'ಗೌರವ ಸಿಗಬೇಕಾದರೆ ದೊಡ್ಡ ಮೊತ್ತ ಗಳಿಸಬೇಕು': ಮಗ ಆರ್ಯವೀರ್‌ಗೆ ವಿರೇಂದ್ರ ಸೆಹ್ವಾಗ್ ಕಿವಿಮಾತು..!

Published : Nov 19, 2026, 06:58 PM IST
Aaryavir Sehwag

ಸಾರಾಂಶ

ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಮ್ಮ ಮಗ ಆರ್ಯವೀರ್‌ಗೆ ಆಟದ ಪ್ರದರ್ಶನದಿಂದಲೇ ಮನ್ನಣೆ ಸಿಗುತ್ತದೆ ಎಂಬ ಸಂದೇಶ ನೀಡಿದ್ದಾರೆ. ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಅದ್ಭುತ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರು(ನ.19): ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಮ್ಮ ಹಿರಿಯ ಮಗ ಆರ್ಯವೀರ್ ಸೆಹ್ವಾಗ್‌ಗೆ ಮಹತ್ವದ ಸಂದೇಶ ನೀಡಿದ್ದಾರೆ. ಕ್ರಿಕೆಟಿಗನ ಪ್ರತಿಭೆಗೆ ನಿಜವಾದ ಮನ್ನಣೆ ಸಿಗುವುದು ಆತನ ಪ್ರದರ್ಶನದಿಂದಲೇ ಹೊರತು ಬೇರೆ ಉಪನಾಮಗಳಿಂದಲ್ಲ ಎಂದು ವೀರೂ ಹೇಳಿದ್ದಾರೆ. ಇತ್ತೀಚೆಗೆ ಅಂಡರ್-19 ಏಷ್ಯಾಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಆರ್ಯವೀರ್ ಕೂಡ ತನ್ನ ಸರ್‌ನೇಮ್ ಕಾರಣದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಎಂದು ಹೇಳಿದ್ದಾರೆ.

2026ರ ವರ್ಷ ಆರ್ಯವೀರ್ ಪಾಲಿಗೆ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೊದಲ ಬಾರಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದ ಅವರು, ಬಳಿಕ ಅಂಡರ್-19 ಏಷ್ಯಾಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಟೂರ್ನಿಯಲ್ಲಿ ಐದು ಇನಿಂಗ್ಸ್‌ಗಳಿಂದ 90.25ರ ಸರಾಸರಿಯಲ್ಲಿ ಒಟ್ಟು 361 ರನ್ ಗಳಿಸಿದ ಆರ್ಯವೀರ್, ಗರಿಷ್ಠ ರನ್‌ಗಳಿಸಿದ ಆಟಗಾರ ಎನಿಸಿಕೊಂಡರು. ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ ಅವರು, ಟೂರ್ನಿಯ ಆಟಗಾರ (Player of the Tournament) ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

“ಒಬ್ಬ ಆಟಗಾರನ ಆಟವನ್ನು ನೋಡುವವರೆಗೂ ನಾವು ಆತನ ಹೆಸರನ್ನು ಮಾತ್ರ ನೋಡುತ್ತೇವೆ. ಆದರೆ, ಆತ ಅಥವಾ ಆಕೆ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಪ್ರತಿಭೆ ಇದೆ ಎಂದು ಹೇಳುತ್ತೇವೆ. ಆರ್ಯವೀರ್ ಕೂಡ ತನ್ನ ಸರ್‌ನೇಮ್‌ ಕಾರಣದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು,” ಎಂದು ಸೆಹ್ವಾಗ್ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

“ಮುಂದೆಯೂ ಆತ ಇಂತಹ ಟೀಕೆಗಳನ್ನು ಎದುರಿಸಬೇಕಾಗಬಹುದು. ಆದರೆ, ಈಗ ಆತನಲ್ಲಿ ಪ್ರತಿಭೆಯಿದೆ ಮತ್ತು ಉತ್ತಮ ಪ್ರದರ್ಶನ ನೀಡಬಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಆತನಿಗೆ ದೇಶದ ಜನರಿಂದ ಪ್ರೀತಿ ಮಾತ್ರ ಸಿಗಲಿದೆ ಎಂಬುದು ನನ್ನ ಅಭಿಪ್ರಾಯ,” ಎಂದು ಸೆಹ್ವಾಗ್ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಮಗನೊಂದಿಗೆ ವಿಡಿಯೋ ಕಾಲ್

ಒಮಾನ್‌ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ರೋಚಕವಾಗಿ ಒಂದು ವಿಕೆಟ್‌ನ ಗೆಲುವು ದಾಖಲಿಸಿತ್ತು. ಒತ್ತಡದ ಸನ್ನಿವೇಶದಲ್ಲಿ 338 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಪ್ರಶಸ್ತಿ ಗೆದ್ದಿತ್ತು. ಈ ಗೆಲುವಿನ ಬಳಿಕ ಸೆಹ್ವಾಗ್ ತಮ್ಮ ಮಗ ಆರ್ಯವೀರ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಹೃದಯಸ್ಪರ್ಶಿ ಕ್ಷಣವೂ ಗಮನ ಸೆಳೆದಿದೆ.

“ಭಾರತ ಅಂಡರ್-19 ತಂಡದ ಏಷ್ಯಾಕಪ್ ಗೆಲುವಿನಲ್ಲಿ ಆರ್ಯವೀರ್ ಕೊಡುಗೆ ನೀಡಿರುವುದು ನನಗೆ ಸಂತೋಷ ತಂದಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆತ ನೀಡಿದ ಪ್ರದರ್ಶನ ವಿಶೇಷವಾಗಿತ್ತು. ಆತ ಕೇವಲ ರನ್ ಗಳಿಸಲಿಲ್ಲ, ದೊಡ್ಡ ಮೊತ್ತವನ್ನೂ ಕಲೆಹಾಕಿದ. ಈ ಗೆಲುವಿಗಾಗಿ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ,” ಎಂದು ಸೆಹ್ವಾಗ್ ಹೇಳಿದ್ದಾರೆ.

ಗೌರವ ಸಿಗಬೇಕಾದರೆ ದೊಡ್ಡ ಮೊತ್ತ ಗಳಿಸಬೇಕು!

ಮಗನಿಗೆ ಆರಂಭದಿಂದಲೂ ತಾನು ನೀಡುತ್ತಿದ್ದ ಸಲಹೆಯನ್ನೂ ಸೆಹ್ವಾಗ್ ಹಂಚಿಕೊಂಡಿದ್ದಾರೆ. ತಂಡದಲ್ಲಿ ಮತ್ತು ಕ್ರಿಕೆಟ್ ವಲಯದಲ್ಲಿ ಗೌರವ ಪಡೆಯಬೇಕಾದರೆ ದೊಡ್ಡ ಮೊತ್ತಗಳನ್ನು ಗಳಿಸುವುದು ಮುಖ್ಯ ಎಂದು ಆರ್ಯವೀರ್‌ಗೆ ಹೇಳುತ್ತಿದ್ದೆ. ಈ ಟೂರ್ನಿಯಲ್ಲಿ ಆತ ಅದನ್ನು ಸಾಧಿಸಿದ್ದಾನೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. “ಗೌರವ ಪಡೆಯಬೇಕಾದರೆ ದೊಡ್ಡ ಮೊತ್ತಗಳನ್ನು ಗಳಿಸಬೇಕು ಎಂದು ನಾನು ಯಾವಾಗಲೂ ಆತನೊಂದಿಗೆ ಮಾತನಾಡುತ್ತಿದ್ದೆ. ಈ ಟೂರ್ನಿಯಲ್ಲಿ ಆತ ಅದನ್ನೇ ಸಾಧಿಸಿದ್ದಾನೆ,” ಎಂದು ಸೆಹ್ವಾಗ್ ಹೇಳಿದ್ದಾರೆ.

ಅಂಡರ್-19 ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಆರ್ಯವೀರ್ ಗಳಿಸಿದ 160 ರನ್‌ಗಳು ಮತ್ತು ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಸಿಡಿಸಿದ 58 ರನ್‌ಗಳು ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

WTC: ಆಫ್ರಿಕಾ ಆರ್ಭಟಕ್ಕೆ ಬಾಂಗ್ಲಾದೇಶ ಉಡೀಸ್! WTC ಫೈನಲ್ ರೇಸ್‌ನಲ್ಲಿ ಭಾರತ ಕಥೆ ಏನು? ಹೀಗಿದೆ ಲೆಕ್ಕಾಚಾರ!
ಸೆಹ್ವಾಗ್ ಮಗನಾಗಿ ಹುಟ್ಟಿದ್ದೇ ಆರ್ಯವೀರ್‌ಗೆ ದೊಡ್ಡ ನಷ್ಟ, ತನ್ನದೇ ಛಾಪು ಮೂಡಿಸುವುದು ಮುಖ್ಯ! ವೀರೂ ಸ್ಫೋಟಕ ಹೇಳಿಕೆ