
ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮುಂದಿನ ಕ್ರಿಕೆಟ್ ಭವಿಷ್ಯದ ಕುರಿತಂತೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ, ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಹೌದು, 2024ರ ಐಸಿಸಿ ಟಿ20 ವಿಶ್ವಕಪ್ ಜಯಿಸಿದ ಬಳಿಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಬಳಿಕ ಕೊಹ್ಲಿ ಏಕದಿನ ಕ್ರಿಕೆಟ್ ಮಾದರಿಗೂ ಗುಡ್ ಬೈ ಹೇಳಲಿದ್ದಾರೆ ಎನ್ನುವಂತಹ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಆದರೆ ವಿರಾಟ್ ಕೊಹ್ಲಿ ಅಂತಹ ಶಾಕ್ ನೀಡಿರಲಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲು ಪಣತೊಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ 2027ರವರೆಗೂ ಏಕದಿನ ಕ್ರಿಕೆಟ್ ಆಡುವುದಾಗಿ ಕಿಂಗ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
'ಪಾಪ ಅವರು ಬಡವರು' : RCBಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ವಿರೇಂದ್ರ ಸೆಹ್ವಾಗ್!
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿಯನ್ನು, ಕಾರ್ಯಕ್ರಮದ ನಿರೂಪಕರು, 'ನಿಮ್ಮ ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಏನಾದರೂ ಸುಳಿವು ನೀಡುತ್ತೀರಾ? ಎಂದು ಕೇಳುತ್ತಾರೆ. ಆಗ ವಿರಾಟ್ ಕೊಹ್ಲಿ, 'ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಗೊತ್ತಿಲ್ಲ, ಆದ್ರೆ ಮುಂದಿನ ವಿಶ್ವಕಪ್ ಗೆದ್ದು ತರಬೇಕೆಂಬ ಆಸೆಯಿದೆ" ಎಂದು 36 ವರ್ಷದ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂದಿ ಖುಷಿಯಿಂದ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2023ರಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು. ಪರಿಣಾಮ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಶಕದ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿತ್ತು.
ಧೋನಿಗೆ 10 ಓವರ್ ಬ್ಯಾಟ್ ಮಾಡಲು ಆಗಲ್ಲ: ಹೊಸ ಬಾಂಬ್ ಸಿಡಿಸಿದ ಸ್ಟಿಫನ್ ಪ್ಲೆಮಿಂಗ್!
ಭಾರತ ತಂಡವು 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು. ಆಗ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದರು. ಇದಾದ ಬಳಿಕ 2015 ಹಾಗೂ 2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಸೆಮಿಫೈನಲ್‌ನಲ್ಲಿಯೇ ಅಂತ್ಯವಾಗಿತ್ತು. ಇನ್ನು 2023ರ ಏಕದಿನ ವಿಶ್ವಕಪ್ ಫೈನಲ್ ಸೋಲು ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ನುಚ್ಚುನೂರು ಮಾಡಿತ್ತು.
ಇನ್ನು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ ಹೇಳುವುದಾದರೇ, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ತವರಿನಾಚೆ ನಡೆದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್‌ಸಿಬಿ ತಂಡವು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದರ ಜತೆಗೆ ಅಂಕಪಟ್ಟಿಯಲ್ಲೂ ಆರ್‌ಸಿಬಿ ತಂಡವು ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನು ವಿರಾಟ್ ಕೊಹ್ಲಿ ಮೊದಲೆರಡು ಪಂದ್ಯಗಳ ಪೈಕಿ ಒಂದು ಅರ್ಧಶತಕ ಸಹಿತ 90 ರನ್ ಬಾರಿಸಿದ್ದಾರೆ. ಕೊಹ್ಲಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಜಯಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.