ಈ ಸ್ಟಾರ್ ಆಟಗಾರನನ್ನು 2027ರ ಏಕದಿನ ವಿಶ್ವಕಪ್‌ನಿಂದಲೂ ಗಂಭೀರ್ ಕೈಬಿಡ್ತಾರೆ..! ಹೊಸ ಬಾಂಬ್ ಸಿಡಿಸಿದ ಅಶ್ವಿನ್

Published : Nov 19, 2026, 05:23 PM IST
Ravichandran Ashwin on Gautam Gambhir

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್‌ಮನ್ ಗಿಲ್ ವಿರುದ್ಧ ವಾಗ್ದಾಳಿ ನಡೆಸಿದ ಅಶ್ವಿನ್, ಅನುಭವಿ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು(ನ.19): ನ್ಯೂಜಿಲೆಂಡ್ ವಿರುದ್ಧ ಇಂದು ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಡುವ ಹನ್ನೊಂದರ ಬಳಗದಿಂದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟಿರುವ ನಿರ್ಧಾರಕ್ಕೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್‌ಮನ್ ಗಿಲ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ತಂಡದ ಆಯ್ಕೆಯಲ್ಲಿ ಆಟಗಾರರಿಗೆ ಪದೇಪದೇ ಅನ್ಯಾಯವಾಗುತ್ತಿರುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಅಶ್ವಿನ್ ಆರೋಪಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಪಂದ್ಯಕ್ಕೂ ಮುನ್ನ ಸಿರಾಜ್ ಸ್ಥಾನ ಕುರಿತು ಚರ್ಚೆ ನಡೆದಿತ್ತು. ಆದರೆ, ಜಡೇಜಾ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿರುವುದು ಅನಿರೀಕ್ಷಿತ ಎಂದು ಹೇಳಿದ್ದಾರೆ.

ಸಿರಾಜ್ ಬೆನ್ನಿಗೆ ನಿಂತ ಅಶ್ವಿನ್

ಸಿರಾಜ್ ಅವರನ್ನು ತಂಡದಿಂದ ಕೈಬಿಡಲು ಕಳೆದ ಒಂದು ತಿಂಗಳಿನಿಂದಲೇ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಅಶ್ವಿನ್, ಇದು ಆರಂಭವಷ್ಟೇ. 2027ರ ವಿಶ್ವಕಪ್ ತಂಡದಲ್ಲೂ ಸಿರಾಜ್‌ಗೆ ಸ್ಥಾನ ಸಿಗದಿರಬಹುದು ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

“ಸಿರಾಜ್ ಅವರನ್ನು ಕೈಬಿಡಲು ಒಂದು ವಾರದಿಂದ ವಾತಾವರಣ ಏಕೆ ಸೃಷ್ಟಿಸಲಾಗುತ್ತಿದೆ? ಇದು ಒಂದು ವಾರದ ವಿಚಾರವಲ್ಲ, ಕಳೆದ ಒಂದು ತಿಂಗಳಿನಿಂದಲೇ ಈ ರೀತಿ ನಡೆಯುತ್ತಿದೆ. ಮೊದಲು ಅವರನ್ನು ಏಕದಿನ ಪಂದ್ಯಗಳಲ್ಲಿ ಆಡಿಸಲಿಲ್ಲ. ಏಕದಿನ ವಿಶ್ವಕಪ್ ಬರುತ್ತಿದೆ, ನಿಮಗೆ ಸಿರಾಜ್ ಬೇಡವೇ? ಹೇಳಿ, ಇದು ಮುಗಿದ ಅಧ್ಯಾಯವೇ? ಅವರನ್ನು ಹೇಗೆ ಬೇಡ ಎನ್ನಲು ಸಾಧ್ಯ? 2023ರ ವಿಶ್ವಕಪ್‌ನಲ್ಲಿ ಅವರು ಎಷ್ಟು ಅದ್ಭುತವಾಗಿ ಆಡಿದ್ದರು. ಆಶ್ಚರ್ಯಪಡಬೇಡಿ, ಇದು ಕೇವಲ ಟ್ರೇಲರ್ ಅಷ್ಟೇ. ಮುಂದೆಯೂ ಹೀಗೆಯೇ ಆಗಲಿದೆ” ಎಂದು ಅಶ್ವಿನ್ ಹೇಳಿದ್ದಾರೆ.

ಬುಮ್ರಾ ಜೊತೆ ಸಿರಾಜ್ ಕೂಡ ಮೊದಲ ಆಯ್ಕೆಯಾಗಬೇಕು!

ಜಸ್‌ಪ್ರೀತ್ ಬುಮ್ರಾ ಅವರ ಜೊತೆಗೆ ಮೊಹಮ್ಮದ್ ಸಿರಾಜ್ ಸ್ಥಾನವನ್ನೂ ಪ್ರಶ್ನಿಸುವಂತಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರು ವೇಗದ ಬೌಲರ್‌ಗಳು ತಂಡದ ಆಟೋಮ್ಯಾಟಿಕ್ ಆಯ್ಕೆಯಾಗಬೇಕು. ಉಳಿದ ಇಬ್ಬರು ವೇಗದ ಬೌಲರ್‌ಗಳನ್ನು ಅವರ ಸುತ್ತ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. “ಮೊದಲು ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ಹೆಸರುಗಳನ್ನು ಬರೆಯಿರಿ. ನಂತರ ಉಳಿದ ಇಬ್ಬರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿ. ಇಲ್ಲಿ ಸ್ಪರ್ಧೆ ಎಲ್ಲಿದೆ? ನನಗೆ ಅರ್ಥವಾಗುತ್ತಿಲ್ಲ,” ಎಂದು ಅಶ್ವಿನ್ ಹೇಳಿದ್ದಾರೆ.

ಪಂದ್ಯದ ಪಿಚ್‌ನಲ್ಲಿ ಮಧ್ಯಮ ಓವರ್‌ಗಳ ವೇಳೆ ಸಿರಾಜ್ ಅವರಂತಹ ಬೌಲರ್ ಅಗತ್ಯವಿತ್ತು ಎಂದೂ ಅವರು ಹೇಳಿದ್ದಾರೆ. ಕೆಂಪು ಕೂಕಬುರಾ ಚೆಂಡಿನ ತೇವಾಂಶ ಕಡಿಮೆಯಾಗಿ, ಚೆಂಡಿನ ಸೀಮ್ ಮೃದುವಾದ ಬಳಿಕ ವೇಗದ ಬೌಲರ್‌ಗಳಿಗೆ ನೆರವು ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ನಿರಂತರವಾಗಿ ಓಡಿ ಬಂದು ಬೌಲಿಂಗ್ ಮಾಡುವ, ಸಿರಾಜ್ ಅವರಂತಹ ಉತ್ಸಾಹಿ ಬೌಲರ್ ತಂಡಕ್ಕೆ ಬೇಕಾಗಿತ್ತು ಎಂಬುದು ಅಶ್ವಿನ್ ಅಭಿಪ್ರಾಯ.

“ನನ್ನನ್ನು ಹೆಚ್ಚು ಆಶ್ಚರ್ಯಗೊಳಿಸಿದ್ದು ಭಾರತದ ತಂಡದ ಆಯ್ಕೆಯೇ. ಕೆಂಪು ಕೂಕಬುರಾ ಚೆಂಡಿನ ತೇವಾಂಶ ಕಡಿಮೆಯಾಗಿ, ಸೀಮ್ ಮೃದುವಾದ ಬಳಿಕ ಹಳೆಯ ಚೆಂಡಿನಿಂದ ಏನೂ ಪ್ರಯೋಜನವಾಗದ ಮಧ್ಯಮ ಓವರ್‌ಗಳಲ್ಲಿ ಈ ಪಂದ್ಯಕ್ಕೆ ಒಬ್ಬ ಬೌಲರ್ ಅಗತ್ಯವಿತ್ತು. ಮೊಹಮ್ಮದ್ ಸಿರಾಜ್ ಅವರಂತಹ ಮನೋಭಾವ ಹೊಂದಿರುವ ಬೌಲರ್ ಬೇಕಾಗಿತ್ತು. ಅವರು ಐದು ವಿಕೆಟ್ ಪಡೆಯುತ್ತಿದ್ದರು ಎಂದು ನಾನು ಹೇಳುತ್ತಿಲ್ಲ. ಆದರೆ, ನಿರಂತರವಾಗಿ ಓಡಿ ಬಂದು ಬೌಲಿಂಗ್ ಮಾಡುವ, ಮುಕ್ತ ಮನಸ್ಸಿನ ಆಟಗಾರನೊಬ್ಬ ನಿಮ್ಮ ಬೌಲಿಂಗ್ ವಿಭಾಗದಲ್ಲಿ ಇರಬೇಕು. ಸಿರಾಜ್ ಕೆಲವೊಮ್ಮೆ ಹೆಚ್ಚು ರನ್ ನೀಡುತ್ತಾರೆ. ಆದರೆ, ಅವರು ಪಂದ್ಯದಲ್ಲಿ ಏನಾದರೂ ಪರಿಣಾಮ ಉಂಟುಮಾಡುತ್ತಾರೆ. ಕಳೆದ ಹಲವು ವರ್ಷಗಳಿಂದ ಅದನ್ನು ಸಾಬೀತುಪಡಿಸಿದ್ದಾರೆ,” ಎಂದು ಅಶ್ವಿನ್ ಹೇಳಿದ್ದಾರೆ.

ನಾಯಕ ಗಿಲ್ ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು

ತಂಡದ ಆಯ್ಕೆಯ ವಿಚಾರದಲ್ಲಿ ನಾಯಕ ಶುಭ್‌ಮನ್ ಗಿಲ್ ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅಶ್ವಿನ್ ಹೇಳಿದ್ದಾರೆ. ತಂಡದ ಆಡಳಿತ ಮಂಡಳಿಯ ನಿರ್ಧಾರಗಳ ಬಗ್ಗೆ ಚರ್ಚೆಯಾಗುತ್ತಿದ್ದರೂ, ಅಂತಿಮವಾಗಿ ಮೈದಾನಕ್ಕಿಳಿಯುವ ತಂಡದ ಆಯ್ಕೆಯಲ್ಲಿ ನಾಯಕನ ಪಾತ್ರವೂ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಇದನ್ನು ಕೇಳಿದಾಗ ನನಗೆ ಅಚ್ಚರಿಯಾಗುತ್ತದೆ. ತಂಡದ ಆಡಳಿತ ಮಂಡಳಿಯ ಬಗ್ಗೆ ನಾವು ಎಷ್ಟೇ ಮಾತನಾಡಿದರೂ, ನಾಯಕ ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಇಂತಹ ನಿರ್ಧಾರಗಳು ನಾಯಕನ ಕೈಯಲ್ಲಿರುತ್ತವೆ. ನಾಯಕ ಏನು ಬಯಸುತ್ತಾರೋ ಅದೇ ಅಂತಿಮವಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತದೆ. ತಂಡದ ಆಯ್ಕೆಯಲ್ಲಿ ಸಮತೋಲನ ಇರಬೇಕು. ತಂಡದಲ್ಲಿ ಬದಲಾವಣೆಯ ಹಂತ ನಡೆಯುತ್ತಿದೆ ಮತ್ತು ಹೊಸ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಆದರೆ, ಇತರ ಮಾದರಿಗಳಲ್ಲಿ ಅನುಭವವನ್ನು ಕಡೆಗಣಿಸಿದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅನುಭವಕ್ಕೆ ತನ್ನದೇ ಆದ ಮೌಲ್ಯವಿದೆ. ನಿರಂತರವಾಗಿ ಒಂದೇ ರೀತಿಯ ನಿಖರತೆಯಲ್ಲಿ ಬೌಲಿಂಗ್ ಮಾಡುವುದು ಹೇಗೆ ಸಾಧ್ಯ? ಈಗಾಗಲೇ ಆಡಿ ಅನುಭವ ಪಡೆದಿರುವ ಬೌಲರ್‌ನಿಂದ ಅದು ಸಾಧ್ಯವಾಗುತ್ತದೆ. ಜಸ್‌ಪ್ರೀತ್ ಬುಮ್ರಾ ಅವರಿಗೆ ಇಂದು ಖಂಡಿತವಾಗಿಯೂ ಉತ್ತಮ ಬೆಂಬಲದ ಕೊರತೆ ಕಾಣಿಸಿತು,” ಎಂದು ಅಶ್ವಿನ್ ಹೇಳಿದ್ದಾರೆ.

ಹಿಂದಿನ ವಿದೇಶಿ ಸರಣಿಯಲ್ಲಿ ರವೀಂದ್ರ ಜಡೇಜಾ 500 ರನ್ ಗಳಿಸಿದ್ದರು. ಆದರೆ, ಈಗ ಅವರು ತಂಡದ ಹೊರಗೆ ಕುಳಿತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಇಲ್ಲದ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-2ರಿಂದ ಸಮಬಲಗೊಳಿಸಲು ನಿಮಗೆ ನೆರವಾಗಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.

ಆಡಲು ಅವಕಾಶ ನೀಡಿ, ವಿಫಲರಾದರೆ ಕೈಬಿಡಿ!

ಸಿರಾಜ್ ಅವರ ವೇಗ ಕಡಿಮೆಯಾಗಿರಬಹುದು. ಜಡೇಜಾ ಅವರ ಪ್ರದರ್ಶನದ ಬಗ್ಗೆ ಕೆಲವರಿಗೆ ಭಿನ್ನ ಅಭಿಪ್ರಾಯಗಳಿರಬಹುದು. ಆದರೆ, ಭಾರತೀಯ ಕ್ರಿಕೆಟ್‌ಗೆ ಈ ಇಬ್ಬರೂ ಮಹತ್ವದ ಕೊಡುಗೆ ನೀಡಿದ್ದಾರೆ. ಹೀಗಾಗಿ, ಅವರನ್ನು ಬೆಂಚ್‌ನಲ್ಲಿ ಕೂರಿಸುವ ಬದಲು ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ನೀಡಿ, ಅವರು ವಿಫಲರಾದರೆ ಮಾತ್ರ ಕೈಬಿಡಬೇಕು ಎಂದು ಅಶ್ವಿನ್ ಆಗ್ರಹಿಸಿದ್ದಾರೆ.

“ಬಹುಶಃ ಸಿರಾಜ್ ಅವರ ವೇಗ ಕಡಿಮೆಯಾಗಿರಬಹುದು. ರವೀಂದ್ರ ಜಡೇಜಾ ಅವರ ಬಗ್ಗೆ ನಿಮಗೆ ನಿಮ್ಮದೇ ಅಭಿಪ್ರಾಯ ಇರಬಹುದು. ಆದರೆ, ಈ ಇಬ್ಬರೂ ಭಾರತೀಯ ಕ್ರಿಕೆಟ್‌ಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರು ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಬೇಕು. ವಿಫಲರಾದ ಬಳಿಕವಷ್ಟೇ ಅವರನ್ನು ಕೈಬಿಡಬೇಕು. ತಮ್ಮದೇ ಪ್ರದರ್ಶನದ ಆಧಾರದ ಮೇಲೆ ಸೋಲನ್ನು ಎದುರಿಸುವ ಅವಕಾಶ ಅವರಿಗೆ ಸಿಗಬೇಕು. ಅವರು ತಂಡಕ್ಕೆ ನೀಡಿರುವ ಕೊಡುಗೆ ತುಂಬಾ ದೊಡ್ಡದು. ಬೆಂಚ್‌ನಲ್ಲಿ ಕೂರಿಸಿ ಕೈಬಿಡುವ ಬದಲು ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ಅವಕಾಶ ನೀಡಬೇಕು,” ಎಂದು ಅಶ್ವಿನ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುವರಾಜ್ ಸಿಂಗ್ ಅಪ್ಪನ ಬಳಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಅನಯಾ ಬಂಗಾರ್..! ವಿಡಿಯೋ ವೈರಲ್
ಸದಾ ಬೆಂಕಿ ಉಂಡೆ ಉಗುಳುತ್ತಿದ್ದ ರಾಯಡು ಬಾಯಲ್ಲಿ ಮುತ್ತಿನಂಥ ಮಾತು, ಈಗ RCB ಹೊಗಳೋದು ಚಂದ!