
ದುಬೈ(ಅ.30): 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ತಂಡಗಳ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದ್ದು, ಈ ಬಾರಿ ಏಕದಿನ ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಗ್ರ-7 ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂದು ತಿಳಿಸಿದೆ.
ಟೂರ್ನಿಗೆ ಆತಿಥ್ಯ ವಹಿಸಲಿರುವ ಕಾರಣ ಪಾಕಿಸ್ತಾನ ನೇರವಾಗಿ ಪ್ರವೇಶ ಪಡೆಯಲಿದೆ. ಉಳಿದಂತೆ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಲೀಗ್ ಹಂತದ ಮುಕ್ತಾಯಕ್ಕೆ ಅಗ್ರಸ್ಥಾನ ಪಡೆಯುವ ಇತರ 7 ತಂಡಗಳು ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಪಡೆಯಲಿವೆ. ಪಾಕಿಸ್ತಾನ ಅಗ್ರ-7ರಲ್ಲಿ ಸ್ಥಾನ ಪಡೆದರೆ ಆಗ, 8ನೇ ಸ್ಥಾನ ಗಳಿಸುವ ತಂಡಕ್ಕೂ ಅರ್ಹತೆ ಸಿಗಲಿದೆ. ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ವೆಸ್ಟ್‌ಇಂಡೀಸ್, ಐರ್ಲೆಂಡ್, ಜಿಂಬಾಬ್ವೆ 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡುವುದಿಲ್ಲ ಎನ್ನುವುದು ಖಚಿತವಾಗಿದೆ.
ಟೂರ್ನಿಯ ಅರ್ಹತಾ ಮಾದರಿ ಬಗ್ಗೆ 2021ರಲ್ಲೇ ನಿರ್ಧಾರವಾಗಿದ್ದರೂ ಹಲವು ತಂಡಗಳಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೆ ನೆದರ್‌ಲೆಂಡ್ಸ್ ವಿರುದ್ಧ ಶನಿವಾರ ಬಾಂಗ್ಲಾದೇಶ ಸೋತ ಬಳಿಕ ಬಾಂಗ್ಲಾ ನಾಯಕ ಶಕೀಬ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ತಾವು ವಿಶ್ವಕಪ್ ಸೆಮಿಫೈನಲ್‌ಗೆ ಅಲ್ಲದಿದ್ದರೂ, ಚಾಂಪಿಯನ್ಸ್ ಟ್ರೋಫಿಗಾಗಿ ಅಗ್ರ-8ರಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಹೀಗಾಗಿ ಈ ವಿಷಯದ ಬಗ್ಗೆ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಐಸಿಸಿ ಸ್ಪಷ್ಟನೆ ನೀಡಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹತ್ತು ತಂಡಗಳು ಪಾಲ್ಗೊಂಡಿವೆ. ಈ ಪೈಕಿ ಅಕ್ಟೋಬರ್ 29ರ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ನೆದರ್‌ಲೆಂಡ್ಸ್ ತಂಡಗಳು ಕ್ರಮವಾಗಿ ಅಗ್ರ 8 ತಂಡಗಳಾಗಿ ಸ್ಥಾನ ಪಡೆದಿವೆ. ಇನ್ನು ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ಕ್ರಮವಾಗಿ 9 & 10ನೇ ಸ್ಥಾನ ಪಡೆದಿವೆ.
ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಏನು ಮಾಡಬೇಕು?:
ಇಂಗ್ಲೆಂಡ್ ತಂಡವು ಇನ್ನುಳಿದ ಮೂರು ಪಂದ್ಯಗಳ ಪೈಕಿ ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು(ಆಸ್ಟ್ರೇಲಿಯಾ, ನೆದರ್‌ಲೆಂಡ್ಸ್ ಹಾಗೂ ಪಾಕ್ ವಿರುದ್ದ ಇಂಗ್ಲೆಂಡ್ ಆಡಲಿದೆ).
ಇನ್ನು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ನೆದರ್‌ಲೆಂಡ್ಸ್ ತಂಡವು ತನ್ನ ಪಾಲಿನ ಮೂರೂ ಪಂದ್ಯಗಳನ್ನು ಸೋಲಬೇಕು(ಆಫ್ಘಾನಿಸ್ತಾನ, ಇಂಗ್ಲೆಂಡ್ & ಭಾರತ ವಿರುದ್ದ ನೆದರ್‌ಲೆಂಡ್ಸ್ ಆಡಲಿದೆ)
ಇನ್ನು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡವು ಇನ್ನುಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯಗಳನ್ನು ಸೋಲಬೇಕು(ಬಾಂಗ್ಲಾದೇಶ ತಂಡವು ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಆಡಲಿದೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.