
ವೆಲ್ಲಿಂಗ್ಟನ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ಔಟಾದರೂ, ಕೊಹ್ಲಿ ತಮ್ಮ ಹೆಸರಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೆಲ್ಲಿಂಗ್ಟನ್‌ನ ಸೆಲ್ಲೊ ಬೇಸಿನ್ ರಿಸರ್ವ್‌ನಲ್ಲಿ (Cello Basin Reserve) ನಡೆದ ಪಂದ್ಯದಲ್ಲಿ ಭಾರತ 135 ರನ್‌ಗಳ ಗುರಿ ಬೆನ್ನಟ್ಟಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಕೊಹ್ಲಿ, ತಾವು ಎದುರಿಸಿದ ಎರಡನೇ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದರು.
ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಮತ್ತು ಪಾಂಟಿಂಗ್ ಇಬ್ಬರೂ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ತಲಾ 1,971 ರನ್ ಗಳಿಸಿ ಸಮಬಲ ಸಾಧಿಸಿದ್ದರು. ಬೌಂಡರಿ ಬಾರಿಸಿದ ಕೊಹ್ಲಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದೀಗ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಗಳಿಸಿರುವ ರನ್‌ಗಳ ಸಂಖ್ಯೆ 1,978ಕ್ಕೆ ಏರಿಕೆಯಾಗಿದೆ.
ರಿಕಿ ಪಾಂಟಿಂಗ್ ನ್ಯೂಜಿಲೆಂಡ್ ವಿರುದ್ಧ 51 ಪಂದ್ಯಗಳ 50 ಇನಿಂಗ್ಸ್‌ಗಳಲ್ಲಿ 1,971 ರನ್ ಗಳಿಸಿದ್ದರು. 45.83ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ಅವರು, 6 ಶತಕ ಹಾಗೂ 12 ಅರ್ಧಶತಕಗಳನ್ನು ಸಿಡಿಸಿದ್ದರು. ಆದರೆ, ಕೊಹ್ಲಿ ಪಾಂಟಿಂಗ್ ಅವರ ಈ ದಾಖಲೆಯನ್ನು ಮುರಿಯಲು ತೆಗೆದುಕೊಂಡಿದ್ದು ಕೇವಲ 38 ಇನಿಂಗ್ಸ್‌ಗಳು ಮಾತ್ರ. ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
1,978 ರನ್ – ವಿರಾಟ್ ಕೊಹ್ಲಿ
1,971 ರನ್ – ರಿಕಿ ಪಾಂಟಿಂಗ್
1,750 ರನ್ – ಸಚಿನ್ ತೆಂಡೂಲ್ಕರ್
1,568 ರನ್ – ಕುಮಾರ್ ಸಂಗಕ್ಕಾರ
1,519 ರನ್ – ಸನತ್ ಜಯಸೂರ್ಯ
1,449 ರನ್ – ಜಾಕ್ ಕಾಲಿಸ್
ಈ ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಕೊಹ್ಲಿಗೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 2,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳುವ ಅವಕಾಶವಿದೆ. ಸದ್ಯ 1,978 ರನ್ ಗಳಿಸಿರುವ ಕೊಹ್ಲಿ ಈ ದಾಖಲೆ ನಿರ್ಮಿಸಲು ಇನ್ನು 22 ರನ್ ಗಳಿಸಬೇಕಿದೆ.
ಆದರೆ, ಎರಡನೇ ಪಂದ್ಯದಲ್ಲಿ ಕೊಹ್ಲಿಯ ಇನಿಂಗ್ಸ್ ಹೆಚ್ಚು ಹೊತ್ತು ಸಾಗಲಿಲ್ಲ. ಅವರ ಆರ್‌ಸಿಬಿ (RCB) ತಂಡದ ಸಹ ಆಟಗಾರ ಹಾಗೂ ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ (Jacob Duffy) ಎಸೆದ ಉತ್ತಮ ಲೆಂಗ್ತ್ ಎಸೆತವನ್ನು ಕವರ್-ಪಾಯಿಂಟ್‌ನತ್ತ ಹೊಡೆಯಲು ಯತ್ನಿಸಿದ ಕೊಹ್ಲಿ, ನೇರವಾಗಿ ಫೀಲ್ಡರ್‌ಗೆ ಕ್ಯಾಚ್ ನೀಡಿ ಔಟಾದರು. ಅವರು 7 ರನ್ ಗಳಿಸಲಷ್ಟೇ ಶಕ್ತರಾದರು.
ಇದಕ್ಕೂ ಮುನ್ನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ವಿಶೇಷ ದಾಖಲೆ ನಿರ್ಮಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 13,000 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಹೀಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಇದೀಗ 2,000 ರನ್‌ಗಳ ಮೈಲಿಗಲ್ಲಿನ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.