ಇಂದಿನಿಂದ ಟೀಂ ಇಂಡಿಯಾ ಏಷ್ಯಾಕಪ್‌ಗೆ ಬೆಂಗಳೂರಿನಲ್ಲಿ ಶಿಬಿರ ಶುರು..!

By Naveen Kodase  |  First Published Aug 23, 2023, 12:34 PM IST

ಏಷ್ಯಾಕಪ್ ಟೂರ್ನಿಗೆ ಭರ್ಜರಿ ಅಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದೆ
ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿ


ಬೆಂಗಳೂರು(ಆ.23): ಆಗಸ್ಟ್‌ 30ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್‌ಗಾಗಿ ಬುಧವಾರದಿಂದ ಭಾರತ ತಂಡಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಶಿಬಿರ ಆರಂಭಗೊಳ್ಳಲಿದೆ. ವಿಂಡೀಸ್ ವಿರುದ್ಧದ ಏಕದಿನ ಸರಣಿ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಮುಖರು ಬುಧವಾರವೇ ಎನ್‌ಸಿಎಗೆ ಆಗಮಿಸಲಿದ್ದಾರೆ. 

ಉಳಿದಂತೆ ಸದ್ಯ ಐರ್ಲೆಂಡ್‌ ವಿರುದ್ಧ ಟಿ20 ಸರಣಿ ಆಡುತ್ತಿರುವ ಜಸ್‌ಪ್ರೀತ್‌ ಬುಮ್ರಾ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ ಸೇರಿದಂತೆ ಹಲವರು ಸರಣಿ ಮುಗಿದ ಬಳಿಕ ಶಿಬಿರಕ್ಕೆ ಹಾಜರಾಗಲಿದ್ದಾರೆ. ಆಗಸ್ಟ್ 29ರ ವರೆಗೆ ಶಿಬಿರ ನಡೆಯಲಿದ್ದು, ಬಳಿಕ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ.

Tap to resize

Latest Videos

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್‌ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ(ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌(ಮೀಸಲು ಆಟಗಾರ).

ರಾಹುಲ್‌ಗೆ ಮತ್ತೆ ಗಾಯ!

ಐಪಿಎಲ್‌ ವೇಳೆ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಈಗಷ್ಟೇ ಸಂಪೂರ್ಣ ಚೇತರಿಸಿಕೊಳ್ಳುತ್ತಿರುವ ರಾಹುಲ್‌ ಹೊಸದಾಗಿ ಸಣ್ಣ ಪ್ರಮಾಣದ ಗಾಯಕ್ಕೆ ತುತ್ತಾಗಿರುವುದಾಗಿ ಅಗರ್ಕರ್‌ ಮಾಹಿತಿ ನೀಡಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್‌ರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಸದ್ಯ ರಾಹುಲ್‌ ತಂಡದಲ್ಲಿದ್ದರೂ ಟೂರ್ನಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

Ind vs Ire 3rd T20I: ಐರ್ಲೆಂಡ್ ಎದುರು ಟೀಂ ಇಂಡಿಯಾಗೆ ಕ್ಲೀನ್‌ ಸ್ವೀಪ್‌ ಗುರಿ..!

ಬೆಂಗ್ಳೂರಿಗೆ 7ನೇ ಸೋಲು!

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕಳೆದ ಬಾರಿ ರನ್ನರ್‌-ಅಪ್ ಬೆಂಗಳೂರು ಬ್ಲಾಸ್ಟರ್ಸ್‌ ಸತತ 7ನೇ ಸೋಲನುಭವಿಸಿದ್ದು, ಸೆಮಿಫೈನಲ್‌ ಆಸೆಯನ್ನು ಬಹುತೇಕ ಭಗ್ನಗೊಳಿಸಿದೆ. ತಂಡ ಇನ್ನುಳಿದ 3 ಪಂದ್ಯ ಗೆದ್ದರೂ ಸೆಮೀಸ್‌ಗೇರಬೇಕಿದ್ದರೆ ಪವಾಡ ಘಟಿಸಬೇಕು. ಮಂಗಳವಾರ ಬೆಂಗ್ಳೂರು ವಿರುದ್ಧ ಹುಬ್ಬಳ್ಳಿ 6 ವಿಕೆಟ್‌ ಜಯಗಳಿತು. ತಂಡಕ್ಕಿದು 6ನೇ ಗೆಲುವು.

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು, ಮಯಾಂಕ್‌ ಅಗರ್‌ವಾಲ್‌(68), ನಿಶ್ವಲ್‌(54) ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 188 ರನ್‌ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಹುಬ್ಬಳ್ಳಿ 18.3 ಓವರ್‌ಗಳಲ್ಲೇ ಗೆಲುವು ಸಾಧಿಸಿತು. ಮೊಹಮದ್‌ ತಾಹ 66, ಕೃಷ್ಣನ್‌ ಶ್ರೀಜಿತ್‌ 45 ರನ್‌ ಗಳಿಸಿದರು.

'ರನೌಟ್‌ ಆಗಿಲ್ಲ..ಇನ್ನೂ ಬದುಕಿದ್ದೇನೆ..' ತನ್ನ ಸಾವಿನ ಸುದ್ದಿಯನ್ನು ತಾನೇ ಓದಿ ರಿಪ್ಲೈ ಮಾಡಿದ ಹೀಥ್ ಸ್ಟ್ರೀಕ್‌!

ಮಂಗಳೂರಿಗೆ 4ನೇ ಸೋಲು: ಮತ್ತೊಂದೆಡೆ ಮಂಗಳೂರು ಡ್ರ್ಯಾಗನ್ಸ್‌ ತಂಡ ಶಿವಮೊಗ್ಗ ವಿರುದ್ಧ 5 ವಿಕೆಟ್‌ ಸೋಲನುಭವಿಸಿ, ಟೂರ್ನಿಯಲ್ಲಿ 4ನೇ ಸೋಲು ಕಂಡಿತು. ಮೊದಲು ಬ್ಯಾಟ್‌ ಮಾಡಿದ ಮಂಗಳೂರು 8 ವಿಕೆಟ್‌ಗೆ 162 ರನ್‌ ಗಳಿಸಿದರೆ, ಶಿವಮೊಗ್ಗ 19.4 ಓವರ್‌ಗಳಲ್ಲಿ ಗುರಿ ಬೆನ್ನತ್ತಿತು. ಹ್ಯಾಟ್ರಿಕ್‌ ಸೋಲು ಕಂಡಿದ್ದ ಶಿವಮೊಗ್ಗ ಕೊನೆಗೂ ಗೆಲುವಿನ ಹಳಿಗೆ ಮರಳಿತು.

ವಿಶ್ವಕಪ್‌ ವೇಳಾಪಟ್ಟಿ ಮತ್ತೆ ಬದಲಿಸಲು ಬಿಸಿಸಿಐ ನಕಾರ

ಹೈದರಾಬಾದ್‌: ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕೆಂಬ ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ(ಎಚ್‌ಸಿಎ)ಯ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದ್ದು, ವೇಳಾಪಟ್ಟಿ ಹಿಂದಿನಂತೆಯೇ ಇರಲಿದೆ ಎಂದು ತಿಳಿದುಬಂದಿದೆ. ಭದ್ರತಾ ಸಮಸ್ಯೆ ಕಾರಣದಿಂದಾಗಿ ಅ.9 ಹಾಗೂ ಅ.10ರಂದು ಸತತವಾಗಿ 2 ದಿನ ಪಂದ್ಯ ಆಯೋಜಿಸುವುದು ಕಷ್ಟ ಎಂದು ಬಿಸಿಸಿಐಗೆ ತಿಳಿಸಿದ್ದ ಎಚ್‌ಸಿಎ, ವೇಳಾಪಟ್ಟಿ ಬದಲಾಯಿಸುವಂತೆ ಕೋರಿತ್ತು. ಆದರೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ವೇಳಾಪಟ್ಟಿಯಲ್ಲಿ ಮತ್ತೊಮ್ಮೆ ಬದಲಾವಣೆ ಮಾಡುವುದು ಸವಾಲಾಗಿ ಪರಿಣಮಿಸುವ ಹಿನ್ನೆಲೆಯಲ್ಲಿ ಎಚ್‌ಸಿಎ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಹೈದರಾಬಾದ್‌ ಕ್ರೀಡಾಂಗಣದಲ್ಲಿ ಅ.9ಕ್ಕೆ ನ್ಯೂಜಿಲೆಂಡ್‌ ಹಾಗೂ ನೆದರ್‌ಲೆಂಡ್ಸ್‌ ಹಾಗೂ ಅ.10ಕ್ಕೆ ಪಾಕಿಸ್ತಾನ-ಶ್ರೀಲಂಕಾ ಪಂದ್ಯ ನಿಗದಿಯಾಗಿದೆ.

click me!