ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

By Suvarna NewsFirst Published Jan 15, 2020, 6:26 PM IST
Highlights

ನವದೀಪ್ ಸೈನಿ ಟೀಂ ಇಂಡಿಯಾದ ಭರವಸೆಯ ಯುವ ವೇಗಿ. ಸಪೂರ ಮೈಕಟ್ಟು, ನೀಳಕಾಯದ ಹರ್ಯಾಣ ವೇಗಿ ಆಡಿದ ಐದಾರು ಪಂದ್ಯಗಳಲ್ಲೇ ಇಡೀ ದೇಶದ ಗಮನವನ್ನೇ ತನ್ನತ್ತ ಸೆಳೆಯುವಲ್ಲಿ ಮಾಡಿದ್ದಾರೆ. ಅಷ್ಟಕ್ಕೂ ಯಾರು ಈ ಸೈನಿ? ಆತನ ಹಿನ್ನಲೆ ಏನು.? ಗಲ್ಲಿ ಕ್ರಿಕೆಟ್ ಆಡುತ್ತಿದ್ದಾತ ಟೀಂ ಇಂಡಿಯಾ ಮಾರಕ ವೇಗಿಯಾಗಿ ಬದಲಾಗಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

-ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಬೆಂಗಳೂರು[ಜ.15] ನವದೀಪ್ ಅಮರ್ ಜೀತ್ ಸೈನಿ. ಟೀಂ ಇಂಡಿಯಾದ ಸದ್ಯದ ಸೂಪರ್ ಫಾಸ್ಟ್ ಬೌಲರ್. 2013ಕ್ಕೆ‌ ಮುಂಚೆ ಜೀವನದಲ್ಲೇ‌ ಲೆದರ್ ಬಾಲ್‌ನಲ್ಲಿ ಆಡದವನು. ಈಗ ಕೊಹ್ಲಿ ಬಳಗದಲ್ಲಿ ಮಿಂಚಾಗಿ ಕಾಣುತ್ತಿದ್ದಾನೆ. ಹೌದು, ಆತ ನಿಜಕ್ಕೂ ಮಿಂಚೆ. ತನ್ನ‌ ಮುಂದಿನ ಜೀವನ ಮತ್ತು ಯಶಸ್ಸನ್ನ ಗೌತಮ್ ಗಂಭೀರ್ ಹೆಸರಿಗೆ ಬರೆದು ಬಿಡುತ್ತೇನೆ ಎಂದವನು ನವದೀಪ್ ಸೈನಿ. ಕಾರಣ ಇಷ್ಟೇ. ಹರ್ಯಾಣದ ಈ ಟೆನಿಸ್ ಬಾಲ್‌ ಕ್ರಿಕೆಟರ್‌ನನ್ನು ಅನಾಮತ್ತಾಗಿ ತಂದು, ಜಗಳ‌ ಮಾಡಿ ದೆಹಲಿ ತಂಡಕ್ಕೆ ಆಡಿಸಿದವನು ಗಂಭೀರ್.

ಒನ್ ಡೇ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟ ನವದೀಪ್ ಸೈನಿ

ಅದು 2013, ಟೆನಿಸ್ ಬಾಲ್‌ನಲ್ಲಿ ಹೇಳಿ ಹೇಳಿ ಯಾರ್ಕರ್ ಎಸೆದು, ಅವನು ವಿಕೆಟ್ ಕೆಡವುತ್ತಿದ್ದದ್ದನ್ನ ದೆಹಲಿಯ ಮಾಜಿ ಕ್ರಿಕೆಟಿಗ ಸುಮಿತ್ ನರ್ವಾಲ್ ನೋಡಿಯೇ ಬೆರಗಾಗಿದ್ದ. ಇವನ ಆಟದ ವಿಚಾರವನ್ನು ಗಂಭೀರ್ ಕಿವಿಗೆ ಎಸೆದಿದ್ದ. ಹುಡುಗ ದೆಹಲಿಗೆ‌‌ ಬೇಕಾಗುತ್ತಾನೆ ಅಂತ. ಆಗ ಇದೇ ಸೈನಿ ಕೇವಲ 200 ರೂಪಾಯಿಗೆ ಒಂದು ಟೆನಿಸ್ ಬಾಲ್‌ಮ್ಯಾಚ್ ಆಡುತ್ತಿದ್ದ.

ಗಂಭೀರ್, ಈ ಹುಡುಗನನ್ನ ಕರೆದು ಆಡು ಎಂದಿದ್ದ.‌ಅಷ್ಟೇ.  ಆದರೆ ದೆಹಲಿ ಕ್ರಿಕೆಟ್ ಮಂಡಳಿ ಸುಮ್ಮನಿರುತ್ತಾ. ಯಾಕಿರುತ್ತೆ? ಹರ್ಯಾಣದ ಗಲ್ಲಿ ಕ್ರಿಕೆಟರ್ ಅನ್ನ ನಾವ್ಯಾಕೆ‌ ಆಡಿಸಬೇಕು ಎಂದಿತ್ತು. ಗಂಭೀರ್‌ಗೆ ಅದೆಂತಾ ನಂಬಿಕೆ ಇತ್ತೋ ಗೊತ್ತಿಲ್ಲ. ಜಗಳವಾಡಿ ನೆಟ್ಸ್‌ನಲ್ಲಿ ಸೈನಿಯನ್ನು ಪ್ರಾಕ್ಟೀಸ್ ಮಾಡಿಸಿದ್ದ. ಗಂಭೀರ್, ಆಶಿಶ್ ನೆಹ್ರಾ, ಮಿಥುನ್ ಮನ್ಹಾಸ್ ಈ ಸೈನಿಯ ಹೆಗಲು ಕಾದರು.

ಇವನನ್ನು ತಂಡದಿಂದ ಆಚೆ ಹಾಕಲು ಡಿಡಿಸಿಎ ಅಧಿಕಾರಿಗಳು ಕರಪತ್ರ ಹಂಚಿದ್ದರೆಂದರೆ‌, ಅದೆಂತಹ ಕಿರಿಕಿರಿ ಇದ್ದಿರಬೇಡ. ಹುಡುಗ ಹರ್ಯಾಣದಿಂದ ಬಂದು ಬಿಟ್ಟಿದ್ದ. ಅಪ್ಪ ಸರಕಾರಿ ಕಾರು ಚಾಲಕ. ಮಧ್ಯಮ ವರ್ಗದ್ದೂ ಅಲ್ಲದ ಒಂದು ಕುಟುಂಬ. ಹಿಂದಿ ಮತ್ತು ಬೌಲಿಂಗ್ ಬಿಟ್ಟರೆ ಅವನಿಗೆ ಇನ್ನೇನೂ ಗೊತ್ತಿಲ್ಲ. ಅವನನ್ನ ಕಾದಿದ್ದು ಅವನ‌‌ ಭಯಂಕರ ವೇಗದ ಬೌಲಿಂಗ್ ಮಾತ್ರ. ಅದು ಬಂಗಾಳ ವಿರುದ್ಧದ ರಣಜಿ ಸೆಮಿಫೈನಲ್. ನೋಡು, ಈ ಮ್ಯಾಚ್‌ನಲ್ಲಿ ಚೆನ್ನಾಗಿ ಆಡಿದರೆ ಇಂಡಿಯಾಗೆ ಆಡಬಹುದು ಕಣೋ ಎಂದಿದ್ದ ಗಂಭೀರ್. ಸೈನಿ ನಿದ್ರೆ ಮಾಡಿದ್ದರೆ ಕೇಳಿ. ಸೆಮಿಫೈನಲ್‌ನಲ್ಲಿ ಬಂಗಾಳವನ್ನ ಅದ್ಯಾವ ಪರಿ ಕೆಡವಿ ಹಾಕಿದ್ದನೆಂದರೆ 79 ರನ್‌ ಕೊಟ್ಟು 7 ವಿಕೆಟ್ ಹಾರಿಸಿದ್ದ. ಬಂಗಾಳಕ್ಕೆ ಇವನ‌‌ ಬೌಲಿಂಗ್ ಅರ್ಥವಾಗುವಷ್ಟರಲ್ಲೇ ಸೈನಿ ಇತಿಹಾಸವಾಗಿದ್ದ.

ಹೇಗಿದ್ದ, ಹೇಗಾದ ಗೊತ್ತಾ ನವದೀಪ್ ಶೈನಿ..?

ಸೈನಿ ನೋಡೋಕೆ ಸಣಕಲು. 'ದಯವಿಟ್ಟು ಜಿಮ್‌ಗೆ ಹೋಗಿ ಮಾಂಸಖಂಡ‌ ಬೆಳೆಸಿಕೋ ಎಂದು ಮಾತ್ರ ಹೇಳಬೇಡಿ .‌ನಾನು ಸಣ್ಣಗಿರೋದಕ್ಕೇ ಕೈ ಹೇಳಿದಂತೆ, ಹೇಳಿದಷ್ಟು ತಿರುಗುತ್ತೆ' ಎಂದು ಬಿಟ್ಟಿದ್ದ ಗಂಭೀರ್‌ಗೆ. ತೀರಾ ಮೊನ್ನೆ‌ ಮೊನ್ನೆಯವರೆಗೂ ಕೋಟ್ಲಾದ‌ ಮುಬಾರಕ್ ಪುರದಲ್ಲಿ ಸ್ನೇಹಿತನ ಬಾಡಿಗೆ ಮನೆಯಲ್ಲಿದ್ದ. ಅವನ‌ ಹತ್ತಿರ ಕಾರ್ ಇಲ್ಲ. ಮನೆಗೆ ವಾಪಸ್ಸಾಗುವುದು ವೋಲ್ವೋ ಬಸ್ ನಲ್ಲೇ.

ಅವನ ತಾತನಿಗೆ ಸೈನಿ ಎಂದರೆ‌ ಪ್ರಾಣ. ನೂರು ವರ್ಷದ ತುಂಬು ಬದುಕಿನ ತಾತ ಅದು. ನಿಮಗೆ ಗೊತ್ತಿರಲಿ ಅವರ ಹೆಸರು ಕರಮ್‌ಸಿಂಗ್. ನೇತಾಜಿ ಸುಭಾಷ್ ಚಂದ್ರಬೋಸರ ಆಝಾ಼ದ್ ಹಿಂದ್ ಫೌಜ್ ನಲ್ಲಿ ಚಾಲಕ‌ರಾಗಿ ಸೇವೆ ಸಲ್ಲಿಸಿದವರು. ಜಪಾನ್ ನಲ್ಲಿ‌‌ ಬೋಸರೊಂದಿಗೆ ಹೆಜ್ಜೆ ಹಾಕಿದ ದಿಟ್ಟ. ಸ್ವಾತಂತ್ರ್ಯ ವೀರನ ಮನೆಯದು. ಸೈನಿ ಆಟ ಟೀವಿಯಲ್ಲಿ ಬರುತ್ತೆಂದರೆ ಅಜ್ಜ ಅಲುಗಾಡಿದರೆ ಕೇಳಿ.

ಆಗಸ್ಟ್ 3. 2019. ಸೈನಿ ಈ ದಿನಾಂಕವನ್ನ ಎಂದೂ ಮರೆಯಲಾರ. ವಿಂಡೀಸ್ ವಿರುದ್ಧದ T20 ಮ್ಯಾಚ್ ನಲ್ಲಿ 4 ಓವರ್ ನಲ್ಲಿ 3 ವಿಕೆಟ್ ಕಿತ್ತಿದ್ದ. ಔಟ್ ಮಾಡಿದ್ದು ಯಾರನ್ನ ಗೊತ್ತಾ? ನಿಕೋಲಸ್ ಪೂರನ್, ಶಿಮ್ರನ್ ಹೆಟ್ಮೇಯರ್ ಮತ್ತು ಕೀರನ್ ಪೊಲ್ಲಾರ್ಡ್. ಎಲ್ಲರೂ ಗಟ್ಟಿಗರೇ. ಅದಕ್ಕೆ ಸೈನಿ, ಶೈನ್ ಆಗಿದ್ದು. ಹುಡುಗ ಹಸಿದಿದ್ದ ಅಷ್ಟೇ. ರಾಯಲ್‌ ಚಾಲೆಂಜರ್ಸ್ ಬೆಂಗಳೂರಿಗೆ 2018 ರಿಂದ ಈ ಹುಡುಗ ಆಡುತ್ತಿದ್ದಾನೆ. ಈ ಬಾರಿ ಸೈನಿ ತುಂಬ ಪಳಗಿದಂತೆ ಕಾಣುತ್ತಿದ್ದಾನೆ. ವಿಕೆಟ್ ಗಳು ಕೊಡುವ ಆತ್ಮವಿಶ್ವಾಸ ಹಾಗಿರುತ್ತವೆ.

ಸೈನಿ ನೋಡೋಕೆ ನಾಟಿ ಹುಡುಗ. ಸಂಕೋಚ‌ ಜಾಸ್ತಿನೇ. ಟೀಂ ಇಂಡಿಯಾಗೆ ಆಡಬೇಕಾದರೂ ಯಾರೊಂದಿಗೂ ಹೆಚ್ಚು ಮಾತಿಲ್ಲ. ವಿಕೆಟ್ ಕಿತ್ತರೆ ಸರಿಯಾಗಿ ಸೆಲೆಬ್ರೇಟ್ ಮಾಡೋಕು ಬರಲ್ಲ. ಆದರೆ ಈಗಾಗಲೇ ಲಂಕಾ ವಿರುದ್ಧದ ನಡೆದ ಈ ವರ್ಷದ ಮೊದಲ ಟಿ20 ಸರಣಿಯಲ್ಲೇ ಪಂದ್ಯಶ್ರೇಷ್ಠ ಹಾಗೆ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.  ಇಂಗ್ಲಿಷ್ ಅವನ‌ ಸಂಕೋಚಕ್ಕೆ ಕಾರಣಾನಾ? ಗೊತ್ತಿಲ್ಲ. ಆದರೆ ಅವನ ಬೌಲಿಂಗ್, ಇದೇ‌ ಲಯದಲ್ಲಿ ಸಾಗಿದರೆ ಕನಿಷ್ಟ ಆರು ವರ್ಷ ವಿಶ್ವ ಕ್ರಿಕೆಟ್ ಅನ್ನ‌ ಬೆಚ್ಚಿ ಬೀಳಿಸಬಲ್ಲ. ಸಾಧಕನಾಗಲೂ ಬೆಳ್ಳಿ ಚಮಚದ ಊಟ ಮಾಡಬೇಕಿಲ್ಲ. ಹಸಿವಿದ್ದರೆ ಸಾಕು. ಅವನಿಗೊಂದು ತುಂಬು ಹೃದಯದ ಶುಭಾಶಯಗಳು.

ಒಳ್ಳೆಯದಾಗಲಿ ನವದೀಪ್ ಸೈನಿ.

click me!