ನೇಪಾಳ ಬೌಲರ್‌ಗಳನ್ನು ಸದೆಬಡಿದ ಮರಿ ಸೆಹ್ವಾಗ್ ಬ್ಯಾಟಿಂಗ್ ನೋಡಿದ್ರಾ? ಅಪ್ಪನ ಆಟ ನೆನಪು ಮಾಡಿಸಿದ ಆರ್ಯವೀರ್ ಸೆಹ್ವಾಗ್! ವಿಡಿಯೋ ವೈರಲ್

Published : Nov 07, 2026, 04:41 PM IST
Aaryavir Sehwag

ಸಾರಾಂಶ

ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಆರ್ಯವೀರ್ ಸೆಹ್ವಾಗ್ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಭಾರತೀಯ ಯುವ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಬೆಂಗಳೂರು(ನ.07): ವಿರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಯಾರಿಗೆ ನೆನಪಿಲ್ಲ ಹೇಳಿ? ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವಂತೆ ಆಡುತ್ತಿದ್ದಿದ್ದು ವಿರೇಂದ್ರ ಸೆಹ್ವಾಗ್. ಇದೀಗ ಸೆಹ್ವಾಗ್ ಮಗನ ಸರದಿ. ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಆರ್ಯವೀರ್ ಸೆಹ್ವಾಗ್ ತಾವಾಡಿದ ಮೊದಲ ಏಷ್ಯಾಕಪ್ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆರ್ಯವೀರ್ ಅವರ ಬ್ಯಾಟಿಂಗ್ ಥೇಟ್ ವಿರೇಂದ್ರ ಸೆಹ್ವಾಗ್ ಅವರ ಆಟವನ್ನೇ ನೆನಪಿಸುವಂತಿತ್ತು.

ಆರ್ಯವೀರ್ ಸೆಹ್ವಾಗ್ ಮತ್ತು ಲಕ್ಷ್ಯ ರೈಚಂದಾನಿ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬೌಲಿಂಗ್‌ನಲ್ಲಿ ಮಿಂಚಿದ ಭಾರತೀಯ ಯುವ ಪಡೆ, ಬಳಿಕ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿ ಎದುರಾಳಿಗೆ ಯಾವುದೇ ಅವಕಾಶ ನೀಡಲಿಲ್ಲ.

ನೇಪಾಳ ನೀಡಿದ 129 ರನ್‌ಗಳ ಗುರಿಯನ್ನು ಭಾರತ ಕೇವಲ 19.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು. ಈ ಮೂಲಕ 10 ವಿಕೆಟ್‌ಗಳ ಜಯ ಸಾಧಿಸಿದ ಭಾರತ, ಇನ್ನೂ 185 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.

ಆರ್ಯವೀರ್ ಸೆಹ್ವಾಗ್ ಅಬ್ಬರದ ಬ್ಯಾಟಿಂಗ್

129 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ಲಕ್ಷ್ಯ ರೈಚಂದಾನಿ ಉತ್ತಮ ಆರಂಭ ನೀಡಿದರು. ಆರಂಭದಲ್ಲಿ ಲಕ್ಷ್ಯ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರೆ, ಬಳಿಕ ಮಾಜಿ ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರ್ಯವೀರ್ ಕೇವಲ 52 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಲಕ್ಷ್ಯ ರೈಚಂದಾನಿ 63 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ ಅಜೇಯ 53 ರನ್ ಗಳಿಸಿದರು.

ಈ ಇಬ್ಬರ ಜವಾಬ್ದಾರಿಯುತ ಹಾಗೂ ಆಕರ್ಷಕ ಬ್ಯಾಟಿಂಗ್‌ನಿಂದ ಭಾರತ 19.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 129 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಹೀಗಿತ್ತು ನೋಡಿ ಆರ್ಯವೀರ್ ಬ್ಯಾಟಿಂಗ್:

ಭಾರತೀಯ ಬೌಲರ್‌ಗಳ ಸಂಘಟಿತ ದಾಳಿ

ಟಾಸ್ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡ ನೇಪಾಳ 51 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ದರ್ಶ್ ಸೋನಾರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. 93 ಎಸೆತಗಳನ್ನು ಎದುರಿಸಿದ ಅವರು ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 43 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆಶಿಶ್ ಲೂಥರ್ 29 ರನ್‌ಗಳ ಕೊಡುಗೆ ನೀಡಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.

ಭಾರತದ ಪರ ಇಶಾನ್ ಸೂದ್ ಆರಂಭದಲ್ಲೇ ನೇಪಾಳದ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಅವರು 18 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಅರ್ಜುನ್ ರಾಜ್‌ಪುತ್ ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ 8 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪರಿಣಾಮ ನೇಪಾಳ 42.3 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟ್ ಆಯಿತು.

ಭಾನುವಾರ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

ನೇಪಾಳ ವಿರುದ್ಧ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ ತಂಡ ಇದೀಗ ತನ್ನ ಮುಂದಿನ ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಎದುರಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತವನ್ನು ಗೆಲ್ಲಿಸಿದ ಮಳೆರಾಯ; ಕಿವೀಸ್ ಎದುರು 135 ರನ್ ಬೆನ್ನತ್ತಲು ಪರದಾಡಿದ ಟೀಂ ಇಂಡಿಯಾ..!
'KKR ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದಾಗ...?' ಗೌತಮ್ ಗಂಭೀರ್ ಇನ್ನೊಂದು ಮುಖ ತೆರೆದಿಟ್ಟ ಆರ್‌ಸಿಬಿ ಕ್ರಿಕೆಟಿಗ ವೆಂಕಟೇಶ್ ಅಯ್ಯರ್..!