ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಿಂದ ಆರಂಭ
ಮೀಸಲು ಆಟಗಾರನಾಗಿ ಸ್ಥಾನ ಪಡೆದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್
ಯಶಸ್ವಿಗೆ ಉಪಯುಕ್ತ ಟಿಪ್ಸ್ ನೀಡಿದ ಬ್ಯಾಟಿಂಗ್ ದಿಗ್ಗಜ ಕೊಹ್ಲಿ
ಲಂಡನ್(ಜೂ.01): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಜರುಗಿದ್ದು, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಬಲಾಢ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಐಪಿಎಲ್ ಟೂರ್ನಿಯಲ್ಲಿ ಜಿತೇಶ್ ಶರ್ಮಾ, ರಿಂಕು ಸಿಂಗ್, ಸುಯಾಶ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಇವರೆಲ್ಲರನ್ನೂ ಮೀರಿದ ಮತ್ತೊಬ್ಬ ಆಟಗಾರ ಈ ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ತಮ್ಮ ಹೆಸರನ್ನು ಮನೆಮಾತಾಗಿಸಿದ್ದಾರೆ. ಹೌದು, ರಾಜಸ್ಥಾನ ರಾಯಲ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ನಿರ್ಭೀತ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 21 ವರ್ಷದ ಯಶಸ್ವಿ ಜೈಸ್ವಾಲ್, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ ಆಕರ್ಷಕ ಶತಕ ಸಹಿತ 625 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ ಈ ಆವೃತ್ತಿಯ ಐಪಿಎಲ್ ಟೂರ್ನಿಯ ಉದಯೋನ್ಮುಖ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಹೊರಹೊಮ್ಮಿದ್ದಾರೆ.
ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ತೋರಿದ್ದರಿಂದಾಗಿ, ಇದೀಗ ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡದಿಂದ ಬುಲಾವ್ ಬಂದಿದೆ. ಯಶಸ್ವಿ ಜೈಸ್ವಾಲ್, ಇದೀಗ ಆಸ್ಟ್ರೇಲಿಯಾ ವಿರುದ್ದ ಜೂನ್ 07ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡದ ಮೀಸಲು ಆಟಗಾರನಾಗಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಮೊದಲು ಋತುರಾಜ್ ಗಾಯಕ್ವಾಡ್, ಮೀಸಲು ಆಟಗಾರನಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗಾಯಕ್ವಾಡ್ ಅವರ ವಿವಾಹ ಜೂನ್ 03ಕ್ಕೆ ನಿರ್ಧಾರವಾಗಿರುವುದರಿಂದಾಗಿ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು. ಹೀಗಾಗಿ ಗಾಯಕ್ವಾಡ್ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡ ಕೂಡಿಕೊಂಡಿದ್ದಾರೆ.
ಆಸ್ಟ್ರೇಲಿಯಾಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್..!
ಐಪಿಎಲ್ ಮುಗಿದ ಬೆನ್ನಲ್ಲೇ ಭಾರತ ತಂಡದ ಜತೆ ಯಶಸ್ವಿ ಜೈಸ್ವಾಲ್ ಕೂಡಾ ಇಂಗ್ಲೆಂಡ್‌ಗೆ ಬಂದಿಳಿದಿದ್ದು, ಜೈಸ್ವಾಲ್, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಐಸಿಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದೆ.
ಯಶಸ್ವಿ ಜೈಸ್ವಾಲ್ ನೆಟ್ಸ್‌ನಲ್ಲಿ, ಟೀಂ ಇಂಡಿಯಾ ತಾರಾ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸಿದರು. ರಾಜಸ್ಥಾನ ರಾಯಲ್ಸ್ ತಂಡದ ಸಹ ಆಟಗಾರರಾಗಿರುವ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಳಿ ಯಶಸ್ವಿ ಜೈಸ್ವಾಲ್ ಕೆಲವೊಂದು ಉಪಯುಕ್ತ ಟಿಪ್ಸ್ ಕೂಡಾ ಪಡೆದರು. ಇದಾದ ಬಳಿಕ ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಜತೆಗೂ ಯಶಸ್ವಿ ಕೆಲಕಾಲ ಕಳೆದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಯುವ ಬ್ಯಾಟರ್ ಯಶಸ್ವಿಗೆ ಉಪಯುಕ್ತ ಬ್ಯಾಟಿಂಗ್ ಸಲಹೆಗಳನ್ನು ನೀಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಕಿಂಗ್ ಕೊಹ್ಲಿಯಿಂದ ಯಶಸ್ವಿ ಜೈಸ್ವಾಲ್ ಕಲಿಕೆ ಅತ್ಯುತ್ತಮವಾದದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತವನ್ನು ಪ್ರತಿನಿಧಿಸುವುದು ಮುಂಬರುವ ದಿನಗಳಲ್ಲಿ ನೋಡಲಿರುವ ಅದ್ಭುತ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ
16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್, 14 ಪಂದ್ಯಗಳಿಂದ 625 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದರು. 2023ರ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ 5 ಅರ್ಧಶತಕ ಹಾಗು ಒಂದು ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದರು.