
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 55 ರನ್‌ಗಳಿಂದ ಹೀನಾಯವಾಗಿ ಸೋತ ಹೊರತಾಗಿಯೂ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್-1 ಪ್ರವೇಶಿಸಿದೆ. 256 ರನ್‌ಗಳ ಬೃಹತ್ ಗುರಿ ಪಡೆದಿದ್ದ ಆರ್‌ಸಿಬಿಯು, ಅಗ್ರಸ್ಥಾನದಲ್ಲೇ ಉಳಿಯಲು 166 ರನ್ ಗಳಿಸಬೇಕಿತ್ತು. ತಂಡ 4 ವಿಕೆಟ್‌ಗೆ 200 ರನ್ ಸಿಡಿಸಿ ನಂ.1 ಸ್ಥಾನ ಉಳಿಸಿಕೊಂಡಿತು. ಗುಜರಾತ್ ಟೈಟಾನ್ಸ್ 2ನೇ, ಸನ್‌ರೈಸರ್ಸ್ 3ನೇ ಸ್ಥಾನ ಪಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್ ಸ್ಫೋಟಕ ಆಟವಾಡಿತು. ಅಭಿಷೇಕ್ ಶರ್ಮಾ 22 ಎಸೆತಕ್ಕೆ 56, ಟ್ರ್ಯಾವಿಸ್ ಹೆಡ್ 26, ಹೆನ್ರಿಚ್ ಕ್ಲಾಸೆನ್ 24 ಎಸೆತಕ್ಕೆ 51, ಇಶಾನ್ ಕಿಶನ್ 46 ಎಸೆತಕ್ಕೆ 79 ರನ್ ಸಿಡಿಸಿದರು. ನಿತೀಶ್ ಕುಮಾರ್ 12 ಎಸೆತಗಳಲ್ಲಿ ಔಟಾಗದೆ 29 ರನ್ ಬಾರಿಸಿದರು.
ಆರ್‌ಸಿಬಿಗೆ ಬೇಕಿದ್ದ ಸ್ಫೋಟಕ ಆರಂಭವನ್ನು ವೆಂಕಟೇಶ್ ಅಯ್ಯರ್ ಒದಗಿಸಿಕೊಟ್ಟರೂ, ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆರಂಭಿಕನಾಗಿ ಆಡಿದ ವೆಂಕಟೇಶ್ 19 ಎಸೆತಕ್ಕೆ 44 ರನ್ ಸಿಡಿಸಿದರು. ಆದರೆ ವಿರಾಟ್ ಕೊಹ್ಲಿ(15), ದೇವದತ್ ಪಡಿಕ್ಕಲ್(15) ವಿಫಲರಾದರು. ನಾಯಕ ರಜತ್ ಪಾಟೀದಾರ್(39 ಎಸೆತಕ್ಕೆ 56), ಕೃನಾಲ್ ಪಾಂಡ್ಯ(31 ಎಸೆತಕ್ಕೆ ಔಟಾಗದೆ 41) ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.
ಸ್ಕೋರ್: ಸನ್‌ರೈಸರ್ಸ್ 20 ಓವರ್‌ನಲ್ಲಿ 255/4 (ಇಶಾನ್ 79, ಅಭಿಷೇಕ್ 56, ಕ್ಲಾಸೆನ್ 51, ರಸಿಕ್ 2-52), ಆರ್‌ಸಿಬಿ 20 ಓವರ್‌ನಲ್ಲಿ 200/4 (ರಜತ್ 56, ವೆಂಕಟೇಶ್ 44, ಎಶಾನ್ 2-33)
ಪಂದ್ಯಶ್ರೇಷ್ಠ: ಇಶಾನ್ ಕಿಶನ್
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆರ್‌ಸಿಬಿ ಹಾಗೂ 2ನೇ ಸ್ಥಾನ ಪಡೆದ ಗುಜರಾತ್ ತಂಡಗಳು ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಸೆಣಸಾಡಲಿವೆ. ಇದರಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದ್ದು, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. 3ನೇ ಸ್ಥಾನ ಪಡೆದಿರುವ ಸನ್‌ರೈಸರ್ಸ್, 4ನೇ ಸ್ಥಾನ ಪಡೆಯಲಿರುವ ತಂಡದ ವಿರುದ್ಧ ಮೇ 27ರಂದು ಎಲಿಮಿನೇಟರ್‌ನಲ್ಲಿ ಆಡಲಿದೆ. ಅದರಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್-1ರಲ್ಲಿ ಸೋತ ತಂಡ ಮೇ 29ರಂದು ಕ್ವಾಲಿಫೈಯರ್-2ರಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡ ಫೈನಲ್ ತಲುಪಲಿದೆ. ಮೇ 31ಕ್ಕೆ ಫೈನಲ್ ನಡೆಯಲಿದೆ.
09ನೇ ಬಾರಿ
ಸನ್‌ರೈಸರ್ಸ್ ಈ ಬಾರಿ 9 ಸಲ 200+ ರನ್ ಗಳಿಸಿದೆ. ಇದು ಆವೃತ್ತಿಯೊಂದರಲ್ಲಿ ಯಾವುದೇ ತಂಡದ ಗರಿಷ್ಠ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.