ ಮಾತ್ರ ಪಾಕಿಸ್ತಾನ ಕ್ರಿಕೆಟ್ ಮುನ್ನಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರಾಚಿ: ಭಾರತೀಯ ಕ್ರಿಕೆಟ್‌ನ ಹೊಸ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿರುವ ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಿಎಸ್‌ಎಲ್ ಬೆಳವಣಿಗೆಯನ್ನು ಹೋಲಿಕೆ ಮಾಡಿದ ಅಕ್ರಮ್, ಪಾಕ್ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸತತ ಎರಡು ಐಪಿಎಲ್ ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆದಿದ್ದರು. ಯೂಟ್ಯೂಬರ್ ಫುರ್ಖಾನ್ ಭಟ್ಟಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್, ಐಪಿಎಲ್ ಯುವ ಆಟಗಾರರಿಗೆ ನೀಡುವ ಅವಕಾಶ ಮತ್ತು ಬೆಳವಣಿಗೆಯನ್ನು ಪಿಎಸ್‌ಎಲ್‌ಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೈಭವ್ ಸೂರ್ಯವಂಶಿಯನ್ನು ಕೊಂಡಾಡಿದ ಪಾಕ್ ದಿಗ್ಗಜ

‘ಪಿಎಸ್‌ಎಲ್ ಶುರುವಾಗಿ ಸುಮಾರು 10 ವರ್ಷಗಳಾಗಿವೆ. ಈ ಅವಧಿಯಲ್ಲಿ ಪಿಎಸ್‌ಎಲ್ ಮೂಲಕ ಗಮನ ಸೆಳೆದ ಒಬ್ಬನೇ ಒಬ್ಬ ಬ್ಯಾಟರ್‌ನನ್ನಾದರೂ ನಾವು ಗುರುತಿಸಿದ್ದೇವೆಯೇ? ಕೆಲ ಬೌಲರ್‌ಗಳು ಸಿಕ್ಕಿದ್ದು ನಿಜ. ಆದರೆ, ಹೇಳಿಕೊಳ್ಳುವಂತಹ ಒಬ್ಬ ಬ್ಯಾಟಿಂಗ್ ಪ್ರತಿಭೆಯನ್ನಾದರೂ ನಾವು ರೂಪಿಸಿದ್ದೇವೆಯೇ? ಭಾರತದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯಂತಹ ಬ್ಯಾಟಿಂಗ್ ಪ್ರತಿಭೆಯನ್ನು ಬೆಳೆಸುವಾಗ ಮಾತ್ರ ನಮ್ಮ ವ್ಯವಸ್ಥೆಯಲ್ಲೂ ಬದಲಾವಣೆಗಳು ಆಗಬೇಕಿತ್ತು' ಎಂದು ಅಕ್ರಮ್ ಹೇಳಿದರು.

ವಾಸೀಂ ಅಕ್ರಮ್ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ ಬೌಲಿಂಗ್ ಕೋಚ್ ಆಗಿ ಮತ್ತು ಪಿಎಸ್‌ಎಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸದೆ ಯುವ ಪ್ರತಿಭೆಗಳನ್ನು ಹುಡುಕಲು ಸಾಧ್ಯವಿಲ್ಲ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ. ‘ಕರಾಚಿ ಮತ್ತು ಲಾಹೋರ್‌ನಲ್ಲಿ ಕ್ಲಬ್ ಕ್ರಿಕೆಟ್‌ನ ಬೆಳವಣಿಗೆಗಾಗಿ ಪಿಸಿಬಿ ತಲಾ 100 ಮಿಲಿಯನ್ ರೂಪಾಯಿ ಖರ್ಚು ಮಾಡಬೇಕು. ಆಗ ಮಾತ್ರ ಟೆಸ್ಟ್ ಕ್ರಿಕೆಟ್ ಮತ್ತು ವೈಟ್ ಬಾಲ್ ಮಾದರಿಯಲ್ಲಿ ದೇಶವು ಮುನ್ನಡೆಯಲು ಸಾಧ್ಯ’ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.

ವೈಟ್‌ವಾಷ್ ಭೀತಿಯಲ್ಲಿ ಪಾಕಿಸ್ತಾನ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡ, ಕೊನೆಯ ಪಂದ್ಯದಲ್ಲೂ ಸೋಲಿನ ಸುಳಿಯಲ್ಲಿದೆ. ಪಾಕ್ ಬ್ಯಾಟಿಂಗ್ ಪಡೆಯ ಕಳಪೆ ಪ್ರದರ್ಶನದ ಬಗ್ಗೆ ದೊಡ್ಡ ಮಟ್ಟದ ಟೀಕೆಗಳು ಕೇಳಿಬರುತ್ತಿರುವಾಗಲೇ ಅಕ್ರಮ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ದಿಗ್ಗಜನ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆ ಉಡೀಸ್‌ ಮಾಡಲ ಕೇವಲ 3 ಹೆಜ್ಜೆ ದೂರದಲ್ಲಿ ವೈಭವ್ ಸೂರ್ಯವಂಶಿ!
IND vs AFG 1st T20I: ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ...!