Ind vs SL: ಲಂಕಾ ಎದುರು ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

Suvarna News   | Asianet News
Published : Mar 04, 2022, 09:10 AM ISTUpdated : Mar 04, 2022, 09:30 AM IST
Ind vs SL: ಲಂಕಾ ಎದುರು ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಸಾರಾಂಶ

* ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ * 100ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾದ ಮಾಜಿ ನಾಯಕ ವಿರಾಟ್ ಕೊಹ್ಲಿ * ಮೂವರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದ ಭಾರತ

ಮೊಹಾಲಿ(ಮಾ.04): ಭಾರತ ಹಾಗೂ ಶ್ರೀಲಂಕಾ (India vs Sroi Lanka) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಮೊದಲ ಬಾರಿಗೆ ನಾಯಕನಾಗಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತ ತಂಡವು ಮೂರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಮೊಹಾಲಿಯಲ್ಲಿರುವ ಪಂಜಾಬ್‌ ಕ್ರಿಕೆಟ್ ಸಂಸ್ಥೆಯ ಐ.ಎಸ್. ಬಿಂದ್ರಾ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯವು ವಿರಾಟ್ ಕೊಹ್ಲಿ (Virat Kohli) ಪಾಲಿಗೆ ನೂರನೇ ಟೆಸ್ಟ್ ಪಂದ್ಯವೆನಿಸಿದೆ. ರೋಹಿತ್ ಶರ್ಮಾ ನಾಯಕನಾಗಿ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದರೆ, ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯನ್ನಾಡುತ್ತಿರುವ ಭಾರತದ 12ನೇ ಆಟಗಾರ ಎನಿಸಿದ್ದಾರೆ. 

ಭಾರತ ತಂಡವು ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಹಲವು ಪ್ರಯೋಗಗಳಿಗೆ ಮುಂದಾಗಿದೆ. ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ (Ajinkya Rahane) ತಂಡದಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಮೂರನೇ ಕ್ರಮಾಂಕದಲ್ಲಿ ಹನುಮ ವಿಹಾರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬೆಂಚ್ ಕಾಯಿಸಿದ್ದ ಶ್ರೇಯಸ್ ಅಯ್ಯರ್‌ ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದಂತೆ ಭಾರತ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಜತೆಗೆ ಜಯಂತ್ ಯಾದವ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ನರ್ ಆಲ್ರೌಂಡರ್‌ ರೂಪದಲ್ಲಿ ತಂಡ ಕೂಡಿಕೊಂಡಿದ್ದಾರೆ. ಇನ್ನು ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ನಿರ್ವಹಣೆ ಮಾಡಲಿದ್ದಾರೆ.

100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ: 2011ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿರಿಸಿದ್ದ ಕೊಹ್ಲಿ ಈವರೆಗೆ 99 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 100ನೇ ಟೆಸ್ಟ್‌ ಆಡುವ ಮೂಲಕ ಈ ಮೈಲಿಗಲ್ಲು ತಲುಪಲಿರುವ ಭಾರತದ 12ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್‌, ದಿಲೀಪ್ ವೆಂಗ್‌ಸರ್ಕಾರ್‌, ಕಪಿಲ್‌ ದೇವ್‌, ಸಚಿನ್ ತೆಂಡುಲ್ಕರ್‌, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್‌, ವಿರೇಂದ್ರ ಸೆಹ್ವಾಗ್‌, ಹರ್ಭಜನ್‌ ಸಿಂಗ್ ಹಾಗೂ ಇಶಾಂತ್‌ ಶರ್ಮಾ 100 ಪಂದ್ಯಗಳನ್ನು ಆಡಿದ್ದಾರೆ. 

Virat Kohli 100th Test: ನೂರನೇ ಟೆಸ್ಟ್ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ

ಕೊಹ್ಲಿ ಇದುವರೆಗೆ 99 ಪಂದ್ಯಗಳ 168 ಇನ್ನಿಂಗ್ಸ್‌ಗಳಲ್ಲಿ 7962 ರನ್‌ ಕಲೆ ಹಾಕಿದ್ದು, 8000 ರನ್‌ ಮೈಲಿಗಲ್ಲು ತಲುಪಲು ಇನ್ನು 38 ರನ್‌ ಬೇಕಿದೆ. 8000 ರನ್‌ ಕ್ಲಬ್‌ಗೆ ಸೇರಲಿರುವ ಭಾರತದ 6ನೇ ಹಾಗೂ ಒಟ್ಟಾರೆ 32ನೇ ಆಟಗಾರ ಆಗಲಿದ್ದಾರೆ. ಸಚಿನ್‌, ದ್ರಾವಿಡ್‌, ಗವಾಸ್ಕರ್‌, ಸೆಹ್ವಾಗ್‌ ಹಾಗೂ ಲಕ್ಷ್ಮಣ್‌ ಟೆಸ್ಟ್‌ನಲ್ಲಿ 8 ಸಾವಿರ ರನ್‌ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಯಶಸ್ವಿಯಾಗಿಲ್ಲ. ಇದೀಗ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್ ಶರ್ಮಾ ‌(ನಾಯಕ), ಮಯಾಂಕ್‌ ಅಗರ್‌ವಾಲ್‌, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ರಿಷಭ್ ಪಂತ್‌, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್‌, ಜಯಂತ್ ಯಾದವ್‌, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.

ಲಂಕಾ: ದೀಮುತ್ ಕರುಣರತ್ನೆ(ನಾಯಕ), ಲಹಿರು ತಿರಿಮನ್ನೆ, ಪತುಮಾ ನಿಸ್ಸಾಂಕ, ಏಂಜಲೋ ಮ್ಯಾಥ್ಯೂಸ್‌, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ನಿರ್ಶೋನ್ ಡಿಕ್‌ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್‌, ಲಸಿತ್ ಎಂಬುಲ್ಡೆನಿಯಾ, ವಿಶ್ವ ಫರ್ನಾಂಡೋ, ಲಹಿರು ಕುಮಾರ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?