
ಲಖನೌ(ಅ.30): ಆಧುನಿಕ ಕ್ರಿಕೆಟ್‌ನ ಇಬ್ಬರು ಸೂಪರ್ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸದ್ಯ ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರಾಗಿ ಗುರುತಿಸಿಕೊಂಡಿದ್ದು, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮೀಸ್‌ನತ್ತ ದಾಪುಗಾಲಿಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇಲ್ಲಿನ ಏಕಾನ ಮೈದಾನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 100 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೆ ಈಗಾಗಲೇ ಒಂದು ಕಾಲು ಇಟ್ಟಿದೆ. ಇಂಗ್ಲೆಂಡ್ ಎದುರು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾರನ್ನು ಬಿಗಿದಪ್ಪಿ ಸಂಭ್ರಮಿಸಿದ್ದು, ಆ ಕ್ಷಣಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದರು. ಇದೀಗ ಇಂಗ್ಲೆಂಡ್ ಎದುರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೋಹಿತ್ ಶರ್ಮಾ ಅವರನ್ನು ಕೊಹ್ಲಿ ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಈ ಕ್ಷಣಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವಕಪ್‌ನ ಅಗ್ರ 7 ತಂಡ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶ; ಇಂಗ್ಲೆಂಡ್ ತಂಡದ ಪಾಡೇನು?
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತ ಭಾರತ, ಇಂಗ್ಲೆಂಡ್ ಎದುರು ಆರಂಭಿಕ ಆಘಾತಕ್ಕೂ ಒಳಗಾಯಿತು. ಸಾಧಾರಣ ಮೊತ್ತ ದಾಖಲಿಸಿ, ಬಳಿಕ ಇಬ್ಬನಿ ಬೀಳುತ್ತಿದ್ದ ಹೊರತಾಗಿಯೂ ಆ ಮೊತ್ತವನ್ನು ರಕ್ಷಿಸಿಕೊಳ್ಳಬೇಕಾದ ಒತ್ತಡದೊಂದಿಗೆ ಬೌಲಿಂಗ್‌ಗಿಳಿಯಿತು. ತಮ್ಮ 2ನೇ ಓವರಲ್ಲಿ ಸಿರಾಜ್ ಗಾಯಗೊಂಡಂತೆ ಕಂಡು ಬಂದಿದ್ದು ತಂಡದ ಹೃದಯಬಡಿತ ಹೆಚ್ಚಿಸಿತು. ಆದರೆ ಯಾವುದೇ ಸವಾಲು ಭಾರತವನ್ನು ಗೆಲುವಿನಿಂದ ದೂರ ಉಳಿಸಲಿಲ್ಲ.
ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್‌ರ ಹೋರಾಟ ತಂಡ 9 ವಿಕೆಟ್‌ಗೆ 229 ರನ್ ತಲುಪಲು ನೆರವಾಯಿತು. ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೂ, ಇಂಗ್ಲೆಂಡ್ ಬ್ಯಾಟರ್‌ಗಳು ನೆಲಕಚ್ಚಿದರು.
ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮದ್ ಶಮಿ, ಮೊದಲ 10 ಓವರಲ್ಲೇ ಪಂದ್ಯ ಭಾರತ ಪರ ವಾಲುವಂತೆ ಮಾಡಿದರು. 4.5 ಓವರಲ್ಲಿ 30 ರನ್ ಗಳಿಸಿದ್ದ ಇಂಗ್ಲೆಂಡ್ ಆ ನಂತರ 26 ಎಸೆತಗಳಲ್ಲಿ 9 ರನ್‌ಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಮಲಾನ್ ಹಾಗೂ ರೂಟ್‌ರನ್ನು ಸತತ 2 ಎಸೆತಗಳಲ್ಲಿ ಬುಮ್ರಾ ಔಟ್ ಮಾಡಿದರೆ, ಸ್ಟೋಕ್ಸ್ ಹಾಗೂ ಬೇರ್‌ಸ್ಟೋವ್‌ಗೆ ಶಮಿ ಪೆವಿಲಿಯನ್ ದಾರಿ ತೋರಿಸಿದರು. ಮೊಹಮ್ಮದ್ ಶಮಿ 4 ವಿಕೆಟ್ ಕಬಳಿಸಿ ಬೀಗಿದರು.
ICC World Cup 2023: ಸೆಮೀಸ್ ರೇಸಲ್ಲಿ ಉಳಿಯಲು ಶ್ರೀಲಂಕಾ-ಆಫ್ಘನ್ ಕಾದಾಟ
ಕುಲ್ದೀಪ್ ಯಾದವ್ ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟರ್‌ಗಳಾದ ಜೋಸ್ ಬಟ್ಲರ್ ಹಾಗೂ ಲಿಯಾಮ್ ಲಿವಿಂಗ್‌ಸ್ಟನ್‌ರನ್ನು ಪೆವಿಲಿಯನ್‌ಗಟ್ಟಿ, ಇಂಗ್ಲೆಂಡ್ ಪುಟಿದೇಳುವ ಕನಸನ್ನೂ ಕಾಣದಂತೆ ಮಾಡಿದರು. ಬಾಲಂಗೋಚಿಗಳನ್ನು ಉರುಳಿಸಲು ಭಾರತಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. 34.5 ಓವರಲ್ಲಿ ಇಂಗ್ಲೆಂಡ್ 129 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್‌ನ 7 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಿದರೂ, 20 ರನ್ ದಾಟಿದ್ದು ಲಿವಿಂಗ್‌ಸ್ಟೋನ್(27) ಒಬ್ಬರೇ.
ಟರ್ನಿಂಗ್ ಪಾಯಿಂಟ್
ಸಣ್ಣ ಗುರಿಯನ್ನು ರಕ್ಷಿಸಿಕೊಳ್ಳಲು ಇಳಿದ ಭಾರತ ಮೊದಲ 10 ಓವರಲ್ಲೇ ಇಂಗ್ಲೆಂಡ್‌ನ 4 ವಿಕೆಟ್ ಉರುಳಿಸಿತು. ಇದಾದ ಬಳಿಕವೂ ತೀವ್ರತೆ ಕಡಿಮೆ ಮಾಡದ ಭಾರತೀಯ ಬೌಲರ್‌ಗಳು ಇಂಗ್ಲೆಂಡ್‌ಗೆ ಪುಟಿದೇಳಲು ಬಿಡಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.