ವಿಜಯ್‌ ಹಜಾರೆ ಟ್ರೋಫಿ: ಇಂದು ಕರ್ನಾಟಕ vs ಹರ್‍ಯಾಣ ಸೆಮೀಸ್ ಕದನ

ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ಮತ್ತು ಹರ್ಯಾಣ ತಂಡಗಳು ಮುಖಾಮುಖಿಯಾಗಲಿವೆ. ಕರ್ನಾಟಕ 5ನೇ ಬಾರಿ ಫೈನಲ್‌ ಪ್ರವೇಶಿಸುವ ಗುರಿ ಹೊಂದಿದ್ದರೆ, ಹಾಲಿ ಚಾಂಪಿಯನ್ ಹರ್ಯಾಣ ಸತತ 2ನೇ ಫೈನಲ್‌ಗೆ ಲಗ್ಗೆಯಿಡುವ ತವಕದಲ್ಲಿದೆ.


ವಡೋದರಾ: ಈ ಬಾರಿ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಸೆಮಿಫೈನಲ್‌ ಹಣಾಹಣಿಗೆ ಅಖಾಢ ಸಿದ್ಧವಾಗಿದೆ. ಬುಧವಾರ ಮೊದಲ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಹರ್ಯಾಣ ಸವಾಲು ಎದುರಾಗಲಿದೆ. ಕರ್ನಾಟಕ ತಂಡ 5ನೇ ಬಾರಿ ಫೈನಲ್‌ಗೇರುವ ಕಾತರದಲ್ಲಿದ್ದರೆ, ಹಾಲಿ ಚಾಂಪಿಯನ್‌ ಹರ್ಯಾಣ ಸತತ 2ನೇ ಫೈನಲ್‌ ಮೇಲೆ ಕಣ್ಣಿಟ್ಟಿದೆ. ಮತ್ತೊಂದು ಸೆಮಿಫೈನಲ್‌ ಪಂದ್ಯ ಗುರುವಾರ ವಿದರ್ಭ ಹಾಗೂ ಮಹಾರಾಷ್ಟ್ರ ನಡುವೆ ನಡೆಯಲಿದೆ.

ಕರ್ನಾಟಕ ಹಾಗೂ ಹರ್ಯಾಣ ಗುಂಪು ಹಂತದಲ್ಲಿ ತಲಾ 6 ಪಂದ್ಯಗಳಲ್ಲಿ ಗೆದ್ದಿದ್ದವು. ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದ್ದ ರಾಜ್ಯ ತಂಡ ಬರೋಡಾವನ್ನು ಸೋಲಿಸಿ ಸೆಮಿಫೈನಲ್‌ಗೇರಿದೆ. ಅತ್ತ ಹರ್ಯಾಣ ಪ್ರಿ ಕ್ವಾರ್ಟರ್‌ನಲ್ಲಿ ಬೆಂಗಾಲ್‌, ಕ್ವಾರ್ಟರ್‌ನಲ್ಲಿ ಗುಜರಾತ್‌ ವಿರುದ್ಧ ಗೆದ್ದು ಅಂತಿಮ 4ರ ಘಟ್ಟ ಪ್ರವೇಶಿಸಿದೆ.

Latest Videos

ಅಮೋಘ ಆಟ: ಕರ್ನಾಟಕ ಈ ಬಾರಿ ಅಭೂತಪೂರ್ವ ಆಟ ಪ್ರದರ್ಶಿಸಿದ್ದು, ಬ್ಯಾಟರ್‌ಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಲು ಎದುರು ನೋಡುತ್ತಿರುವ ರಾಜ್ಯ ತಂಡದ ನಾಯಕ ಮಯಾಂಕ್‌ ಅಗರ್‌ವಾಲ್‌ 8 ಇನ್ನಿಂಗ್ಸ್‌ಗಳಲ್ಲಿ 4 ಶತಕ ಸೇರಿ 619 ರನ್‌ ಕಲೆಹಾಕಿದ್ದಾರೆ. ಅನೀಶ್‌ ಕೆ.ವಿ.(342), ಸ್ಮರಣ್‌(256) ತಂಡಕ್ಕೆ ಕೆಲ ಪಂದ್ಯಗಳಲ್ಲಿ ನೆರವಾದ ಮತ್ತಿಬ್ಬರು ಆಟಗಾರರು. ಆಸ್ಟ್ರೇಲಿಯಾ ಸರಣಿ ಮುಗಿಸಿ ವಿಜಯ್‌ ಹಜಾರೆಗೆ ಮರಳಿದ ದೇವದತ್‌ ಪಡಿಕ್ಕಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಶತಕ ಸಿಡಿಸಿದ್ದು, ಅವರಿಂದ ತಂಡ ಮತ್ತೊಂದು ಅಮೋಘ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ.

IPL 2025 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್ ಶ್ರೇಯಸ್‌ ಗೋಪಾಲ್‌, ವೇಗಿ ವಾಸುಕಿ ಕೌಶಿಕ್‌ ಹಾಗೂ ಪ್ರಸಿದ್ಧ್‌ ಕೃಷ್ಣ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಅವರಿಗೆ ಇತರ ಯುವ ವೇಗಿಗಳಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ಮತ್ತೊಂದೆಡೆ ಅಂಕಿತ್‌ ಕುಮಾರ್ ನಾಯಕತ್ವದ ಹರ್ಯಾಣ ಈ ಬಾರಿ ಟೂರ್ನಿಯಲ್ಲೂ ತನ್ನ ಅಮೋಘ ಆಟ ಪ್ರದರ್ಶಿಸುತ್ತಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ತಂಡ ಈ ಸಲ ಕರ್ನಾಟಕಕ್ಕೆ ಸುಲಭ ತುತ್ತಾಗುವ ಸಾಧ್ಯತೆಯಿಲ್ಲ. ಹೀಗಾಗಿ ರಾಜ್ಯ ತಂಡ ಎಲ್ಲಾ ವಿಭಾಗದಲ್ಲೂ ಮಿಂಚಬೇಕಿದೆ.

ಸಚಿನ್ ತೆಂಡೂಲ್ಕರ್ ಜತೆಗೆ ಈ 4 ರೆಕಾರ್ಡ್ಸ್ ಅಜರಾಮರ; ಈ ದಾಖಲೆ ಮುರಿಯೋದು ಅಸಾಧ್ಯ!

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ

ರಾಜ್ಯಕ್ಕೆ 5 ವರ್ಷ ಬಳಿಕ ಫೈನಲ್‌ಗೇರುವ ತವಕ

ಕರ್ನಾಟಕ ತಂಡ 2013-14, 2014-15, 2017-18 ಹಾಗೂ 2019-20ರಲ್ಲಿ ಫೈನಲ್‌ಗೇರಿ ಟ್ರೋಫಿ ಗೆದ್ದಿದೆ. ಆ ಬಳಿಕ ತಂಡ ಒಮ್ಮೆಯೂ ಪ್ರಶಸ್ತಿ ಸುತ್ತಿಗೇರಿಲ್ಲ. 5 ವರ್ಷಗಳ ಬಳಿಕ ಮತ್ತೆ ತಂಡ ಫೈನಲ್‌ ಪ್ರವೇಶಿಸುವ ತವಕದಲ್ಲಿದೆ. ಅತ್ತ ಹರ್ಯಾಣ ಕಳೆದ ಬಾರಿ ಮಾತ್ರ ಫೈನಲ್‌ಗೇರಿದ್ದು, ಮತ್ತೊಂದು ಪ್ರಶಸ್ತಿ ಸುತ್ತಿನ ಹಣಾಹಣಿಗೆ ಕಾತರಿಸುತ್ತಿದೆ.

05ನೇ ಪಂದ್ಯ: ಕರ್ನಾಟಕ-ಹರ್ಯಾಣ ನಡುವೆ ಇದು 5ನೇ ಏಕದಿನ. ಈ ವರೆಗಿನ 4ರಲ್ಲಿ ರಾಜ್ಯ ತಂಡ 3ರಲ್ಲಿ ಗೆದ್ದಿದೆ.

click me!