
ಚಿತ್ರದುರ್ಗ (ಮೇ 06): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾಟದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡದ ಗೆಲುವಿಗಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳು ಚಿತ್ರದುರ್ಗದಲ್ಲಿ ಮೇಕೆ ಬಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪೋಸ್ಟರ್ ಮುಂದೆ ಮೇಕೆ ಬಲಿಕೊಟ್ಟ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೊನೆಯ ಓವರ್‌ನಲ್ಲಿ ರೋಮಾಂಚನಕಾರಿಯಾಗಿ ಗೆಲುವು ಸಾಧಿಸಿದೆ. ಈ ಗೆಲುವಿನ ನಂತರ, ಚಿತ್ರದುರ್ಗ ಜಿಲ್ಲೆಯ ಕೆಲವು ಅಭಿಮಾನಿಗಳು ಸಂಭ್ರಮಾಚರಣೆಯ ವೇಳೆ ಮೇಕೆ ಬಲಿ ಕೊಟ್ಟಿದ್ದಾರೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ವಿರಾಟ್ ಕೊಹ್ಲಿ ಅವರ ಕಟೌಟ್ ಮುಂದೆ ಮೇಕೆಯನ್ನು ಬಲಿ ನೀಡಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ-ವಿರೋಧ ವ್ಯಕ್ತವಾಗಿದೆ. ಇದೀಗ ವಿಡಿಯೋದ ಗಂಭೀರತೆಯನ್ನು ಅರಿತುಕೊಂಡು ಚಿತ್ರದುರ್ಗ ಪೊಲೀಸರು ಮೇಕೆ ಬಲಿ ಕೊಟ್ಟ ಮೂವರನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ 20 ಸೆಕೆಂಡುಗಳ ವೈರಲ್ ವೀಡಿಯೊದಲ್ಲಿ, ವಿರಾಟ್ ಕೊಹ್ಲಿ ಅವರ ಪೋಸ್ಟರ್ ಮುಂದೆ ಯುವಕನೊಬ್ಬ ಮೇಕೆಯನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ. ಎರಡನೇ ಯುವಕ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಜಯ ಸಾಧಿಸಿದೆ ಎಂದು ಘೋಷಿಸುತ್ತಿದ್ದಂತೆ, ಮೂರನೇ ಯುವಕ ಮಚ್ಚಿನಿಂದ ಆಡಿನ ಕುತ್ತಿಗೆಯನ್ನು ಕತ್ತರಿಸುತ್ತಾನೆ. ಇದಾದ ನಂತರ, ವಿರಾಟ್ ಕೊಹ್ಲಿ ಅವರ ಪೋಸ್ಟರ್ ಮೇಲೆ ಆಡಿನ ರಕ್ತವನ್ನು ರಕ್ತಾಭಿಷೇಕ ಎಂದು ಅರ್ಪಿಸಲಾಗುತ್ತದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ 'call-me-143-kalki' ಪೋಸ್ಟ್ ಮಾಡಿದ್ದಾರೆ. ಇನ್ನು ವಿಡಿಯೋ ಭಾರೀ ವೈರಲ್ ಆಗಿದೆ. ಜೊತೆಗೆ, ಎಲ್ಲೆಡೆ ವಿಡಿಯೋ ಲಭ್ಯವಾಗಿದೆ.
ಚಿತ್ರದುರ್ಗದ ಹಳ್ಳಿಯೊಂದರಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರ ಗಂಭೀರತೆ ಎಚ್ಚೆತ್ತುಕೊಂಡ ಮೊಳಕಾಲ್ಮೂರು ಠಾಣೆ ಪೊಲೀಸರು 'ಪ್ರಾಣಿ ಹಿಂಸೆ ನಿಷೇಧ' ನಿಯಮದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಯುವಕರನ್ನು ಬಂಧಿಸಿದ್ದಾರೆ. ಮರಿಯಮ್ಮನಹಳ್ಳಿ ನಿವಾಸಿಗಳಾದ ಸಣ್ಣ ಪಾಲಯ್ಯ (22), ಜಯಣ್ಣ (23) ಮತ್ತು ತಿಪ್ಪೆ ಸ್ವಾಮಿ (28) ಎಂಬ ಮೂವರು ಬಂಧಿತ ಯುವಕರಾಗಿದ್ದಾರೆ.
ಆರ್‌ಸಿಬಿ ಭಕ್ತಿ ಅದ್ಭುತ ಫಾರ್ಮ್:
2025ನೇ ಸಾಲಿನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್ 18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಫಾರ್ಮ್‌ನಲ್ಲಿದೆ. ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿ 16 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ವಿಶೇಷವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭದ ಮೂರು ಪಂದ್ಯಗಳನ್ನು ಸೋತಿದ್ದ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಟಾಸ್ ಸೋತ ನಂತರ ಸೋಲು ಖಚಿತವೆಂದೇ ಭಾವಿಸಲಾಗಿತ್ತು. ಆದರೆ, ಕೊನೆಯ ಬಾಲಿನವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಯಶ್ ದಯಾಳ್ ಎಸೆದ ಕೊನೆಯ ಬಾಲಿಗೆ 4 ರನ್ ಬೇಕಿದ್ದಾಗ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರೂ ಕೇವಲ 2 ರನ್ ಬಿಟ್ಟುಕೊಟ್ಟರು. ಈ ಮೂಲಕ ಆರ್‌ಸಿಬಿ 2 ರನ್‌ಗಳಿಂದ ವಿಜಯಶಾಲಿಯಾಯಿತು. ಇದರಿಂದ ಆರ್‌ಸಿಬಿ ಈ ಸಲ ಕಪ್ ಗೆಲ್ಲಲಿದೆ ಎಂಬ ಅಭಿಮಾನಿಗಳ ನಿರೀಕ್ಷೆಗಳು ಗಗನಕ್ಕೇರಿವೆ. ಆದರೆ ಈ ವಿಜಯೋತ್ಸವದ ಸಂಭ್ರಮದಲ್ಲಿ ಚಿತ್ರದುರ್ಗದಲ್ಲಿ ಮೇಕೆ ಬಲಿ ನೀಡಿದ ಪ್ರಕರಣ ಅಂಧಾಭಿಮಾನವನ್ನು ತೋರಿಸುತ್ತದೆ ಎಂದು ಕೆಲವರು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.