
ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ತಂಡಗಳಿವೆ. ಪ್ರತಿ ತಂಡಗಳು ಒಂದೊಂದು ಕಾರಣಕ್ಕೆ ಸ್ಪೆಷಲ್. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿಶ್ವ ಕ್ರಿಕೆಟ್‌ನಲ್ಲಿ ಭಾರತದಷ್ಟೇ ಶಕ್ತಿಶಾಲಿಯಾಗಿದ್ದರೆ, ಶ್ರೀಮಂತಿಕೆಯಲ್ಲಿ ಭಾರತದ ಆಟಗಾರರನ್ನು ಮೀರಿಸುವವರಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳೂ ಇರಬಹುದು. ಈ ಹಿಂದೆ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರರ, ವಿಶ್ವ ಕ್ರಿಕೆಟ್‌ನಲ್ಲಿ ವಿವಿಧ ಕ್ರಿಕೆಟ್ ತಂಡಗಳ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ವಿವಿಧ ದೇಶಗಳ ಕ್ರಿಕೆಟ್ ತಂಡಗಳ ಬಗ್ಗೆ ಯಾರಿಗೂ ಗೊತ್ತಿರದ ಸ್ವಾರಸ್ಯಕರ ಸತ್ಯಗಳನ್ನು ತಮಾಷೆಯಾಗಿ ಹೇಳಿದ್ದಾರೆ.
ನಿರೂಪಕ ಕಪಿಲ್ ಶರ್ಮ, ಸೆಹ್ವಾಗ್ ಅವರಿಗೆ ಅತಿ ಹೆಚ್ಚು ಬೈಗುಳ ಬಳಸುವ ತಂಡ ಯಾವುದು? ಕೂಲ್ ಆಗಿರುವ ತಂಡ ಯಾವುದು? ಹುಡುಗಿಯರಿಗೆ ಜಾಸ್ತಿ ಲೈನ್ ಹೊಡೆಯುವ ತಂಡ ಯಾವುದು? ಅನ್ನೋ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಸೆಹ್ವಾಗ್ ಅಷ್ಟೇ ತಮಾಷೆಯಾಗಿ ಹಾಗೂ ಪ್ರಮಾಣಿಕವಾಗಿ ಉತ್ತರ ನೀಡಿದ್ದಾರೆ.
ಅತಿಹೆಚ್ಚು ಬೈಗುಳ ಬಳಸುವ ತಂಡ: ಯಾವ ತಂಡ ಕ್ರಿಕೆಟ್ ಮೈದಾನದಲ್ಲಿ ಅತಿಹೆಚ್ಚು ಬೈಗಳ ಅಥವಾ ಅಶ್ಲೀಲ ಪದಗಳನ್ನು ಬಳಸುತ್ತದೆ ಎನ್ನುವ ಪ್ರಶ್ನೆಗೆ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನದ ಹೆಸರು ತೆಗೆದುಕೊಂಡರು. ಅವರು ಆಡಿದ ಮಾತುಗಳು ನಮಗೆ ಅರ್ಥವಾಗುವುದರಿಂದ ನಮಗೆ ಹೆಚ್ಚು ನಾಟುತ್ತವೆ ಎಂದು ಹೇಳಿದ್ದಾರೆ.
ಅತ್ಯಂತ ಕೂಲ್ ಅಥವಾ ತಮ್ಮ ಪಾಡಿಗೆ ತಾವಿರುವ ತಂಡ: ಯಾವಾಗಲೂ ತಮ್ಮ ಕೆಲಸವಾಯಿತು, ತಾವಾಯಿತು ಎಂದು ಕೇವಲ ಆಟದ ಮೇಲಷ್ಟೇ ಗಮನಹರಿಸುವ ತಂಡ ಯಾವುದು ಎಂಬ ಪ್ರಶ್ನೆಗೆ, ಸೆಹ್ವಾಗ್ 'ಶ್ರೀಲಂಕಾ'ಎಂದು ಹೇಳಿದ್ದಲ್ಲದೆ, 'ಅರ್ಧಕ್ಕಿಂತ ಹೆಚ್ಚು ಲಂಕಾ ಆಟಗಾರರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ. ಹೀಗಾಗಿ ಅವರು ಎಲ್ಲೇ ಹೋದರೂ ಸುಮ್ಮನೆ ತಾವಾಯಿತು ಎಮ್ಮ ಕೆಲಸವಾಯಿತು ಎಂದಿರುತ್ತಾರೆ' ಎಂದು ಕಾರಣ ನೀಡಿದ್ದಾರೆ.
ಅತಿ ಹೆಚ್ಚು ಪಾರ್ಟಿ ಮಾಡುವ ತಂಡ : ಬಹುಶಃ ವೆಸ್ಟ್ ಇಂಡೀಸ್ ಪ್ಲೇಯರ್‌ಗಳು ಮಾಡುವಷ್ಟು ಪಾರ್ಟಿಯನ್ನು ಜಗತ್ತಿನ ಯಾವುದೇ ತಂಡ ಮಾಡಲು ಸಾಧ್ಯವಿಲ್ಲ" ಎಂದು ಸೆಹ್ವಾಗ್ ಹೇಳಿದ್ದಾರೆ. ಇದೇ ವೇಳೆ ಯುವರಾಜ್ ಸಿಂಗ್ ಅವರ YouWeCan ಕಾರ್ಯಕ್ರಮಕ್ಕೆ ಕ್ರಿಸ್‌ಗೇಲ್ ಬಂದಿದ್ದ ಪ್ರಸಂಗವನ್ನೂ ಸೆಹ್ವಾಗ್ ನೆನಪಿಸಿಕೊಂಡರು. 'ಒಮ್ಮೆ ಯುವರಾಜ್ ಸಿಂಗ್ ಅವರ 'YouWeCan' ಬ್ರ್ಯಾಂಡ್‌ನ ಬಟ್ಟೆ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಕ್ರಿಸ್ ಗೇಲ್, ರಾಂಪ್ ವಾಕ್ ಮುಗಿಸಿದ ತಕ್ಷಣವೇ 'ಪಾರ್ಟಿ ಎಲ್ಲಿ? ಪಾರ್ಟಿ ಎಲ್ಲಿ?' ಎಂದು ಹಿಂದಿಯಲ್ಲೇ ಕೇಳಲು ಶುರುಮಾಡಿದ್ದರು. ಅಂದು ರಾತ್ರಿಯಿಂದ ಬೆಳಗಿನವರೆಗೂ ಪಾರ್ಟಿ ಮಾಡುತ್ತಲೇ ಇದ್ದರು. ಆತನಿಗೆ ಸುಸ್ತೇ ಆಗುವುದಿಲ್ಲ ಎಂದು ಹೇಳಿದ್ದಾರೆ.
ಅತಿ ಹೆಚ್ಚು ಗಲೀಜಾಗಿರುವ/ಸ್ನಾನ ಮಾಡದ ತಂಡ: ಯಾವ ತಂಡಕ್ಕೆ ನೈರ್ಮಲ್ಯ ಹಾಗೂ ಸ್ನಾನದ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂಬ ಪ್ರಶ್ನೆಗೆ, ಸೆಹ್ವಾಗ್ 'ಇಂಗ್ಲೆಂಡ್' ಎಂದು ಉತ್ತರಿಸಿದ್ದಾರೆ. ಅಲ್ಲಿ ವಿಪರೀತ ಚಳಿ ಇರುತ್ತದೆ, ಜೊತೆಗೆ ಅವರು ಸ್ನಾನ ಮಾಡಿದ್ದಾರೋ ಇಲ್ಲವೋ ಎಂಬುದೇ ಮುಖ ನೋಡಿದರೆ ಗೊತ್ತಾಗುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ತಂಡ: ವಿಶ್ವದಲ್ಲೇ ಶ್ರೀಮಂತ ತಂಡ ಎಂದಿದ್ದರೆ ಅದು ಇಂಡಿಯನ್ ಟೀಮ್ ಎಂದು ಸೆಹ್ವಾಗ್ ಹೇಳಿದ್ದಾರೆ.
ಹುಡುಗಿಯರ ಕಡೆಗೆ ಹೆಚ್ಚು ಗಮನಕೊಡುವ ತಂಡ: ಅದೇನಿದ್ದರೂ ಆಸ್ಟ್ರೇಲಿಯಾ ತಂಡ ಮಾತ್ರ. 'ಭಾರತಕ್ಕೆ ಬಂದಾಗ ಆಸ್ಟ್ರೇಲಿಯಾ ಆಟಗಾರರು ಮಾಡಿದ ಇಂತಹ ಗಲಾಟೆಗಳ ಹಲವು ನಿದರ್ಶನಗಳಿವೆ. ಬ್ಯಾನ್ ಆಗಿದ್ದಾರೆ, ಕೆಲವರು ಜೈಲಿಗೂ ಹೋಗಿ ಬಂದಿದ್ದಾರೆ' ಎಂದು ಸೆಹ್ವಾಗ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.