
ಕೋಲ್ಕತಾ(ನ.18): ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿ, ಎಲೈಟ್ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ ರಾಜ್ಯ ತಂಡಕ್ಕೆ 4 ವಿಕೆಟ್ ಜಯ ಒಲಿಯಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 45.4 ಓವರಲ್ಲಿ 159 ರನ್‌ಗೆ ಆಲೌಟ್ ಆಯಿತು. ವೇಗಿ ವಾಸುಕಿ ಕೌಶಿಕ್ 10 ಓವರಲ್ಲಿ 23 ರನ್‌ಗೆ 3 ವಿಕೆಟ್ ಕಿತ್ತರು. ಸ್ಪಿನ್ನರ್ ಶ್ರೇಯಸ್ ಗೋಪಾಲ್ 25 ರನ್‌ಗೆ 3 ವಿಕೆಟ್ ಪಡೆದರು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರ್.ಸಮಥ್‌ರ್ ಆಸರೆಯಾದರು. 73 ಎಸೆತಗಳಲ್ಲಿ 59 ರನ್ ಗಳಿಸಿದರು. ಮನೀಶ್ ಪಾಂಡೆ 4 ಸಿಕ್ಸರ್‌ನೊಂದಿಗೆ 37 ಎಸೆತದಲ್ಲಿ 48 ರನ್ ಸಿಡಿಸಿ ತಂಡ 29.4 ಓವರಲ್ಲಿ ಗುರಿ ತಲುಪಲು ನೆರವಾದರು.
ಸ್ಕೋರ್:
ದೆಹಲಿ 45.4 ಓವರಲ್ಲಿ 159/10(ಲಲಿತ್ 59, ನಿತೀಶ್ 30, ಕೌಶಿಕ್ 3-23, ಶ್ರೇಯಸ್ 3-25)
ಕರ್ನಾಟಕ 29.4 ಓವರಲ್ಲಿ 161/6(ಸಮಥ್‌ರ್ 59, ಪಾಂಡೆ 48, ಮಯಾಂಕ್ ಯಾದವ್ 4-47)
ಏಕದಿನ: ಇಂಗ್ಲೆಂಡ್ ವಿರುದ್ಧ ಗೆದ್ದ ಆಸೀಸ್
ಅಡಿಲೇಡ್: ಆಸ್ಪ್ರೇಲಿಯಾ ಏಕದಿನ ತಂಡದ ನಾಯಕನಾಗಿ ನೇಮಕಗೊಂಡ ಬಳಿಕ ಮೊದಲ ಪಂದ್ಯದಲ್ಲೇ ಪ್ಯಾಟ್ ಕಮಿನ್ಸ್ ಯಶಸ್ಸು ಕಂಡಿದ್ದಾರೆ. ಕಳೆದ ವಾರವಷ್ಟೇ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾ 6 ವಿಕೆಟ್‌ಗಳ ಗೆಲುವು ಸಾಧಿಸಿತು.
Ind vs NZ ಹಾರ್ದಿಕ್ ಪಾಂಡ್ಯ ನಾಯಕತ್ವ ಕೊಂಡಾಡಿದ ವಿವಿಎಸ್ ಲಕ್ಷ್ಮಣ್
ಗುರುವಾರದ ಪಂದ್ಯದಲ್ಲಿ ಮೊದಲು ಫೀಲ್ಡ್ ಮಾಡಿದ ಆಸ್ಪ್ರೇಲಿಯಾ, ಡೇವಿಡ್ ಮಲಾನ್(134)ರ ಶತಕದ ಹೊರತಾಗಿಯೂ ಇಂಗ್ಲೆಂಡನ್ನು 9 ವಿಕೆಟ್‌ಗೆ 287 ರನ್‌ಗಳಿಗೆ ನಿಯಂತ್ರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸೀಸ್‌ಗೆ ಡೇವಿಡ್ ವಾರ್ನರ್(86) ಹಾಗೂ ಟ್ರಾವಿಸ್ ಹೆಡ್(69) ಮೊದಲ ವಿಕೆಟ್‌ಗೆ 147 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು. ಸ್ಟೀವ್ ಸ್ಮಿತ್ ಔಟಾಗದೆ 80 ರನ್ ಗಳಿಸಿ, 46.5 ಓವರಲ್ಲಿ ತಂಡವನ್ನು ಗೆಲ್ಲಿಸಿದರು.
ಲೈಂಗಿಕ ಕಿರುಕುಳ ಕೇಸ್: ಗುಣತಿಲಕಗೆ ಜಾಮೀನು
ಸಿಡ್ನಿ: ಟಿ20 ವಿಶ್ವಕಪ್ ವೇಳೆ ಸ್ಥಳೀಯ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾಗಿದ್ದ ಶ್ರೀಲಂಕಾ ಕ್ರಿಕೆಟಿಗ ಧನುಷ್ಕ ಗುಣತಿಲಕಗೆ ಗುರುವಾರ ಸಿಡ್ನಿ ನ್ಯಾಯಾಲಯ ಜಾಮೀನು ನೀಡಿದೆ. ಆದರೆ ಗುಣತಿಲಕ ಮುಂದಿನ ಆದೇಶದ ವರೆಗೂ ಆಸ್ಪ್ರೇಲಿಯಾದಲ್ಲೇ ಉಳಿಯಬೇಕಿದೆ. 1.5 ಲಕ್ಷ ಆಸ್ಪ್ರೇಲಿಯನ್ ಡಾಲರ್(ಅಂದಾಜು 81.75 ಲಕ್ಷ ರು.) ಶೂರಿಟಿ, ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೂ ಹೊರ ಹೋಗುವಂತಿಲ್ಲ, ಪಾಸ್‌ಪೋರ್ಚ್ ಹಸ್ತಾಂತರಿಸಬೇಕು, ನಿತ್ಯ 2 ಬಾರಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು, ಸಾಮಾಜಿಕ ತಾಣಗಳು, ಡೇಟಿಂಗ್ ಆ್ಯಪ್‌ಗಳನ್ನು ಬಳಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.