
ಬೆಂಗಳೂರು: ವಿದೇಶ ಪ್ರವಾಸಗಳ ವೇಳೆ ಆಟಗಾರರ ಕುಟುಂಬಸ್ಥರಿಗೆ ಕಡಿವಾಣ ಹಾಕಿರುವ ಬಿಸಿಸಿಐ ನಿಯಮಕ್ಕೆ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಟುಂಬದ ಬೆಂಬಲವು ಆಟಗಾರರಿಗೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ನಗರದ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಶನಿವಾರ ನಡೆದ ಆರ್‌ಸಿಬಿ ಇನ್ನೋವೇಷನ್ ಲ್ಯಾಬ್ ಆಯೋಜಿಸಿದ 'ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್'ನಲ್ಲಿ ಪಾಲ್ಗೊಂಡು ಕೊಹ್ಲಿ ಮಾತನಾಡಿದರು. ಈ ವೇಳೆ ಕುಟುಂಬಸ್ಥರನ್ನು ಆಟಗಾರರಿಂದ ದೂರವಿಡುವ ಬಿಸಿಸಿಐ ನಿಯಮದ ಬಗ್ಗೆಯೂ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಕೊಹ್ಲಿ 'ಫೀಲ್ಡ್‌ನಲ್ಲಿ ನಿರಾಸೆ ಅನುಭವಿಸಿದಾಗಲೆಲ್ಲಾ ಸಾಂತ್ವನವಾಗುವುದು ಕುಟುಂಬಸ್ಥರು. ಅವರ ಪಾತ್ರದ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ. ಮೈದಾನದಲ್ಲಿ ಏನಾದರೂ ಅಹಿತಕರ ಸಂಗತಿ ನಡೆದರೆ, ಆಟಗಾರನಿಗೆ ಕುಟುಂಬದ ನೆರವು ಎಷ್ಟು ಮುಖ್ಯ ಎಂಬುದನ್ನು ಇಂಥವರು ಅರ್ಥ ಮಾಡಿ ಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಆಟದ ಮೇಲೆ ನಿಯಂತ್ರಣ ವಿಲ್ಲದವರನ್ನು ಗುರಿಯಾಗಿಸಿ ಅವರನ್ನು ಆಟಗಾರರಿಂದ ದೂರವಿಡುವುದು ನನಗೆ ತುಂಬಾ ನಿರಾಶೆ ಉಂಟುಮಾಡಿದೆ' ಎಂದರು.
ಇದನ್ನೂ ಓದಿ: ಭಾರತೀಯರಲ್ಲಿ ಶುರುವಾಗಿದೆ ಐಪಿಎಲ್ ಜ್ವರ! 'ಎ' ಗುಂಪಿನ ತಂಡಗಳ ಕಂಪ್ಲೀಟ್ ಡೀಟೈಲ್ಸ್
'ನಾನು ಕೋಣೆಗೆ ಹೋಗಿ ಒಬ್ಬಂಟಿಯಾಗಿ ಕುಳಿತು ದುಃಖಿಸಲು ಬಯಸುವುದಿಲ್ಲ. ನಾನು ಸಾಮಾನ್ಯನಾಗಿರಲು ಬಯಸುತ್ತೇನೆ. ಆಗ ನೀವು ನಿಜವಾಗಿಯೂ ನಿಮ್ಮ ಆಟವನ್ನು ಒಂದು ಜವಾಬ್ದಾರಿಯಂತೆ ಪರಿಗಣಿಸಬಹುದು ಎಂದ ಕೊಹ್ಲಿ ಕುಟುಂಬಸ್ಥರ ಜೊತೆ ಕಳೆಯುವ ಯಾವುದೇ ಅವಕಾಶವನ್ನು ನಾನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಅದು ಶ್ರೇಷ್ಠ ಕ್ಷಣ ಎಂದು ತಿಳಿಸಿದರು.
ನಿಮ್ಮ ಕುಟುಂಬ ನಿಮ್ಮ ಜೊತೆಯೇ ಇರಬೇಕಾ ಎಂಬ ಪ್ರಶ್ನೆಯನ್ನು ಯಾವುದೇ ಆಟಗಾರನನ್ನು ನೀವು ಕೇಳಿದರೆ, ಅವರು ಖಂಡಿತವಾಗಿಯೂ ಹೌದು ಎಂದು ಹೇಳುತ್ತಾರೆ' ಎಂದು ಕೊಹ್ಲಿ ಹೇಳಿದ್ದಾರೆ.
ವಿದೇಶಿ ಸರಣಿಗಳ ವೇಳೆ ಆಟಗಾರರ ಕುಟುಂಬಸ್ಥರು ಜೊತೆಗಿರುವುದಕ್ಕೆ ಇತ್ತೀಚೆಗೆ ಬಿಸಿಸಿಐ ಕಡಿವಾಣ ಹಾಕಿತ್ತು. ಸುದೀರ್ಘ ಸರಣಿಗಳ ವೇಳೆ 2 ವಾರ, ಕಿರು ಸರಣಿಗಳ ವೇಳೆ ಒಂದು ವಾರ ಮಾತ್ರ ಆಟಗಾರರ ಜೊತೆ ಕುಟುಂಬಸ್ಥರು ಕಾಲ ಕಳೆಯುವುದಕ್ಕೆ ಅವಕಾಶ ಕಲ್ಪಿಸಿ ನಿಯಮ ಜಾರಿಗೊಳಿಸಿತ್ತು.
ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡ ಪಾಕ್‌ಗಿಂತ ಶ್ರೇಷ್ಠ: ನೆರೆ ರಾಷ್ಟ್ರ ಕಾಲೆಳೆದ ಮೋದಿ!
ಫಿಟ್ನೆಸ್ ಟೆಸ್ಟ್ ಪಾಸಾದ ನಿತೀಶ್ ಐಪಿಎಲ್‌ಗೆ ರೆಡಿ
ಬೆಂಗಳೂರು: ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಿದ್ದಾರೆ. ಎನ್‌ಸಿಎನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆ, ಯೋ-ಯೋ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದ ನಿತೀಶ್‌ಗೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿದೆ.
21 ವರ್ಷದ ನಿತೀಶ್ ಕುಮಾರ್ ರೆಡ್ಡಿ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದು, ಐಪಿಎಲ್‌ಗೆ ಅಭ್ಯಾಸ ಆರಂಭಿಸಿದ್ದಾರೆ. ಜನವರಿಯಲ್ಲಿ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ವೇಳೆ ನಿತೀಶ್ ಗಾಯಗೊಂಡಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ನಿತೀಶ್ ಕುಮಾರ್ ರೆಡ್ಡಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಜೋರಾಗಿದೆ.
ಇದನ್ನೂ ಓದಿ: 91ಕ್ಕೆ ಅಲೌಟ್: ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!
ಬಿಸಿಸಿಐ ಗುತ್ತಿಗೆ: ಮೊಹಮ್ಮದ್ ಸಿರಾಜ್‌ಗೆ ಹಿಂಬಡ್ತಿ?
ನವದೆಹಲಿ: ಭಾರತ ಏಕದಿನ ಹಾಗೂ ಟಿ20 ತಂಡಗಳಿಂದ ಹೊರಬಿದ್ದಿರುವ ಮೊಹಮದ್ ಸಿರಾಜ್ ಇನ್ನೇನು ಸದ್ಯದಲ್ಲೇ ಘೋಷಣೆಯಾಗಲಿರುವ ಬಿಸಿಸಿಐನ ಹೊಸ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಹಿಂಬಡ್ತಿ ಪಡೆಯಲಿದ್ದಾರೆ ಎನ್ನಲಾಗಿದೆ. ಸದ್ಯ ‘ಎ’ ದರ್ಜೆಯಲ್ಲಿರುವ ಸಿರಾಜ್‌ರನ್ನು ‘ಬಿ’ ದರ್ಜೆಗೆ ಇಳಿಸುವ ಸಾಧ್ಯತೆ ಇದೆ. ಇದೇ ವೇಳೆ ಶುಭ್‌ಮನ್ ಗಿಲ್, ಕೆ.ಎಲ್.ರಾಹುಲ್ ‘ಎ+’ನಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.