
ಬೆಂಗಳೂರು(ಅ.16): 2019-20ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಪ್ರಚಂಡ ಲಯದಲ್ಲಿರುವ ಕರ್ನಾಟಕ ತಂಡ, ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಬುಧವಾರ ಇಲ್ಲಿನ ಆಲೂರು ಮೈದಾನದಲ್ಲಿ ನಡೆಯಲಿರುವ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದ್ದು, ಗೆಲುವಿನೊಂದಿಗೆ ನಾಕೌಟ್ ಹಂತಕ್ಕೆ ಕಾಲಿಡಲು ರಾಜ್ಯ ತಂಡ ಎದುರು ನೋಡುತ್ತಿದೆ.
ಇದನ್ನೂ ಓದಿ: ವಿಜಯ್ ಹಜಾರೆ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ!
ಕರ್ನಾಟಕ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 24 ಅಂಕಗಳನ್ನು ಹೊಂದಿರುವ ಕರ್ನಾಟಕ, ಈ ಪಂದ್ಯದಲ್ಲಿ ಸೋಲುಂಡರೂ ಅಗ್ರಸ್ಥಾನದಲ್ಲೇ ಉಳಿದುಕೊಳ್ಳುವುದು ಬಹುತೇಕ ಖಚಿತ ಎನಿಸಿದೆ. ಆದರೆ ತಂಡ ಸದ್ಯ ಇರುವ ಲಯ ನೋಡಿದರೆ ಸೋಲುವ ಸಾಧ್ಯತೆ ಕಡಿಮೆ. ಗೋವಾ ತಂಡ 7 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು ಈಗಾಗಲೇ ನಾಕೌಟ್ ರೇಸ್‌ನಿಂದ ಹೊರಬಿದ್ದಿದೆ. ಕರ್ನಾಟಕ ತಂಡ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಕ್ವಾರ್ಟರ್ ಫೈನಲ್‌ಗೂ ಮೊದಲು ಉತ್ತಮ ಅಭ್ಯಾಸ ನಡೆಸಲು ಕಾತರಗೊಂಡಿದೆ.
ಇದನ್ನೂ ಓದಿ: ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!
ಬ್ಯಾಟ್ಸ್‌ಮನ್‌ಗಳ ಮೇಲೆ ನಿರೀಕ್ಷೆ: ಮನೀಶ್ ಪಾಂಡೆ (471 ರನ್), ಕೆ.ಎಲ್.ರಾಹುಲ್ (359 ರನ್), ದೇವದತ್್ತ ಪಡಿಕ್ಕಲ್ (354 ರನ್) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಈ ಮೂವರನ್ನು ಹೊರತುಪಡಿಸಿ ಟೂರ್ನಿಯಲ್ಲಿ ಒಟ್ಟು 100ಕ್ಕಿಂತ ಹೆಚ್ಚು ರನ್ ಕಲೆಹಾಕಿರುವ ಆಟಗಾರ ವಿಕೆಟ್ ಕೀಪರ್ ಬಿ.ಆರ್.ಶರತ್ (102 ರನ್). ಹೀಗಾಗಿ, ನಾಕೌಟ್‌ಗೂ ಮೊದಲು ತಂಡದ ಇತರ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಳ್ಳುವ ಅವಶ್ಯಕತೆ ಇದೆ. ಪವನ್ ದೇಶಪಾಂಡೆ, ಕರುಣ್ ನಾಯರ್, ಕೆ.ವಿ.ಸಿದ್ಧಾಥ್ರ್ , ಆಲ್ರರೌಂಡರ್ ಕೆ.ಗೌತಮ್ ಮೇಲೆ ಹೆಚ್ಚಿನ ಒತ್ತಡವಿದೆ.
ಇದನ್ನೂ ಓದಿ: ಕುಡ್ಲದ ಕುವರಿಗೆ ಮನೀಶ್ ಪಾಂಡೆ ಕ್ಲೀನ್ ಬೋಲ್ಡ್!.
ಪ್ರಸಿದ್‌್ಧ ಯಶಸ್ವಿ ಬೌಲಿಂಗ್: ಯುವ ವೇಗದ ಬೌಲರ್ ಪ್ರಸಿದ್‌್ಧ ಕೃಷ್ಣ ಈ ಟೂರ್ನಿಯಲ್ಲಿ ರಾಜ್ಯದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. 7 ಪಂದ್ಯಗಳಲ್ಲಿ ಅವರು 16 ವಿಕೆಟ್ ಕಬಳಿಸಿದ್ದು, ಕೇವಲ 4.02ರ ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ (13 ವಿಕೆಟ್) ಹಾಗೂ ಕೆ.ಗೌತಮ್ (11 ವಿಕೆಟ್) ಉತ್ತಮ ಪ್ರದರ್ಶನ ನೀಡಿದ್ದು, ಲಯ ಕಾಪಾಡಿಕೊಳ್ಳಬೇಕಿದೆ. ಅನುಭವಿ ವೇಗಿಗಳಾದ ಅಭಿಮನ್ಯು ಮಿಥುನ್ (9 ವಿಕೆಟ್) ಹಾಗೂ ರೋನಿತ್ ಮೋರೆ (10 ವಿಕೆಟ್) ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಮತ್ತೊಂದೆಡೆ ಗೋವಾ ಹೀನಾಯ ಪ್ರದರ್ಶನ ತೋರಿದೆ. ದೆಹಲಿ ಮೂಲದ ಆದಿತ್ಯ ಕೌಶಿಕ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್ 200ಕ್ಕಿಂತ ಹೆಚ್ಚು ರನ್ ಕಲೆಹಾಕಿಲ್ಲ. ಯಾವೊಬ್ಬ ಬೌಲರ್ ಸಹ 10 ವಿಕೆಟ್ ಕಬಳಿಸಿಲ್ಲ. ‘ಎ’ ಹಾಗೂ ‘ಬಿ’ ಗುಂಪಿನ ಒಟ್ಟು ಅಂಕಪಟ್ಟಿಯಲ್ಲಿ 17ನೇ ಸ್ಥಾನದಲ್ಲಿರುವ ಗೋವಾ ತಂಡ, ಮುಂದಿನ ಆವೃತ್ತಿಗೆ ‘ಸಿ’ ಗುಂಪಿಗೆ ಹಿಂಬಡ್ತಿ ಪಡೆಯಲಿದೆ.
ಸ್ಥಿರ ಹಾಗೂ ಸಾಂಘಿಕ ಪ್ರದರ್ಶನದೊಂದಿಗೆ ಕರ್ನಾಟಕ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಸದ್ಯದ ಮಟ್ಟಿಗೆ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದ್ದು, ಲೀಗ್ ಹಂತದಲ್ಲಿ ತೋರಿದ ಪ್ರದರ್ಶನವನ್ನೇ ನಾಕೌಟ್ ಹಂತದಲ್ಲೂ ತೋರಬೇಕಿದೆ. ಅದಕ್ಕಿಂತ ಮೊದಲು ಲೀಗ್ ಹಂತವನ್ನು ಭರ್ಜರಿಯಾಗಿ ಮುಕ್ತಾಯಗೊಳಿಸಲು ಮನೀಶ್ ಪಾಂಡೆ ಪಡೆ ಎದುರು ನೋಡುತ್ತಿದೆ.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.