
ಸೇಂಟ್ ಲೂಸಿಯಾ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆರಂಭಿಕನಾಗಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ದಯನೀಯ ಬ್ಯಾಟಿಂಗ್ ವೈಪಲ್ಯ ಮತ್ತೆ ಮುಂದುವರೆದಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಸೂಪರ್ 8 ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಇದೀಗ ಮತ್ತೊಮ್ಮೆ ಶೂನ್ಯ ಸಂಪಾದನೆ ಮಾಡಿ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾ ಎದುರು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಜೋಶ್ ಹೇಜಲ್‌ವುಡ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ವಿರಾಟ್ ಕೊಹ್ಲಿ, ಟಿಮ್ ಡೇವಿಡ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 5 ಎಸೆತಗಳನ್ನು ಎದುರಿಸಿ ಕೊಹ್ಲಿ ಗೋಲ್ಡನ್ ಡಕ್ ಆದರು. ಈ ಮೂಲಕ ಈ ವರ್ಷದಲ್ಲಿ ಹಾಗೂ ಇದೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಗೋಲ್ಡನ್ ಡಕ್ ಆದರು. ಈ ಮೊದಲು ಆತಿಥೇಯ ಯುಎಸ್‌ಎ ತಂಡದ ಎದುರಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿದ್ದರು.
ಬಾಂಗ್ಲಾ ಎದುರು ಗೆದ್ದು ಸೆಮೀಸ್‌ಗೇರಿದ ಆಫ್ಘಾನ್..! ಆಸೀಸ್ ಸೆಮೀಸ್ ಕನಸು ನುಚ್ಚುನೂರು
ನೆಹ್ರಾ ಸಾಲಿಗೆ ಸೇರಿದ ಕೊಹ್ಲಿ: ಹೌದು, ಈ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಬಾರಿಗೆ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ದಾಖಲೆ ಸರಿಗಟ್ಟಿದ್ದಾರೆ. ಈ ಮೊದಲು ಆಶಿಶ್ ನೆಹ್ರಾ ಕೂಡಾ 2010ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಗೋಲ್ಡನ್ ಡಕ್ ಆಗಿದ್ದರು.
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ 24 ರನ್ ಜಯ ಸಾಧಿಸಿ, ಸೂಪರ್ 8 ಹಂತದ ಗ್ರೂಪ್ 1 ನಿಂದ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.
ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಜೂನ್ 27ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರೇ ಸೆಮೀಸ್‌ನಲ್ಲಿ ಮುಗ್ಗರಿಸಿದ್ದ ಭಾರತ ತಂಡಕ್ಕೆ ಇದೀಗ ಸೇಡು ತೀರಿಸಿಕೊಳ್ಳಲು ಒಳ್ಳೆಯ ಅವಕಾಶ ಕೂಡಿಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.