2019-20ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಮತ್ತೊಂದು ದ್ವಿಶತಕ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಡಬಲ್ ಸೆಂಚುರಿ ಬಾರಿಸಿದ್ದರು. ಇದೀಗ ಅಂಡರ್-19 ಕ್ರಿಕೆಟರ್, ಮುಂಬೈ ಯುವ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ದಾಖಲೆಯ ದ್ವಿಶತಕ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಅ.16]: ಒಂದು ಕಾಲದಲ್ಲಿ ಜೀವನ ನಿರ್ವಹಣೆಗಾಗಿ ತಂದೆಯ ಜತೆ ಪಾನಿಪೂರಿ ಮಾರುತ್ತಿದ್ದ ಹುಡುಗ, ಇದೀಗ ಮತ್ತೊಮ್ಮೆ ಕ್ರಿಕೆಟ್ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಬಾರಿಸುವುದರೊಂದಿಗೆ ಅಪರೂಪದ ದಾಖಲೆ ಬರೆದಿದ್ದಾರೆ.
ಏಷ್ಯಾಕಪ್‌ನಲ್ಲಿ ಸರಣಿ ಶ್ರೇಷ್ಠ-ಪಾನಿಪೂರಿ ಹುಡುಗ ಜೈಸ್ವಾಲ್ ಯಶೋಗಾಥೆ
ಹೌದು, 17 ವರ್ಷದ ಮುಂಬೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 203 ರನ್ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಅತಿ ಕಿರಿಯ ಕ್ರಿಕೆಟಿಗ(17 ವರ್ಷ 292 ದಿನ) ಎನ್ನುವ ದಾಖಲೆಗೆ ಜೈಸ್ವಾಲ್ ಭಾಜನರಾಗಿದ್ದಾರೆ. 154 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 17 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಚೊಚ್ಚಲ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು.
ತೆಂಡುಲ್ಕರ್ ಬ್ಯಾಟ್‌ನಿಂದ ಟೀಂ ಇಂಡಿಯಾ ಗೆಲ್ಲಿಸಿದ ಪಾನಿಪೂರಿ ಹುಡುಗ!
ಇಲ್ಲಿನ ಆಲೂರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್’ನ ಬಲಿಷ್ಠ ಬೌಲಿಂಗ್ ಪಡೆ ಯಶಸ್ವಿ ಜೈಸ್ವಾಲ್’ಗೆ ಸವಾಲಾಗಲೇ ಇಲ್ಲ. ವರುಣ್ ಆ್ಯರೋನ್, ಅಂಕುಲ್ ರಾಯ್, ಶಾಬಾಜ್ ನದೀಮ್ ಅವರಂತಹ ಬೌಲರ್’ಗಳೆದುರು ನಿರ್ಭಯವಾಗಿ ಜೈಸ್ವಾಲ್ ಬ್ಯಾಟ್ ಬೀಸಿದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಹಾಗೂ ಕೆ.ವಿ ಕೌಶಲ್ ಬಳಿಕ ದ್ವಿಶತಕ ಸಿಡಿಸಿದ ಮೂರನೇ ಕ್ರಿಕೆಟಿಗ ಎನ್ನುವ ಕೀರ್ತಿಗೂ ಜೈಸ್ವಾಲ್ ಪಾತ್ರರಾಗಿದ್ದಾರೆ.
ಎಡಗೈ ಬ್ಯಾಟ್ಸ್’ಮನ್ ಜೈಸ್ವಾಲ್ ದ್ವಿಶತಕ ಸಿಡಿಸಿದ ಬೆನ್ನಲ್ಲೇ ಕೊನೆಯ ಓವರ್’ನಲ್ಲಿ ವಿವೇಕ್ ತಿವಾರಿಗೆ ವಿಕೆಟ್ ಒಪ್ಪಿಸಿದರು. ಜೈಸ್ವಾಲ್ ದ್ವಿಶತಕದ ನೆರವಿನಿಂದ ಮುಂಬೈ ತಂಡ ನಿಗದಿತ 50 ಓವರ್’ನಲ್ಲಿ 3 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿದೆ.
2018ರಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವುದರೊಂದಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿದ್ದು ಟೀಂ ಇಂಡಿಯಾ ಕದತಟ್ಟಲು ಸಜ್ಜಾಗಿದ್ದಾರೆ.