ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಕೊಟ್ಟ ಎಬಿ ಡಿವಿಲಿಯರ್ಸ್..!

By Suvarna News  |  First Published Jan 15, 2020, 12:25 PM IST

2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್‌ ಬೈ ಹೇಳಿದ್ದ ಎಬಿ ಡಿವಿಲಿಯರ್ಸ್ ಇದೀಗ ಮುಂಬರುವ ಟಿ20 ವಿಶ್ವಕಪ್‌ ಟೂರ್ನಿ ವೇಳೆಗೆ ಹರಿಣಗಳ ಪಡೆ ಕೂಡಿಕೊಳ್ಳುವ ಸುಳಿವು ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ಸಿಡ್ನಿ(ಜ.15): ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯ​ರ್ಸ್ ನಿವೃತ್ತಿಯಿಂದ ಹೊರಬಂದು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಎಬಿಡಿ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ. 

ಮಂಗಳವಾರ ಬಿಗ್‌ಬ್ಯಾಶ್‌ ಲೀಗ್‌ಗೆ ಪಾದಾರ್ಪಣೆ ಮಾಡಿದ ಡಿವಿಲಿಯ​ರ್ಸ್ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದರು. ‘ವಿಶ್ವಕಪ್‌ನಲ್ಲಿ ಆಡಲು ಖಂಡಿತವಾಗಿಯೂ ಆಸೆ ಇದೆ. ನೂತನ ಕೋಚ್‌ ಬೌಷರ್‌, ನಿರ್ದೇಶಕ ಗ್ರೇಮ್‌ ಸ್ಮಿತ್‌ ಹಾಗೂ ನಾಯಕ ಡು ಪ್ಲೆಸಿ ಜತೆ ಮಾತುಕತೆ ನಡೆಸಿದ್ದೇನೆ. ಐಪಿಎಲ್‌ನಲ್ಲಿ ಪ್ರದರ್ಶನ ನೋಡಿಕೊಂಡು ನಿವೃತ್ತಿ ಹಿಂಪಡೆಯುವ ಬಗ್ಗೆ ನಿರ್ಧಾರಕೈಗೊಳ್ಳುತ್ತೇನೆ’ ಎಂದು ವಿಲಿಯ​ರ್ಸ್ ತಿಳಿಸಿದರು.

What a start to 's campaign.
▪ 40 runs
▪ 32 balls
▪ 5 boundaries
▪ These highlights ⬇ pic.twitter.com/tRDYL5zkCH

— KFC Big Bash League (@BBL)

Latest Videos

undefined

ಎಬಿಡಿ ನಿವೃತ್ತಿ ವಾಪಾಸ್ ವಿಚಾರ: ಕೊನೆಗೂ ಮೌನ ಮುರಿದ ಮಿ.360

2018ರ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳುವ ಮೂಲಕ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಜಗತ್ತನ್ನೇ ತಬ್ಬಿಬ್ಬುಗೊಳಿಸಿದ್ದರು. ಆದರೆ ಐಪಿಎಲ್ ಸೇರಿದಂತೆ ಆಯ್ದ ಕೆಲವು ಟಿ20 ಲೀಗ್‌ಗಳನ್ನು ಆಡಿದ್ದರು.  ಇದಾದ ಬಳಿಕ 2019ರ ಏಕದಿನ ವಿಶ್ವಕಪ್ ವೇಳೆ ನಿವೃತ್ತಿ ಹಿಂಪಡೆದು ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ತಾವು ಲಭ್ಯವಿರುವುದಾಗಿ ತಿಳಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಎಬಿಡಿಗೆ ಅವಕಾಶ ನೀಡಿರಲಿಲ್ಲ. ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರಿಣಗಳ ಹೀನಾಯ ಪ್ರದರ್ಶನ ತೋರುವುದರ ಮೂಲಕ ರೌಂಡ್ ರಾಬಿನ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. 

2019ನೇ ಐಪಿಎಲ್ ಆವೃತ್ತಿಯಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಪರ 13 ಪಂದ್ಯಗಳನ್ನಾಡಿ 5 ಅರ್ಧಶತಕ ಸಹಿತ 442 ರನ್ ಬಾರಿಸಿದ್ದರು. ಇನ್ನು ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ 40 ರನ್ ಹಾಗೂ 2 ಕ್ಯಾಚ್ ಹಿಡಿಯುವ ಮೂಲಕ ತಾವಿನ್ನು ಫಿಟ್ ಇದ್ದೇನೆ ಎನ್ನುವುದನ್ನು ಸಾರಿ ಹೇಳಿದ್ದಾರೆ.   

ಇದೀಗ ಎಬಿ ಡಿವಿಲಿಯರ್ಸ್ ಕಮ್‌ಬ್ಯಾಕ್ ವಿಚಾರ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಒಟ್ಟಿನಲ್ಲಿ ಎಬಿಡಿ ದಕ್ಷಿಣ ಆಫ್ರಿಕಾ ತಂಡ ಕೂಡಿಕೊಂಡಿದ್ದೇ ಆದರೆ ಆಸ್ಟ್ರೇಲಿಯಾದಲ್ಲಿ ರನ್ ಮಳೆ ಹರಿಯುವುದಂತೂ ಗ್ಯಾರಂಟಿ. 
 

click me!