Kohli Vs Rohit Sharma: ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಕೊಹ್ಲಿ-ರೋಹಿತ್‌ ಸಂಧಾನ ?

By Suvarna NewsFirst Published Dec 15, 2021, 1:45 PM IST
Highlights

* ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮನಸ್ತಾಪ 

* ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಇಬ್ಬರು ಆಟಗಾರರ ನಡುವೆ ಮಾತುಕತೆ

* ಡಿಸೆಂಬರ್ 26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭ

ನವದೆಹಲಿ(ಡಿ.15): ಭಾರತ ಏಕದಿನ ತಂಡದ ನಾಯಕತ್ವ ವಿಚಾರದಲ್ಲಿ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ನಡುವೆ ಉಂಟಾಗಿರುವ ಮನಸ್ತಾಪದ ಬಗ್ಗೆ ಬಿಸಿಸಿಐ (BCCI) ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ. ‘ತಂಡದಲ್ಲಿ ಈಗ ನಡೆಯುತ್ತಿರುವ ಎಲ್ಲವೂ ಸರಿಯಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯ (India Tour of South Africa) ಬಳಿಕ ನಾವು ಇಬ್ಬರೂ ನಾಯಕರ ಜೊತೆ ಕುಳಿತು ಮಾತುಕತೆ ನಡೆಸುತ್ತೇವೆ. ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸುತ್ತೇವೆ’ ಎಂದಿದ್ದಾರೆ ಎಂದು ವರದಿ ಹೇಳಲಾಗಿದೆ.

ನಾಯಕತ್ವ ವಿಚಾರದಲ್ಲಿ ಮನಸ್ತಾಪದ ಬಗ್ಗೆ ವಿರಾಟ್ ಕೊಹ್ಲಿ ಈವರೆಗೆ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಏಕದಿನ ಸರಣಿಯಿಂದ ಹೊರಗುಳಿಯಲು ಕೊಹ್ಲಿ ನಿರ್ಧರಿಸಿದ ಬಗ್ಗೆ ಬಿಸಿಸಿಐ ಅಧಿಕಾರಿಗಳು ಬೇಸರಗೊಂಡಿದ್ದು, ನಾಯಕತ್ವದ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಇದಕ್ಕೆ ಕಾರಣವಿರಬಹುದು ಎಂದಿದ್ದಾರೆ.

ಯುಎಇನಲ್ಲಿ ಇತ್ತೀಚೆಗಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮುಕ್ತಾಯದ ವಿರಾಟ್ ಕೊಹ್ಲಿ ಟೀಂ ಇಂಡಿಯಾ (Team India) ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ತಾವು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಮುಂದುವರೆಯವುದಾಗಿ ಈ ಮೊದಲೇ ಘೋಷಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ವೇಳೆ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಏಕದಿನ ಕ್ರಿಕೆಟ್‌ಗೂ ರೋಹಿತ್‌ ಶರ್ಮಾ ಅವರಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಅವರೇ ಮುಂದುವರೆಯಲಿದ್ದಾರೆ. 

ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ (Test Cricket Series) ಮೊದಲ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಗಾಯದ ನೆಪದಿಂದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಪ್ರಿಯಾಂಕ್ ಪಾಂಚಲ್‌ ಹರಿಣಗಳ ನಾಡಿನ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿಯು ಆರಂಭವಾಗಲಿದ್ದು, ತಮ್ಮ ಮಗಳು ವಾಮಿಕ ಬರ್ತ್‌ ಡೇ ಕಾರಣ ನೀಡಿ ವಿರಾಟ್ ಏಕದಿನ ಸರಣಿಯಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Virat Kohli Rohit Sharma Rift: ಕೊಹ್ಲಿ - ರೋಹಿತ್ ಮನಸ್ತಾಪ ಸ್ಪೋಟ..?

ಈ ಇಬ್ಬರು ಆಟಗಾರರ ವೈಮನಸ್ಸಿನ ಕುರಿತಂತೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ರೋಹಿತ್‌ ಶರ್ಮಾ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಸರಣಿಯಿಂದ ಹೊರಗುಳಿಯುವುದು ತಪ್ಪಲ್ಲ. ಆದರೆ ಟೈಮಿಂಗ್‌ ಸರಿಯಿರಬೇಕು. ಈ ಬೆಳವಣಿಗೆ ಇಬ್ಬರ ನಡುವೆ ಮನಸ್ತಾಪವಿದೆ ಎನ್ನುವ ಸುದ್ದಿಗೆ ಪುಷ್ಠಿ ನೀಡುತ್ತದೆ ಎಂದಿದ್ದಾರೆ.

ಇಂದು ಮಧ್ಯಾಹ್ನ ವಿರಾಟ್ ಕೊಹ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದು, ಈ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಟೀಂ ಇಂಡಿಯಾ ಸೀಮಿತ ಓವರ್‌ಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ತಂಡ ಕೂಡಿಕೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

click me!