ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ಭಾರತದ ವಿವಿಧ 10 ಸ್ಟೇಡಿಯಂಗಳಲ್ಲಿ ನಡೆಯಲಿದ್ದು, ಜಾಗತಿಕ ಕ್ರಿಕೆಟ್ ಮಹಾಸಂಗ್ರಾಮ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ನವದೆಹಲಿ(ಸೆ.20): ದ್ವೀಪರಾಷ್ಟ್ರ ಶ್ರೀಲಂಕಾ ತಂಡವನ್ನು ಮಣಿಸಿ 8ನೇ ಬಾರಿಗೆ ಏಷ್ಯಾಕಪ್ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ದಶಕದ ಬಳಿಕ ಐಸಿಸಿ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ. ಕಳೆದ ಭಾನುವಾರ ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ 10 ವಿಕೆಟ್ ಅನಾಯಾಸದ ಗೆಲುವು ದಾಖಲಿಸಿದ್ದು, ಇದೇ ರೀತಿಯ ಅದ್ಭುತ ಪ್ರದರ್ಶನವನ್ನು ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪುನರಾವರ್ತಿಸಲು ಎದುರು ನೋಡುತ್ತಿದೆ.
ಇನ್ನು ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. ಇದೀಗ ವಿರಾಟ್ ಕೊಹ್ಲಿ, ತಮ್ಮ ನಾಲ್ಕನೇ ಏಕದಿನ ವಿಶ್ವಕಪ್ ಆಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಐಸಿಸಿ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದ್ದಾರೆ. ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 13 ಸಾವಿರ ರನ್ ಬಾರಿಸಿದ ಎನ್ನುವ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು.
ಅಭಿಮಾನಿಗಳಿಗೆ ಕೊಹ್ಲಿ ಭಾವನಾತ್ಮಕ ಸಂದೇಶ:
ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ಭಾರತದ ವಿವಿಧ 10 ಸ್ಟೇಡಿಯಂಗಳಲ್ಲಿ ನಡೆಯಲಿದ್ದು, ಜಾಗತಿಕ ಕ್ರಿಕೆಟ್ ಮಹಾಸಂಗ್ರಾಮ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಟೂರ್ನಿಯ ನೇರಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್, ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಯಾಂಪೇನ್‌ಗೆ ಚಾಲನೆ ನೀಡಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಒಂದು ರೀತಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
"ನಮ್ಮ ಅಭಿಮಾನಿಗಳ ಉತ್ಸಾಹ ಮತ್ತು ಅಚಲ ಬೆಂಬಲವೇ ವಿಶ್ವಕಪ್ ಗೆಲ್ಲುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಉತ್ತೇಜಿಸುತ್ತದೆ. ಈ ಹಿಂದಿನ ವಿಶ್ವಕಪ್ ಗೆಲುವಿನ ನೆನಪುಗಳು, ಅದರಲ್ಲೂ 2011ರ ಏಕದಿನ ವಿಶ್ವಕಪ್ ಟೂರ್ನಿಯ ಅಪ್ರತಿಮ ನೆನಪುಗಳು ನಮ್ಮ ಹೃದಯದಲ್ಲಿ ಅಚ್ಚೊತ್ತಿವೆ. ಇದೀಗ ಅಭಿಮಾನಿಗಳಿಗಾಗಿ ನಾವು ಹೊಸ ನೆನಪುಗಳು ರಚಿಸಲು ಎದುರು ನೋಡುತ್ತಿದ್ದೇವೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ನಾನು ಈ ಕ್ಯಾಂಪೇನ್‌ನ ಭಾಗವಾಗಿರುವುದಕ್ಕೆ ಅತ್ಯುತ್ಸಾಹಿತನಾಗಿದ್ದೇನೆ. ಇದು ನಮ್ಮ ಅಭಿಮಾನಿಗಳ ಭಾವನೆಗಳನ್ನು ಸೆರೆಹಿಡಿಯಲು ಹಾಗೂ ಅವರ ಕನಸುಗಳನ್ನು ನನಸಾಗಿಸಲು ಎಲ್ಲವನ್ನು ನೀಡಲು ಸಿದ್ದರಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ, ತವರಿನಲ್ಲಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಪೈಕಿ ಸೆ.22ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಸೆ.24ರಂದು ಇಂದೋರ್, ಸೆ.27ರಂದು ರಾಜ್‌ಕೋಟ್ ಕ್ರಮವಾಗಿ 2 ಹಾಗೂ 3ನೇ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಇನ್ನು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾದರೂ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 08ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.