
ಬೆಂಗಳೂರು: ಐಪಿಎಲ್‌ನಲ್ಲಿ ಕರ್ನಾಟಕದ ಸ್ಥಳೀಯ ಆಟಗಾರರಿಗೆ ಮಣೆ ಹಾಕದ ಆರ್‌ಸಿಬಿ ವಿರುದ್ಧ ತಂಡದ ಮಾಜಿ ಕೋಚ್, ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದಾರೆ.
ಈ ಬಗ್ಗೆ ಜಿಯೋಹಾಟ್‌ಸ್ಟಾರ್ ಜೊತೆ ಮಾತನಾಡಿರುವ ಕರ್ನಾಟಕದ ವೆಂಕಟೇಶ್, ‘ ಬೇರೆಲ್ಲಾ ತಂಡಗಳು ಸ್ಥಳೀಯ ಆಟಗಾರರಿಗೆ ಮಣೆ ಹಾಕುವಾಗ ಆರ್‌ಸಿಬಿಗೆ ಯಾಕೆ ಸಾಧ್ಯವಿಲ್ಲ?. ಆರ್‌ಸಿಬಿಗೆ ನಿಜಕ್ಕೂ ಕಪ್ ಗೆಲ್ಲುವ ಗುರಿ ಇದೆಯಾ ಎಂದು ಪ್ರಶ್ನೆ ಅಥವಾ ಬ್ರ್ಯಾಂಡ್ ಸೃಷ್ಟಿಸುವುದೇ ಉದ್ದೇಶವಾ? ಆರ್‌ಸಿಬಿ ಸ್ಥಳೀಯ ಶ್ರೇಷ್ಠ ಆಟಗಾರರನ್ನು ಗುರುತಿಸಿ ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ. ಸದ್ಯ ಆರ್‌ಸಿಬಿಯಲ್ಲಿ ದೇವದತ್ ಪಡಿಕ್ಕಲ್, ಮನೋಜ್ ಭಾಂಡಗೆ ಮಾತ್ರ ರಾಜ್ಯದವರು. ಮನೋಜ್ 2023ರಲ್ಲೇ ತಂಡ ಸೇರ್ಪಡೆಗೊಂಡಿದ್ದರೂ, ಈ ವರೆಗೂ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.
ಇದನ್ನೂ ಓದಿ: ಕೊಹ್ಲಿ ಐಪಿಎಲ್‌ಗೆ ಗುಡ್ ಬೈ ಹೇಳ್ತಾರಾ? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಗೆಳೆಯ ಎಬಿ ಡಿವಿಲಿಯರ್ಸ್!
ಕಳೆದ 17 ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದುವರೆಗೂ ಐಪಿಎಲ್ ಟೂರ್ನಿಯಲ್ಲಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ. 2009, 2011 ಹಾಗೂ 2016ರಲ್ಲಿ ಫೈನಲ್‌ಗೇರಿದ್ದೇ ಆರ್‌ಸಿಬಿ ತಂಡದ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಆರಂಭದಲ್ಲಿ ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ಆಟಗಾರರು ಇರುತ್ತಿದ್ದರು, ಈ ಕಾರಣಕ್ಕಾಗಿಯೇ ಕರ್ನಾಟಕದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿಗೆ ಆರ್‌ಸಿಬಿ ತಂಡದಲ್ಲಿ ನಾಮಕಾವಸ್ಥೆಗೆ ಕರ್ನಾಟಕದ ಆಟಗಾರರು ಇದ್ದಾರೆ ಎನ್ನುವಂತಹ ಕೂಗು ಕೇಳಿ ಬರಲಾರಂಭಿಸಿದೆ.
ಈ ಸಲವಾದ್ರೂ ಕಪ್ ಗೆಲ್ಲುತ್ತಾ ಆರ್‌ಸಿಬಿ?
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ ಸಮತೋಲಿತ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಇದೀಗ ಬೆಂಗಳೂರು ಫ್ರಾಂಚೈಸಿಯು ತನ್ನ ತಂಡದ ನಾಯಕರನ್ನಾಗಿ ರಜತ್ ಪಾಟೀದಾರ್ ಅವರನ್ನು ನೇಮಿಸಿಕೊಂಡಿದೆ. ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜೋಶ್ ಹೇಜಲ್‌ವುಡ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ಬಲ ತಂಡಕ್ಕಿದೆ. ಇದರ ಜತೆಗೆ ದೇಶಿ ಪ್ರತಿಭೆಗಳಾದ ರಜತ್ ಪಾಟೀದಾರ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಅವರಂತಹ ಆಟಗಾರರು ಪಂದ್ಯದ ದಿಕ್ಕು ಬದಲಿಸುವ ಕ್ಷಮತೆ ಹೊಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2025: ಕ್ರೀಡಾಪಟುಗಳಿಗೆ ಬಂಪರ್ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ!
ಆರ್‌ಸಿಬಿ ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 2025ರ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 22ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ. ಈ ಸಲವಾದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಗೆಲ್ಲುವ ಮೂಲಕ ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳ ಕನಸನ್ನು ಈಡೇರಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.