
ನವದೆಹಲಿ: ಆಸ್ಟ್ರೇಲಿಯಾ ಅಂಡರ್-19 ತಂಡದ ಎದುರು ಭಾರತ ಅಂಡರ್-19 ತಂಡ ಪ್ರಕಟವಾಗಿದ್ದು, ಸ್ಪೋಟಕ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹೆಸರು ನಾಪತ್ತೆಯಾಗಿದೆ. ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿರುವ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ, ಆಸ್ಟ್ರೇಲಿಯಾ ವಿರುದ್ಧದ 15 ಸದಸ್ಯರ ಭಾರತ ಅಂಡರ್-19 ತಂಡದಲ್ಲಿ ಯಾಕಿಲ್ಲ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕಂದ್ರೆ, ಇದೇ ತಂಡದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಇಬ್ಬರೂ ಸ್ಥಾನ ಪಡೆದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಗಳ ಮೂಲಕ ಸೀನಿಯರ್ ತಂಡಕ್ಕೂ ಪಾದಾರ್ಪಣೆ ಮಾಡಿದ್ದರೂ, ವೈಭವ್‌ನನ್ನು ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಏಕದಿನ ಮತ್ತು ರೆಡ್-ಬಾಲ್ ತಂಡಗಳಿಗೆ ಆಯ್ಕೆ ಮಾಡಿಲ್ಲ. ಇದಕ್ಕೆ ಕಾರಣ ಬಿಸಿಸಿಐನ ಒಂದು ಸ್ಪೆಷಲ್ ರೂಲ್.
2016ರಲ್ಲಿ ಬಿಸಿಸಿಐ ಒಂದು ನಿಯಮ ಜಾರಿಗೆ ತಂತು. ಅದರ ಪ್ರಕಾರ, ಆಟಗಾರರು ಒಂದಕ್ಕಿಂತ ಹೆಚ್ಚು ಅಂಡರ್-19 ವಿಶ್ವಕಪ್‌ಗಳಲ್ಲಿ ಆಡುವಂತಿಲ್ಲ. ಇದೇ ನಿಯಮದಿಂದಾಗಿ ವಾಷಿಂಗ್ಟನ್ ಸುಂದರ್‌ಗೆ 2018ರ ಅಂಡರ್-19 ವಿಶ್ವಕಪ್ ಆಡಲು ಸಾಧ್ಯವಾಗಿರಲಿಲ್ಲ. ಆದರೆ, ಅದಕ್ಕೂ ಮೊದಲು ಸರ್ಫರಾಜ್ ಖಾನ್, ಸಂದೀಪ್ ಶರ್ಮಾ ಮತ್ತು ವಿಜಯ್ ಸೋಲ್ ಅವರಂತಹ ಆಟಗಾರರು ಒಂದಕ್ಕಿಂತ ಹೆಚ್ಚು ಬಾರಿ ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ವೈಭವ್ ಸೂರ್ಯವಂಶಿ ಈಗಾಗಲೇ 2026ರ ಅಂಡರ್-19 ವಿಶ್ವಕಪ್‌ನಲ್ಲಿ ಆಡಿರುವುದರಿಂದ, ಅವರಿಗೆ ಇನ್ನೊಂದು ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ, ಬಿಸಿಸಿಐನ ಅಂಡರ್-19 ತಂಡದ ಯೋಜನೆಗಳಲ್ಲಿ ವೈಭವ್ ಹೆಸರು ಇಲ್ಲ. ಆ 15 ವರ್ಷದ ಹುಡುಗ ಅಷ್ಟರಲ್ಲಾಗಲೇ ಅದನ್ನೂ ಮೀರಿ ಬೆಳೆದು ನಿಂತಿದ್ದಾನೆ!
ಸದ್ಯದಲ್ಲೇ ಅಧಿಕಾರಾವಧಿ ಮುಗಿಯಲಿರುವ ಜೂನಿಯರ್ ಪುರುಷರ ಆಯ್ಕೆ ಸಮಿತಿ, ಇತ್ತೀಚೆಗೆ ಈ ತವರು ಸರಣಿಗೆ ತಂಡಗಳನ್ನು ಪ್ರಕಟಿಸಿದೆ. ಈ ಸರಣಿಯಲ್ಲಿ ರಾಜ್‌ಕೋಟ್‌ನಲ್ಲಿ ಸೆಪ್ಟೆಂಬರ್ 18, 21 ಮತ್ತು 23ರಂದು ಮೂರು 50-ಓವರ್‌ಗಳ ಪಂದ್ಯಗಳು ನಡೆಯಲಿವೆ. ಇದರ ನಂತರ, ಸೆಪ್ಟೆಂಬರ್ 27-30ರವರೆಗೆ ರಾಜ್‌ಕೋಟ್‌ನಲ್ಲಿ ಮತ್ತು ಅಕ್ಟೋಬರ್ 5-8ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ 'ಬಿ' ಗ್ರೌಂಡ್‌ನಲ್ಲಿ ಎರಡು ರೆಡ್-ಬಾಲ್ (ಮಲ್ಟಿ-ಡೇ) ಪಂದ್ಯಗಳು ನಡೆಯಲಿವೆ. 50 ಓವರ್‌ಗಳ ತಂಡವನ್ನು ಉತ್ತರಾಖಂಡದ ಬ್ಯಾಟರ್ ಲಕ್ಷ್ಯ ರೈ ಚಂದಾನಿ ಮುನ್ನಡೆಸಲಿದ್ದಾರೆ. ಮಧ್ಯಪ್ರದೇಶದ ಆಟಗಾರ ಯಶ್‌ವರ್ಧನ್ ಚೌಹಾಣ್ ಉಪನಾಯಕರಾಗಿದ್ದಾರೆ. ರೆಡ್-ಬಾಲ್ ಪಂದ್ಯಗಳಲ್ಲಿ ಇವರ ಪಾತ್ರ ಅದಲು ಬದಲಾಗಲಿದೆ. ಚೌಹಾಣ್ ನಾಯಕರಾದರೆ, ರೈ ಚಂದಾನಿ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಏಕದಿನ ತಂಡದಲ್ಲಿ ಲೆಗ್-ಸ್ಪಿನ್ ಆಲ್‌ರೌಂಡರ್ ಆರ್ಯವೀರ್ ಸೆಹ್ವಾಗ್ ಮತ್ತು ವಿಕೆಟ್-ಕೀಪರ್ ಬ್ಯಾಟರ್ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಆದರೆ, ರೆಡ್-ಬಾಲ್ ಪಂದ್ಯಗಳ ತಂಡಕ್ಕೆ ಇವರಿಬ್ಬರಿಗೂ ಸೆಲೆಕ್ಷನ್ ಸಿಕ್ಕಿಲ್ಲ.
ಅಂಡರ್-19 ಏಕದಿನ ತಂಡ: ಲಕ್ಷ್ಯ ರಾಚಂದಾನಿ (ನಾಯಕ), ಯಶ್‌ಬರ್ಧನ್ ಚೌಹಾಣ್ (ಉಪನಾಯಕ), ರಜತ್ ಭಾಗೇಲ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶಾವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ್, ಕಾವ್ಯ ಪಟೇಲ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.