
ಮೊಹಾಲಿ(ಮಾ.04): ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ರನ್ನರ್-ಅಪ್ ಭಾರತ ಹಾಗೂ ಸದ್ಯ ಚಾಲ್ತಿಯಲ್ಲಿರುವ ವಿಶ್ವ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಲಂಕಾ, 2017ರ ಬಳಿಕ ಮೊದಲ ಬಾರಿಗೆ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. 2 ಪಂದ್ಯಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ (ಮಾ.4)ದಿಂದ ಆರಂಭಗೊಳ್ಳಲಿದ್ದು, ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಎ) ಮೈದಾನ ಆತಿಥ್ಯ ವಹಿಸಲಿದೆ. ಒಂದರ ಹಿಂದೆ ಒಂದು ಟಿ20 ಸರಣಿಗಳನ್ನು ಆಡುತ್ತಿರುವ ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ ಕೆಲ ಪ್ರಮುಖ ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಜೀವ ತುಂಬಿದ ವಿರಾಟ್ ಕೊಹ್ಲಿ ಅವರ 100 ಟೆಸ್ಟ್ ಪಂದ್ಯ, ರೋಹಿತ್ ಶರ್ಮಾ ಅವರಿಗೆ ನಾಯಕನಾಗಿ ಮೊದಲ ಪಂದ್ಯ ಎನಿಸಿದೆ.
ಆಯ್ಕೆ ಗೊಂದಲ: ಆರಂಭಿಕ 8 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಕಾಯಂ ಆಟಗಾರರಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅಶ್ವಿನ್ ಆಡಲು ಫಿಟ್ ಇದ್ದಾರೆ ಎಂದು ಉಪನಾಯಕ ಬೂಮ್ರಾ ಖಚಿಪಡಿಸಿದ್ದಾರೆ. ಆದರೆ ನಾಯಕನಾಗಿ ಮೊದಲ ಪಂದ್ಯದಲ್ಲೇ ರೋಹಿತ್‌ಗೆ ಕೆಲ ಆಯ್ಕೆ ತಲೆಬಿಸಿ ಎದುರಾಗುವ ಸಾಧ್ಯತೆ ಇದೆ. ತಂಡದಿಂದ ಹೊರಬಿದ್ದಿರುವ ಪೂಜಾರ ಹಾಗೂ ರಹಾನೆ ಸ್ಥಾನಕ್ಕೆ ಮೂರು ಆಟಗಾರರ ನಡುವೆ ಪೈಪೋಟಿ ಇದೆ. ಶ್ರೇಯಸ್ ಅಯ್ಯರ್, ಶುಭ್‌ಮನ್ ಗಿಲ್ ಹಾಗೂ ಹನುಮ ವಿಹಾರಿ ಪೈಕಿ ಇಬ್ಬರನ್ನು ಆಯ್ಕೆ ಮಾಡಬೇಕಿದೆ. ಇಬ್ಬರು ವೇಗಿಗಳ ಪೈಕಿ ಒಬ್ಬರು ಬೂಮ್ರಾ. ಮತ್ತೊಬ್ಬ ವೇಗಿ ಸ್ಥಾನಕ್ಕೆ ಮೊಹಮದ್ ಶಮಿ, ಮೊಹಮದ್ ಸಿರಾಜ್ ಹಾಗೂ ಉಮೇಶ್ ಯಾದವ್ ನಡುವೆ ಪೈಪೋಟಿ ಇದೆ. ಜಡೇಜಾ ಹಾಗೂ ಅಶ್ವಿನ್ ಒಟ್ಟಿಗೆ ದಾಳಿಗಿಳಿಯಲಿದ್ದು, ಇನ್ನೊಬ್ಬ ಸ್ಪಿನ್ನರ್ ಜಾಗಕ್ಕೆ ಜಯಂತ್ ಯಾದವ್, ಕುಲ್ದೀಪ್ ಯಾದವ್ ಹಾಗೂ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿರುವ ಸೌರಭ್ ಕುಮಾರ್ ಪೈಕಿ ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ಕುತೂಹಲ ಇದೆ. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡುವ ಸಾಮರ್ಥ್ಯವಿರುವ ಜಯಂತ್‌ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚು.
ಎಂಬುಲ್ಡೆನಿಯಾ ಮೇಲೆ ನಿರೀಕ್ಷೆ: ಮತ್ತೊಂದೆಡೆ ಕೇವಲ 13 ಟೆಸ್ಟ್‌ಗಳಲ್ಲಿ 5 ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ ಮೇಲೆ ಶ್ರೀಲಂಕಾ ಹೆಚ್ಚಿನ ನಿರೀಕ್ಷೆ ಇರಿಸಿದೆ. ಭಾರತದ ಅಗ್ರ 8 ಬ್ಯಾಟರ್‌ಗಳ ಪೈಕಿ 6 ಮಂದಿ ಬಲಗೈ ಬ್ಯಾಟರ್‌ಗಳಾಗಿರುವ ಕಾರಣ ಮತ್ತೊಬ್ಬ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಅವರನ್ನೂ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 63ರ ಸರಾಸರಿ ಹೊಂದಿರುವ ಪಥುಮ್ ನಿಸ್ಸಾಂಕ, ನಾಯಕ ದಿಮುತ್ ಕರುಣರತ್ನೆ ತಂಡದ ಬ್ಯಾಟಿಂಗ್ ತಾರೆಯರು ಎನಿಸಿದ್ದಾರೆ. ವೇಗದ ಬೌಲಿಂಗ್ ಪಡೆಯನ್ನು ಅನುಭವಿ ಸುರಂಗ ಲಕ್ಮಲ್ ಮುನ್ನಡೆಸಲಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಮಯಾಂಕ್, ಗಿಲ್/ವಿಹಾರಿ/ಶ್ರೇಯಸ್, ಕೊಹ್ಲಿ, ಗಿಲ್/ವಿಹಾರಿ/ಶ್ರೇಯಸ್, ಪಂತ್, ಜಡೇಜಾ, ಅಶ್ವಿನ್, ಜಯಂತ್/ಕುಲ್ದೀಪ್/ಸೌರಭ್, ಸಿರಾಜ್/ಶಮಿ/ಉಮೇಶ್, ಬೂಮ್ರಾ.
ಲಂಕಾ: ಕರುಣರತ್ನೆ(ನಾಯಕ), ತಿರಿಮನ್ನೆ, ನಿಸ್ಸಾಂಕ, ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಾಂಡಿಮಲ್/ಅಸಲಂಕ, ಡಿಕ್‌ವೆಲ್ಲಾ, ಲಕ್ಮಲ್, ಎಂಬುಲ್ಡೆನಿಯಾ, ಜಯವಿಕ್ರಮ/ವಿಶ್ವ ಫರ್ನಾಂಡೋ, ಲಹಿರು ಕುಮಾರ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ಮೊಹಾಲಿ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವುದು ಖಚಿತ. ಆದರೆ ಮೊದಲನೇ ದಿನವೇ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆಯೇ ಇಲ್ಲವೇ 3ನೇ ಅಥವಾ 4ನೇ ದಿನದಿಂದ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಲಿದೆಯೇ ಎನ್ನುವುದನ್ನು ಹೇಳುವುದು ಕಷ್ಟಎಂದು ನಾಯಕ ರೋಹಿತ್ ತಿಳಿಸಿದ್ದಾರೆ. ಒಣ ಪಿಚ್ ಆಗಿರುವ ಕಾರಣ ರನ್ ಗಳಿಸಲು ಬ್ಯಾಟರ್‌ಗಳಿಗೂ ಅನುಕೂಲವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.